ADVERTISEMENT

ಬೀಗ ತೆರವುಗೊಳಿಸಲು ಹೈಕೋರ್ಟ್‌ ಆದೇಶ

ನಗರಸಭೆ ಮಾಲೀಕತ್ವದ ಅಂಗಡಿಗಳ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 7:29 IST
Last Updated 27 ಮಾರ್ಚ್ 2018, 7:29 IST

ಧಾರವಾಡ: ಬಾಗಲಕೋಟೆ ಕಾಟನ್‌ ಮಾರುಕಟ್ಟೆಯಲ್ಲಿರುವ ನಗರಸಭೆ ಮಾಲೀಕತ್ವದ ಅಂಗಡಿಗಳಿಗೆ ಹಾಕಿದ್ದ ಬೀಗಗಳನ್ನು ತೆರವುಗೊಳಿಸಿ, ಬಾಡಿಗೆದಾರರಿಗೆ ವಹಿವಾಟು ನಡೆಸಲು ಅವಕಾಶ ನೀಡುವಂತೆ ಇಲ್ಲಿನ ಹೈಕೋರ್ಟ್‌ ನಗರಸಭೆಗೆ ನಿರ್ದೇಶಿಸಿದೆ.

ಕಾಟನ್‌ ಮಾರುಕಟ್ಟೆಯಲ್ಲಿರುವ ಮಳಿಗೆಗಗಳನ್ನು 2011ರಲ್ಲಿ ಬಾಡಿಗೆ ಆಧಾರದಲ್ಲಿ ನೀಡಲಾಗಿತ್ತು. ಈ ಅವಧಿ 2016 ರ ಮಾರ್ಚ್‌ನಲ್ಲಿ ಕೊನೆಗೊಂಡಿತ್ತು. ಈ ಗುತ್ತಿಗೆ ನವೀಕರಣ ಮಾಡದೆ ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಈ ಆದೇಶ ಪ್ರಶ್ನಿಸಿ ಅಂಗಡಿ ಮಾಲೀಕರು ಬೆಳಗಾವಿ ವಿಭಾಗಾಧಿಕಾರಿ ಎದುರು ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ವಿಭಾಗಾಧಿಕಾರಿ ಜಿಲ್ಲಾಧಿಕಾರಿ ಆದೇಶ ಎತ್ತಿ ಹಿಡಿದಿದ್ದರು.

ಈ ಎರಡೂ ಆದೇಶಗಳನ್ನು ಪ್ರಶ್ನಿಸಿ ಎಸ್‌.ಎಸ್‌.ಕುಮಟಗಿ ಮತ್ತು ಇತರರು ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ರಿಟ್‌ ಅರ್ಜಿಯಲ್ಲಿ ನ್ಯಾಯಪೀಠ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಇದೇ ಪ್ರಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ಬೀಗ ತೆರವುಗೊಳಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ADVERTISEMENT

ಅಲ್ಲದೇ ಹಿಂದೆ ಅಂಗಡಿ ಬೀಗ ತೆರವುಗೊಳಿಸುವ ಸಂದರ್ಭದಲ್ಲಿ ಅಂಗಡಿ ಮಾಲೀಕರು ಮತ್ತು ಅಧಿಕಾರಿಗಳ ನಡುವೆ ಗಲಾಟೆ ನಡೆದು ಅಂಗಡಿ ಮಾಲೀಕರ ವಿರುದ್ಧ ಅಧಿಕಾರಿಗಳು ದೂರು ಸಲ್ಲಿಸಿದ್ದರು. ದೂರು ಮತ್ತು ಎಫ್‌ಐಆರ್‌ ಅನೂರ್ಜಿತಗೊಳಿಸುವಂತೆ ಕೋರಿ ಅಂಗಡಿ ಮಾಲೀಕರು ಕ್ರಿಮಿನಲ್‌ ಅರ್ಜಿ ದಾಖಲಿಸಿದ್ದರು. ಆ ಅರ್ಜಿ ಕೂಡಾ ಸೋಮವಾರ ವಿಚಾರಣೆ ನಡೆಯಿತು.

ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ನ್ಯಾಯಪೀಠ ಮಳಿಗೆಗಳಿಗೆ ಹಾಕಿರುವ ಬೀಗ ತೆರವುಗೊಳಿಸಬೇಕು. ಅಂಗಡಿ ಮಾಲೀಕರಿಗೆ ವಹಿವಾಟು ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿ, ಅರ್ಜಿ ಇತ್ಯರ್ಥಗೊಳಿಸಿದರು. ಕ್ರಿಮಿನಲ್‌ ಅರ್ಜಿಯಲ್ಲಿ ದೂರು ಮತ್ತು ಎಫ್‌ಐಆರ್‌ ಅನೂರ್ಜಿತಗೊಳಿಸಿ ಆದೇಶ ನೀಡಿತು.

ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಮತ್ತು ಬಸವರಾಜ ಗೊಡಚಿ ವಕಾಲತ್ತುವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.