ADVERTISEMENT

ಬಿಜೆಪಿಗೆ ನಮ್ಮ ಹಣ ಬೇಕಾಗಿತ್ತು: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 9:15 IST
Last Updated 6 ಜನವರಿ 2012, 9:15 IST

ಅಣ್ಣಿಗೇರಿ: ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಸಂಘಟಿಸಿ, ಅಧಿಕಾರಕ್ಕೆ ತರಲು ಕಷ್ಟ ಪಟ್ಟೆವು. ಆದರೆ ಬಿಜೆಪಿ ಮುಖಂಡರು ಲೋಕಾಯುಕ್ತ ವರದಿಯಲ್ಲಿ ತಮ್ಮ ಹೆಸರು ಸೇರಿಸುವ ಮೂಲಕ ಬೆನ್ನಿಗೆ ಚೂರಿ ಹಾಕಿದರು ಎಂದು ಶಾಸಕ ಬಿ. ಶ್ರೀರಾಮುಲು ವಿಷಾದ ವ್ಯಕ್ತಪಡಿಸಿದರು.

ಅಂಜುಮನ್ ಸಂಸ್ಥೆಯ ಶಾದಿ ಮಹಲ್‌ನಲ್ಲಿ ಅಭಿಮಾನಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. `ಬಿಜೆಪಿಗೆ ನಮ್ಮ ಹಣ ಬೇಕಾಗಿತ್ತು. ನಾವು ಬೇಕಾಗಿರಲಿಲ್ಲ. ಹಣ ತಂದಿದ್ದು ಎಲ್ಲಿಂದ ಎಂದು ಅವರು ಕೇಳಲಿಲ್ಲ. ಪಕ್ಷೇತರರ, ಬೇರೆ ಪಕ್ಷಗಳ ಶಾಸಕರ ಮನೆ ಬಾಗಿಲಿಗೆ ಹೋಗಿ ಬಿಜೆಪಿ ಸರಕಾರದ ಸಾಮ್ರೋಜ್ಯ ಸ್ಥಾಪನೆ ಮಾಡಿದೆವು. ಈಗ ನಾವು ಬೇಡವಾಗಿದ್ದೇವೆ~ ಎಂದು ಆರೋಪಿಸಿದರು.

ಬಿಜೆಪಿಗೆ ಸ್ವಂತ ಶಕ್ತಿ ಇದ್ದಿದ್ದರೆ ಬಳ್ಳಾರಿಯಲ್ಲಿ ಠೇವಣಿ ಕಳೆದುಕೊಳ್ಳುತ್ತಿರಲಿಲ್ಲ. ಬಾಬಾಬುಡನ್‌ಗಿರಿ ಸಮಸ್ಯೆಗೆ 10 ನಿಮಿಷದಲ್ಲಿ ಪರಿಹಾರವಿದೆ. ಅದು ಯಾರಿಗೂ ಬೇಕಾಗಿಲ್ಲ. ಬಿಜೆಪಿ ಮಾಡಿದ ಮೋಸದಿಂದ ನೋವಾಗಿದೆ. ದೆಹಲಿ ಮತ್ತು ಬೆಂಗಳೂರಿನ ಬಿಜೆಪಿ ಭ್ರಷ್ಟರು ಕಾಲೆಳೆಯುತ್ತಾರೆ. ಅವರಿಗೆ ಶ್ರೀರಾಮುಲು ಭಯ ಕಾಡುತ್ತಿರುವಂತಿದೆ ಎಂದರು.

ಧಾರವಾಡ ಜಿಲ್ಲೆ (ಗ್ರಾಮೀಣ) ಬಿಜೆಪಿ ಅಧ್ಯಕ್ಷ ಷಣ್ಮುಖಪ್ಪ ಗುರಿಕಾರ, ಮುಖಂಡ ಶಿವಯೋಗಿ ಲಿಂಬಿಕಾಯಿ, ಪುರಸಭೆ ಅಧ್ಯಕ್ಷ ಬಿಜೆಪಿಯ ಚಂದ್ರಶೇಖರ ಗಂಜಾಳ, ಅಂಜುಮನ್ ಅಧ್ಯಕ್ಷ ಬುಡ್ಡೇಶರೀಫ್ ನದೀಮುಲ್ಲಾ, ಉಪಾಧ್ಯಕ್ಷ ದಾವಲಸಾಬ ದರವಾನ್, ಕಾರ್ಯದರ್ಶಿ ಇಮಾಮಹುಸೇನ್ ಕೊಡ್ಲಿವಾಡ, ಖಜಾಂಚಿ ಜಂಗ್ಲಿಸಾಬ ಅಗಸಿಬಾಗಿಲ ಉಪಸ್ಥಿತರಿದ್ದರು.

6 ತಾಸು ವಿಳಂಬ
ಸಭೆ ನಿಗದಿಯಾದದ್ದು ಮಧ್ಯಾಹ್ನ 2.30ಕ್ಕೆ. ರಾಮುಲು ಬಂದಿದ್ದು ರಾತ್ರಿ 9ಕ್ಕೆ. ಅಭಿಮಾನಿಗಳು ಸುಮಾರು 6 ತಾಸು ಕಾಯ್ದರೂ ಉತ್ಸಾಹ ಕಡಿಮೆ ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.