ADVERTISEMENT

ಬೆಳೆ ವಿಮೆ: ಪ್ರಚಾರ ವಾಹನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 7:17 IST
Last Updated 16 ಜುಲೈ 2013, 7:17 IST

ಧಾರವಾಡ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಜಾರಿಗೊಂಡಿರುವ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಂಚರಿಸಲಿರುವ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಮ್ಮ ಕಚೇರಿ ಆವರಣದಲ್ಲಿ ಸೋಮವಾರ ಚಾಲನೆ ನೀಡಿ, ರೈತರಿಗೆ ವಿಮೆ ಮಾಹಿತಿಯ ಕರಪತ್ರ ವಿತರಿಸಿದರು.

ಇಡೀ ರಾಷ್ಟ್ರದ ಏಳು ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಆಯ್ದುಕೊಂಡು ಅಲ್ಲಿನ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಕುರಿತು ಹೆಚ್ಚಿನ ಜಾಗೃತಿ ಹಾಗೂ ಅರಿವು ಮೂಡಿಸಲು ಉದ್ದೇಶಿಸಿದ್ದು, ಅದರಲ್ಲಿ ಧಾರವಾಡ ಜಿಲೆಯೂ ಒಂದಾಗಿದೆ.

ಜಿಲ್ಲೆಯಲ್ಲಿ 1.32 ಲಕ್ಷ ರೈತರ ಪೈಕಿ ಕನಿಷ್ಟ ಶೇ 80ರಷ್ಟು ರೈತರು ಹವಾಮಾನ ಆಧಾರಿತ ಬೆಳೆ ವಿಮೆಗೆ ಒಳಪಡಬೇಕು ಎನ್ನುವ ಗುರಿ ಹೊಂದಲಾಗಿದೆ. ಜಿಲ್ಲೆಯ 14 ಹೋಬಳಿಗಳಲ್ಲಿ ಬೆಳೆಯುವ 11 ಮುಖ್ಯ ಬೆಳೆ ಒಳಗೊಂಡ ಈ ವಿಮೆಗೆ ರೈತರು ಕಂತು ಕಟ್ಟಲು ಜುಲೈ 31 ಕೊನೆಯ ದಿನವಾಗಿದೆ. ಬೆಳೆಸಾಲ ಪಡೆದವರಿಗಿದು ಕಡ್ಡಾಯವಾಗಿದೆ.

ಬೆಳೆಸಾಲ ಪಡೆಯದ ರೈತರು ಕೂಡಾ ಈ ವಿಮೆ ಲಾಭ ಹೊಂದಲು ಮುಂದಾಗಬೇಕು. ಕೊನೆಯ ದಿನ ಜುಲೈ 31ರವರೆಗೂ ಕಾಯದೇ ಮುಂಚಿತವಾಗಿ ರೈತರು ಅವಶ್ಯಕ ದಾಖಲೆ ನೀಡಿ ಕಂತು ಕಟ್ಟಿ ಹವಾಮಾನ ಆಧಾರಿತ ಬೆಳೆ ವಿಮೆಗೆ ಮುಂದಾಗಲು ಶುಕ್ಲಾ ಎಲ್ಲ ರೈತರಿಗೆ ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂ. ಆಫ್ ಇಂಡಿಯಾದ ಆಡಳಿತಾಧಿಕಾರಿ ಪ್ರವೀಣಕುಮಾರ್, ಸಹಾಯಕ ಕೃಷಿ ಅಧಿಕಾರಿ ಎಂ.ಎಂ.ಮೂಡಲಗೇರಿ, ಕೃಷಿ ತಾಂತ್ರಿಕ ಅಧಿಕಾರಿ ಕಟ್ಟೇಗೌಡ್ರ ಅವರು ಹಾಜರಿದ್ದರು.

ಯೋಜನೆಯ ವ್ಯಾಪ್ತಿಯ ಬೆಳೆಗಳು: ಮಳೆಯಾಶ್ರಿತ ಜೋಳ, ಮುಸುಕಿನ ಜೋಳ, ಉದ್ದು, ತೊಗರಿ, ಹೆಸರು, ಸೋಯಾ ಅವರೆ, ನೆಲಗಡಲೆ, ಆಲೂಗಡ್ಡೆ ಹಾಗೂ ಹತ್ತಿ ಮಳೆಯಾಶ್ರಿತ ಹಾಗೂ ನೀರಾವರಿ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಕುರಿತು ಕಟ್ಟಲು ಈ ತಿಂಗಳ 31 ಕೊನೆಯ ದಿನವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.