ADVERTISEMENT

ಭೂ ಮಾಫಿಯಾ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 7:22 IST
Last Updated 16 ಜೂನ್ 2017, 7:22 IST
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಚಂದನ ಕಾಲೊನಿ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಚಂದನ ಕಾಲೊನಿ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಪುನರ್‌ವಸತಿ ಕಲ್ಪಿಸಬೇಕು ಹಾಗೂ ಭೂ ಮಾಫಿಯಾದವರಿಂದ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ಚಂದನ ಕಾಲೊನಿ ನಿವಾಸಿಗಳು ಸ್ಲಂ ಜನಾಂದೋಲನ ಹುಬ್ಬಳ್ಳಿ ತಾಲ್ಲೂಕು ಘಟಕದ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್‌ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸ್ಲಂ ಜನಾಂದೋಲನ ಸಂಘಟನೆಯ ಹುಬ್ಬಳ್ಳಿ ಘಟಕದ ಸಂಚಾಲಕಿ ಶೋಭಾ ಕಮತರ ಮಾತನಾಡಿ, ‘ಹುಬ್ಬಳ್ಳಿಯ ಆನಂದನಗರ ರಸ್ತೆಯಲ್ಲಿರುವ ಚಂದನ ಕಾಲೊನಿಯಲ್ಲಿ 140 ಕುಟುಂಬಗಳು,  37 ಗುಂಟೆ ಜಾಗದಲ್ಲಿ ಮೂಲ ಮಾಲೀಕರಿಂದ ಸಾವಿರಾರು ರೂಪಾಯಿ ನೀಡಿ ಮನೆ ಖರೀದಿ ಮಾಡಿ, 20–25 ವರ್ಷಗಳಿಂದ ವಾಸಿಸುತ್ತ ಬಂದಿದ್ದೇವೆ.

ಪಾಲಿಕೆಗೆ ಆಸ್ತಿ ತೆರಿಗೆಯನ್ನೂ ಕಟ್ಟಿದ್ದೇವೆ. ಆದರೆ, ಗೂಂಡಾಗಳು ಇದ್ದಕ್ಕಿದ್ದಂತೆ ಬಂದು ಜೆ.ಸಿ.ಬಿ ಮೂಲಕ ನಮ್ಮ ಮನೆಗಳನ್ನು ನೆಲಸಮಗೊಳಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಮಹಾದೇವಿ ಮಹಾಂತೇಶ ಬಯ್ಯಣ್ಣವರ ಎಂಬುವವರು ಗೂಂಡಾ­ಗಳ ಜೊತೆಗೆ ಬಂದು ಜೆ.ಸಿ.ಬಿ ಯಿಂದ ಮನೆಗಳನ್ನು ನೆಲಸಮ­ಗೊಳಿಸಿದ್ದಾರೆ. ಈ ಸಂಬಂಧ ಪ್ರಕರಣದ ನ್ಯಾಯಾಲಯ­ದಲ್ಲಿದ್ದರೂ, ಪೊಲೀಸರ ಸಮಕ್ಷಮದಲ್ಲಿ ದಾಳಿ ಮಾಡಿದ್ದಾರೆ. ಬಾಣಂತಿಯರು, ವೃದ್ಧರು, ಚಿಕ್ಕಮಕ್ಕಳು ಬೀದಿ ಪಾಲಾಗಿದ್ದಾರೆ. ಈ ಕೃತ್ಯವನ್ನು ತಡೆಯಲು ಬಂದವರಿಗೆ ಜೀವಬೆದರಿಕೆ ಹಾಕಿದ್ದಾರೆ’ ಎಂದು ಶೋಭಾ ದೂರಿದರು.

‘ಸ್ಥಳೀಯ ಪೊಲೀಸರು ನಮಗೆ ರಕ್ಷಣೆ ನೀಡಲು ವಿಫಲರಾಗಿದ್ದಾರೆ. ಮನೆ ಕಳೆದಕೊಂಡವರು ಸ್ಮಶಾನದಲ್ಲಿ ಆಶ್ರಯ ಪಡೆದಿದ್ದಾರೆ. ನಿವಾಸಿಗಳ ಮೇಲೆ ಹಲ್ಲೆ ಮಾಡಿದವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಹಾಗೂ ಸ್ಥಳೀಯ ನಿವಾಸಿಗಳಿಗೆ ರಕ್ಷಣೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಇಮ್ತಿಯಾಜ್‌ ಮಾನ್ವಿ, ಬಿ.ಎ. ಮುಧೋಳ, ಎ.ಎಸ್. ಪೀರ್‌ಜಾದೆ, ಅಶೋಕ, ತಿಪ್ಪಣ್ಣ ಪವಾರ್‌, ಮಹ್ಮದ್‌­ರಫೀಕ್‌ ಬೆಟಗೇರಿ ಹಾಗೂ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಂಚಾರ ದಟ್ಟಣೆ ಬಿಸಿ !
ಪ್ರತಿಭಟನಾ ಮೆರವಣಿಗೆ­ಯನ್ನು ಬೆಳಿಗ್ಗೆ 11ಕ್ಕೆ ಪ್ರಾರಂಭಿಸು­ವುದಾಗಿ ಸಂಘಟನೆ ಹೇಳಿತ್ತು. 12.20ಕ್ಕೆ ಪ್ರಾರಂಭವಾಯಿತು. ಅಂಬೇಡ್ಕರ್‌ ವೃತ್ತದ ಬಳಿಯ ರಸ್ತೆ ಬದಿ ನೂರಾರು ಜನ ತಾಸುಗಟ್ಟಲೇ ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಯೂ ಜಮಾಯಿಸಿ ಪ್ರತಿಭಟಿಸಿದ್ದರಿಂದ ವಾಹನ ಸವಾರರು ತೊಂದರೆಗೀಡಾದರು.

ಪ್ರತಿಭಟನೆಗೆ ಬರುವ ಸಂಘಟನೆಗಳವರಿಗೆ ‘ಸಂಚಾರಕ್ಕೆ ಅಡ್ಡಿಯಾಗುತ್ತದೆ ರಸ್ತೆಯಲ್ಲಿ ಬಹಳ ಸಮಯ ನಿಲ್ಲಬೇಡಿ ಎಂದು ಹೇಳಿದರೆ, ನಮ್ಮ ವಿರುದ್ಧ ಪೊಲೀಸರು ದಬ್ಬಾಳಿಕೆ ಮಾಡುತ್ತಾರೆಂದು ಆರೋಪಿಸು­ತ್ತಾರೆ. ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆ­ಯಾಗುತ್ತದೆ ಎಂದು ಹೇಳಿದರೂ ಕೇಳುವುದಿಲ್ಲ’ ಎಂದು ಸಂಚಾರ ಪೊಲೀಸರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.