ADVERTISEMENT

ಮನೆ ಬೀಗ ಮುರಿದು ಆಭರಣ-ನಗದು ಕಳವು

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 10:22 IST
Last Updated 1 ಜೂನ್ 2013, 10:22 IST

ಹುಬ್ಬಳ್ಳಿ: ಮನೆ ಬೀಗ ಮುರಿದು ರೂ1,40 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಇಲ್ಲಿನ ಹಳೇಹುಬ್ಬಳ್ಳಿಯ ಕವಳೇಕರ ಪ್ಲಾಟ್‌ನಲ್ಲಿ ನಡೆದಿದೆ.

ಕವಳೇಕರ ಪ್ಲಾಟ್ ನಿವಾಸಿ ಸಾಹಿರಾ ಅಬ್ದುಲ್ ಸತ್ತಾರ ಗರಗ ಎಂಬುವವರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮನೆ ಬೀಗ ಹಾಕಿಕೊಂಡು ಕುಟುಂಬದ ಸದಸ್ಯರೊಂದಿಗೆ ಮೂರು ದಿನಗಳ ಹಿಂದೆ ಪುಣೆಯಲ್ಲಿರುವ ಸಹೋದರಿ ಮನೆಗೆ ತೆರಳಿದ್ದು ಈ ಸಂದರ್ಭದಲ್ಲಿ ಕಳವು ನಡೆದಿದೆ.

ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿರುವ ಕಳ್ಳರು ಮೂರು ಬಂಗಾರದ ಸರ, ಕಿವಿಯೋಲೆ, ಉಂಗುರ ಹಾಗೂ ಆರು ಸಾವಿರ ರೂಪಾಯಿ ನಗದು ಕದ್ದೊಯ್ದಿದ್ದಾರೆ. ಪುಣೆಯಿಂದ ವಾಪಸ್ ಬಂದಾಗ ಕಳವು ನಡೆದಿರುವುದು ಗೊತ್ತಾಗಿದೆ.

ಸುದ್ದಿ ತಿಳಿದು ಎಸಿಪಿ ಜಿ.ಎಂ.ದೇಸೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.