ADVERTISEMENT

ಬಾರದ ಲೋಕಕ್ಕೆ ಸಾಂಸ್ಕೃತಿಕ ರಾಯಭಾರಿ

ಇ.ಎಸ್.ಸುಧೀಂದ್ರ ಪ್ರಸಾದ್
Published 12 ಮೇ 2018, 6:10 IST
Last Updated 12 ಮೇ 2018, 6:10 IST

ಧಾರವಾಡ: ಕರ್ನಾಟಕ ಸಾಂಸ್ಕೃತಿಕ ಲೋಕಕ್ಕೆ ರಾಯಭಾರಿಯಂತಿದ್ದ ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರ ಹಠಾತ್ ನಿಧನದಿಂದಾಗಿ ಇಡೀ ಸಾರಸ್ವತ ಲೋಕವೇ ಶೋಕಸಾಗರದಲ್ಲಿ ಮುಳುಗಿದೆ.

ಎಂದಿನಂತೆ ತಮ್ಮ ಸ್ಕೂಟರ್‌ ಮೇಲೆ ನಿತ್ಯ ಅಟ್ಟ (ಮನೋಹರ ಗ್ರಂಥಮಾಲೆ)ಕ್ಕೆ ಹೋಗಿ ಒಂದಷ್ಟು ಹೊತ್ತು ಸಾಹಿತ್ಯ ಚರ್ಚೆ ಮಾಡುತ್ತಿದ್ದ ಡಾ. ಗಿರಡ್ಡಿ, ಶುಕ್ರವಾರ ಆರೋಗ್ಯ ಸರಿ ಇಲ್ಲ ಎಂದು ನವೋದಯ ನಗರದಲ್ಲಿರುವ ಮನೆಯಲ್ಲೇ ಇದ್ದರು. ಅವರು ಇಹಲೋಕ ತ್ಯಜಿಸುವಾಗ ಮನೆಯಲ್ಲಿ ಯಾರೂ ಇರಲಿಲ್ಲ.

ಪತ್ನಿ ಸರೋಜಾ ಗಿರಡ್ಡಿ ಅವರು ಸಂಜೆ 4ಕ್ಕೆ ಮಾರುಕಟ್ಟೆಗೆ ಹೋಗಿದ್ದರು. ನಿದ್ರೆಯಿಂದ ಎದ್ದ ಗಿರಡ್ಡಿ ತಾವೇ ಚಹಾ ಮಾಡಿಕೊಂಡಿದ್ದರು. ಎಂದಿನಂತೆ ಮನೆಯ ಒಳಾಂಗಣದಲ್ಲಿದ್ದ ಸೋಫಾ ಮೇಲೆ ಕುಳಿತು ಚಹಾ ಹೀರಿದ್ದರು. ಈ ಹೊತ್ತಿಗೆ ಜವರಾಯ ಅವರನ್ನು ಆವರಿಸಿದ್ದ. ಪಾರಾಗಲು ಕ್ಷಣಕಾಲವೂ ಅವಕಾಶ ನೀಡದೆ, ಅವರನ್ನು ಮರಳಿ ಬಾರದ ಲೋಕಕ್ಕೆ ಕರೆದೊಯ್ದಿದ್ದ.

ADVERTISEMENT

ಸಂಜೆ 6.30ರ ಹೊತ್ತಿಗೆ ಮಾರುಕಟ್ಟೆಯಿಂದ ಸರೋಜಾ ಅವರು ಮನೆಗೆ ಬಂದಾಗ ಮನೆಯ ಬಾಗಿಲಿನಲ್ಲಿ ಎಂದಿನಂತೆ ಪೊಲೀಸರು (ಡಾ. ಗಿರಡ್ಡಿ ಅವರಿಗೆ ಭದ್ರತೆಗೆ ಇದ್ದ) ಕೂತಿದ್ದರು. ಮನೆಯನ್ನು ಪ್ರವೇಶಿಸಿದವರೇ, ಸೋಫಾ ಮೇಲೆ ಮಲಗಿದ ಸ್ಥಿತಿಯಲ್ಲಿದ್ದ ಗಿರಡ್ಡಿ ಅವರನ್ನು ಮಾತಾಡಿಸಿದರೂ ಮಾತನಾಡದಿದ್ದರಿಂದ ಗಾಬರಿಗೊಂಡ ಅವರು, ತಕ್ಷಣ ಸಹಾಯಕ್ಕಾಗಿ ಕೂಗಿದರು. ಮಲಗಿದ ಸ್ಥಿತಿಯಲ್ಲಿದ್ದ ಅವರ ಕೈಯಲ್ಲಿ ಚಹಾ ಕುಡಿದ ಲೋಟ ಹಾಗೇ ಇತ್ತು ಎಂದು ಪೊಲೀಸ್ ಕಾನ್‌ಸ್ಟೆಬಲ್ ರವಿ ತಿಳಿಸಿದರು.

