ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಕಾಟವೆ ಗಾರ್ಡನ್‌ನಲ್ಲಿ ಮದ್ಯದಂಗಡಿ ಆರಂಭಿಸುವ ವಿವಾದಕ್ಕೆ ಸಂಬಂಧಪಟ್ಟ ಪ್ರಕರಣವನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ತಿಳಿಸಿದ್ದಾರೆ.
ಕಾಟವೆ ಗಾರ್ಡನ್‌ನಲ್ಲಿ ಮದ್ಯ ದಂಗಡಿ ಆರಂಭಿಸಲು ಸಿದ್ಧತೆ ನಡೆದಿರುವುದನ್ನು ಗಮನಿಸಿದ ಗ್ರೀನ್ ಗಾರ್ಡನ್, ಶಿವಪುರ ಕಾಲೊನಿ ಹಾಗೂ ರಾಜಧಾನಿ ಕಾಲೊನಿ ನಿವಾಸಿಗಳು ಪ್ರತಿಭಟನೆಗೆ ಸಜ್ಜಾಗಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ಕಳೆದ ಶನಿವಾರ ಸಂಜೆ ಸ್ಥಳದಲ್ಲೇ ಸಭೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಿದ್ದು. ಮಾರ್ಚ್ 1ರಂದು ಈ ಸಂಬಂಧ ಅಂತಿಮ ಆದೇಶ ಹೊರಡಿಸುವುದಾಗಿ ಅವರು ಅಂದು ತಿಳಿಸಿದ್ದರು.
ಈ ಕುರಿತು ಗುರುವಾರ ಆಯುಕ್ತರನ್ನು `ಪ್ರಜಾವಾಣಿ~ ಮಾತನಾಡಿಸಿದಾಗ, ಮುಂದಿನ ಕ್ರಮವನ್ನು ಕೈಗೊಳ್ಳುವುದಕ್ಕಾಗಿ ಪ್ರಕರಣವನ್ನು ಅಬಕಾರಿ ಇಲಾಖೆಯ ಉಪ ಆಯುಕ್ತರಿಗೆ ಹಸ್ತಾಂತರ ಮಾಡಿರುವುದಾಗಿ ತಿಳಿಸಿದರು.
`ಮದ್ಯದಂಗಡಿ ಆರಂಭಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಸಲ್ಲಿಸಿದ ಅರ್ಜಿಯಲ್ಲಿ ಹೇಳಿರುವ ಆಕ್ಷೇಪಗಳಿಗೆ ಉತ್ತರಿಸಲು 1967ರ ಅಬಕಾರಿ ಲೈಸೆನ್ಸ್‌ಗೆ ಸಂಬಂಧಿಸಿದ ಸಾಮಾನ್ಯ ಕಾಯ್ದೆಯ ನಿಯಮ 5 (2ಎ) ಪ್ರಕಾರ ಇಲಾಖೆಯ ಉಪ ಆಯುಕ್ತರೇ ಜವಾಬ್ದಾರಿಯುತ ವ್ಯಕ್ತಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಅವರ ಸುಪರ್ದಿಗೆ ಒಪ್ಪಿಸಲಾಗಿದೆ~ ಎಂದು ಅವರು ತಿಳಿಸಿದರು.
`ಪ್ರಕರಣವನ್ನು ಉಪ ಆಯುಕ್ತರಿಗೆ ವಹಿಸಲಾಗಿದ್ದರೂ ಮದ್ಯದಂಗಡಿ ಆರಂಭಿಸಲು ಬಿಡಬಾರದೆಂದು ಆಗ್ರಹಿಸಿ ನಿವಾಸಿಗಳು ಮಾಡಿರುವ ಮನವಿಯ ಹಿನ್ನೆಲೆಯಲ್ಲಿ ಹೊರಡಿಸಿರುವ ಪಾಲಿಕೆಯ ಆದೇಶ ಮುಂದುವರಿಯಲಿದೆ~ ಎಂದು ಅವರು ಸ್ಪಷ್ಟಪಡಿಸಿದರು.
ಶಾಂತಿಪ್ರಿಯರ ಪ್ರದೇಶವಾದ ಇಲ್ಲಿ ಅನೇಕ ಕಲ್ಯಾಣ ಮಂಟಪಗಳು ಇವೆ. ಮೂರು ಪ್ರಮುಖ ಕಾಲೊನಿಗಳಿಗೆ ಇದು ಮುಖ್ಯರಸ್ತೆ. ಇಲ್ಲಿನ ಹಲವಾರು ಕಟ್ಟಡಗಳಲ್ಲಿ ವಿವಿಧ ಸಾಂಸ್ಕೃತಿಕ, ಸಾಹಿತ್ಯಕ, ಕ್ರೀಡಾ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ.
ಇಂಥ ಪ್ರದೇಶದಲ್ಲಿ ಬಾರ್ ಆರಂಭವಾದರೆ ಅನೇಕ ಬಗೆಯ ಸಮಸ್ಯೆಗಳು ತಲೆದೋರಲಿವೆ ಎಂದು ಹೇಳಿ ಮೂರು ಕಾಲೊನಿಗಳ ನಿವಾಸಿಗಳ ಸಂಘ, ಕರಿಯಮ್ಮ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಪಾಲಿಕೆ ತಮಗೆ ಪೂರಕವಾದ ಆದೇಶವನ್ನು ಹೊರಡಿಸದಿದ್ದರೆ ಮಾರ್ಚ್ 2ರಿಂದ ಉಗ್ರ ಹೋರಾಟ ಮಾಡುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.