ADVERTISEMENT

ಬಿಟಿ ಬದನೆ: ಆರೋಪಿಗಳಿಗೆ ಸಮನ್ಸ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 7:12 IST
Last Updated 24 ಡಿಸೆಂಬರ್ 2013, 7:12 IST

ಧಾರವಾಡ: ಬಿಟಿ ಬದನೆ ಬೀಜ ಸಂಶೋ­ಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ಕರಾರು ಉಲ್ಲಂಘನೆ ಆರೋಪದಡಿ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಕ್ರಿಮಿನಲ್‌ ಪ್ರಕರಣ­ದಲ್ಲಿ ಕೃಷಿ ವಿಶ್ವ­ವಿದ್ಯಾ­ಲಯ ಅಂದಿನ ಕುಲಪತಿಗಳಾದ ಡಾ.ಎಸ್‌.­ಎ.­ಪಾಟೀಲ, ಡಾ.ಆರ್‌.­ಆರ್‌.­ಹಂಚಿನಾಳ ಮತ್ತು ಪ್ರಭಾರ ಕುಲ­ಪತಿ ಡಾ.ಎಚ್‌.ಎಸ್‌.­ವಿಜಯ­­ಕುಮಾರ ಸೋಮವಾರ ನ್ಯಾಯಾ­ಲ­­ಯದಲ್ಲಿ ಹಾಜರಾದರು.

ಕೇಂದ್ರ ಸರ್ಕಾರದ ಜೈವಿಕ ತಂತ್ರ­ಜ್ಞಾನ ಇಲಾಖೆ ಎಬಿಪಿಎಸ್‌ ಯೋಜನೆ­ಯಡಿ ಬಿಟಿ ಬದನೆ ಬೀಜ, ತಳಿ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುಮತಿ ನೀಡಿತ್ತು. 2005­ರಲ್ಲಿ ಇಲ್ಲಿನ ಕೃಷಿ ವಿಶ್ವವಿದ್ಯಾ­ಲಯ ಮಹಿಕೋ ಮತ್ತು ಸದ್ಗುರು ಮ್ಯಾನೇಜ್‌­ಮೆಂಟ್‌ ಕನ್ಸ­ಲ್ಟಂಟ್‌ ಲಿ. ಜೊತೆ ಒಡಂಬಡಿಕೆಗೆ ಸಹಿ ಹಾಕಿತ್ತು. ಕೆಲಸವೂ ನಡೆದಿತ್ತು.

ಕೃಷಿ ವಿಶ್ವವಿದ್ಯಾಲಯ ಒಡಂಬಡಿಕೆ ಉಲ್ಲಂಘನೆ ಮಾಡಿದೆ. ಜೀವ ವೈವಿಧ್ಯ ಕಾಯ್ದೆ 2002ರ ಕಲಂ ಕಾಯ್ದೆ ಮೂರು ಮತ್ತು ನಾಲ್ಕನ್ನು ಉಲ್ಲಂಘಿಸಿದೆ ಎಂದು 2012 ನವೆಂಬರ್‌ 24ರಂದು ರಾಷ್ಟ್ರೀಯ ಜೈವಿಕ ವೈವಿಧ್ಯ ಪ್ರಾಧಿಕಾರ, ಕೃಷಿ ವಿಶ್ವವಿದ್ಯಾಲಯ, ಅಂದಿನ ಕುಲಪತಿ ಮತ್ತು ಇತರರ ವಿರುದ್ಧ ಖಾಸಗಿ ದೂರು ದಾಖಲಿಸಿತ್ತು. ನ್ಯಾಯಾ­ಲಯ ಆರೋಪಿ­ಗಳಿಗೆ ಸಮನ್ಸ್‌ ಜಾರಿ ಮಾಡಿತ್ತು. ವಿಚಾ­ರಣಾ ಪ್ರಕ್ರಿಯೆ ಅನೂರ್ಜಿ­ತಗೊಳಿಸು­ವಂತೆ ಕೋರಿ ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಜಾಗೊಂಡಿತ್ತು.

ಈ ಮಧ್ಯೆ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದ ಆರೋಪಿಗಳು ಸೋಮವಾರ ನ್ಯಾಯಾ­ಲ­ಯದ ಮುಂದೆ ಹಾಜರಾಗಿ ಆರೋ­ಪಿಗಳು ಜಾಮೀನು ಷರತ್ತುಗಳನ್ನು ಪೂರೈಸಿದರು. ಅದನ್ನು ಸ್ವೀಕರಿಸಿದ ನ್ಯಾಯಾಲಯ ಉಳಿದ ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿ ಆದೇಶ ಹೊರಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.