ಸರೋಜಾ ಅವರು ತಕ್ಷಣ ತಮ್ಮ ಮಗ ಸುನಿಲ್ ಹಾಗೂ ಮನೋಹರ ಗ್ರಂಥಮಾಲೆಯ ಸಮೀರ್ ಜೋಶಿಗೆ ಸುದ್ದಿ ಮುಟ್ಟಿಸಿದರು. ಆಂಬುಲೆನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ, ಅದಾಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಕುಟುಂಬ ಮಾತ್ರವಲ್ಲ, ಧಾರವಾಡದ ಸಾರಸ್ವತ ಲೋಕವೇ ಶೋಕಸಾಗರದಲ್ಲಿ ಮುಳುಗಿತು.

ಗಿರಡ್ಡಿ ಅವರ ಮನೆಯತ್ತ ಧಾವಿಸಿದ ಅವರ ಒಡನಾಡಿಗಳು, ತೀವ್ರ ಕಂಬನಿ ಮಿಡಿದರು. ನಿನ್ನೆ, ಮೊನ್ನೆ ನೋಡಿದ್ದು ಅವರೊಂದಿಗೆ ಮಾತನಾಡಿದ್ದನ್ನು ಮೆಲುಕು ಹಾಕಿ ಕಣ್ಣೀರಾದರು. ಪತ್ನಿ ಸರೋಜಾ ಹಾಗೂ ಪುತ್ರಿ ಮುಕ್ತ ಪಾಟೀಲ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

ಹಿರಿಯ ಸಾಹಿತಿ ಡಾ. ಶಾಂತಾ ಇಮ್ರಾಪುರ ಹಾಗೂ ಅಕ್ಕ–ಪಕ್ಕದವರು ಸಮಾಧಾನ ಹೇಳಿದರು. ಮನೋಹರ ಗ್ರಂಥ ಮಾಲೆಯಲ್ಲಿ ನಿತ್ಯ ಎರಡು ಬಾರಿ ಕೂತು ಸಾಹಿತ್ಯ ಚರ್ಚೆ ನಡೆಸುತ್ತಿದ್ದ ಹ.ವೆಂ.ಕಾಖಂಡಿಕಿ ಅವರೂ ತೀವ್ರವಾಗಿ ಆಘಾತಕ್ಕೊಳಗಾಗಿದ್ದರು.

ಮಾತು ಹೊರಡದ ಸ್ಥಿತಿಯಲ್ಲೂ ತಮ್ಮೊಂದಿಗಿನ ಒಡನಾಟ ಹಂಚಿಕೊಂಡ ಅವರು, ‘ಆರು ದಶಕಗಳ ಒಡನಾಟದಲ್ಲಿ ಎಂದೂ ಯಾರನ್ನೂ ವೈಯಕ್ತಿಕವಾಗಿ ಟೀಕೆ ಮಾಡದ ದೊಡ್ಡ ಮನುಷ್ಯ ಅವರು. ಕೆಲಸ ಮಾಡುವವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು’
ಎಂದರು.

‘ಶ್ರೇಷ್ಠ ಕೃತಿಗಳನ್ನು ಏಕೆ ಪುನರ್ ಅವಲೋಕಿಸಬಾರದು ಎಂದು ಇತ್ತೀಚೆಗೆ ಹಲವು ಬಾರಿ ಹೇಳಿದ್ದರು. ಇತ್ತೀಚಿನ ದ್ವೇಷದ ದಿನಗಳಲ್ಲಿ ಸಮನ್ವಯತೆ, ಸ್ನೇಹದ ಮೂಲಕ ಎಲ್ಲವನ್ನೂ ಸಮಾನವಾಗಿ ಕಾಣುವುದನ್ನು ಎಂದು ಕಲಿಸಿದ ಗುರು ಅವರು’ ಎಂದು ಕಾಖಂಡಿಕಿ ಹೇಳಿದರು.

ಹಿರಿಯ ಕವಿ ಡಾ. ಚೆನ್ನವೀರ ಕಣವಿ, ‘ತೀವ್ರವಾಗಿ ದುಃಖಿತನಾಗಿದ್ದೇನೆ. ಏನು ಹೇಳಬೇಕೆಂದೇ ತೋಚುತ್ತಿಲ್ಲ. ನಾನು ಏನನ್ನೂ ಹೇಳದ ಸ್ಥಿತಿಯಲ್ಲಿದ್ದೇನೆ’ ಎಂದು ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.