ಧಾರವಾಡ: `ಮಕ್ಕಳಲ್ಲಿ ಅನೇಕ ಕೌಶಲಗಳು ಹಾಗೂ ಪ್ರತಿಭೆಗಳು ಅಡಗಿರುತ್ತವೆ. ಆದರೆ, ಅವುಗಳನ್ನು ಹತ್ತಿಕ್ಕುವ ಹುನ್ನಾರ ಪಾಲಕರಿಂದಾಗುತ್ತಿದೆ~ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ರಂಗ ಸಮಾಜದ ವತಿಯಿಂದ ಬುಧವಾರ ಆಯೋಜಿಸಿದ್ದ ಧಾರಸ ಮಕ್ಕಳ ರಂಗ ಶಿಕ್ಷಣ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿ ಎಂಬ ಮೂರು ಶಕ್ತಿಗಳು ಮಕ್ಕಳಲ್ಲಿ ಇದ್ದೇ ಇರುತ್ತವೆ. ಅವುಗಳನ್ನು ಹೊರತರುವ ಕೆಲಸ ಪಾಲಕರಿಂದ ಆಗಬೇಕು.
ಆದರೆ ಪಾಲಕರು ಮಕ್ಕಳನ್ನು ಕೇವಲ ಶಿಕ್ಷಣಕ್ಕೋಸ್ಕರ ಸೀಮಿತಗೊಳಿಸುತ್ತಿದ್ದಾರೆ. ಶಿಕ್ಷಣದ ಜೊತೆ ಜೊತೆಗೆ ರಂಗಭೂಮಿಯ ಕಡೆಗೆ ಮಕ್ಕಳು ಆಸಕ್ತಿ ವಹಿಸುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಧಾರಸ ಮಕ್ಕಳ ರಂಗ ಶಿಕ್ಷಣ ಕೇಂದ್ರವು ಜನ್ಮ ತಳೆದಿದ್ದು, ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು~ ಎಂದರು.
`ಪ್ರತಿಯೊಬ್ಬ ಮಗುವಿನಲ್ಲಿ ಸೃಜನಶೀಲತೆಯನ್ನು ಗುರುತಿಸುವಂತ ಕೆಲಸ ಪ್ರತಿಯೊಬ್ಬ ಪಾಲಕರಿಂದಾಗಬೇಕಿದೆ. ಈ ನಿಟ್ಟಿನಲ್ಲಿ ರಂಗ ಸಮಾಜ ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ~ ಎಂದು ರಂಗ ಸಮಾಜದ ಅಧ್ಯಕ್ಷ ಡಾ.ಶ್ರೀಶೈಲ ಹುದ್ದಾರ ತಿಳಿಸಿದರು.
ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಕಾರ್ಯದರ್ಶಿ ಅನಿಲ ದೇಸಾಯಿ, ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಇದ್ದರು. ಧಾರಸ ಮಕ್ಕಳ ರಂಗ ಶಿಕ್ಷಣ ಕೇಂದ್ರದ ಸಂಚಾಲಕ ಲಕ್ಷ್ಮಣ ಪೀರಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ.ವೈ.ಎಂ.ಭಜಂತ್ರಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.