ADVERTISEMENT

ಮಹದಾಯಿ: ಶಾ ಹೇಳಿಕೆ ಮೂರ್ಖತನದ್ದು

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 10:43 IST
Last Updated 2 ಮಾರ್ಚ್ 2018, 10:43 IST
ಹುಬ್ಬಳ್ಳಿಯ ಭೈರಿದೇವರಕೊಪ್ಪದ ಮಾಯಕಾರ ಕಾಲೊನಿಯಲ್ಲಿರುವ ನಿವಾಸದಲ್ಲಿ ಗುರುವಾರ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಶಾಸಕ ಎನ್‌.ಎಚ್‌.ಕೋನರಡ್ಡಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಆಲ್ತಾಫ್‌ ಕಿತ್ತೂರ ಇದ್ದರು
ಹುಬ್ಬಳ್ಳಿಯ ಭೈರಿದೇವರಕೊಪ್ಪದ ಮಾಯಕಾರ ಕಾಲೊನಿಯಲ್ಲಿರುವ ನಿವಾಸದಲ್ಲಿ ಗುರುವಾರ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಶಾಸಕ ಎನ್‌.ಎಚ್‌.ಕೋನರಡ್ಡಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಆಲ್ತಾಫ್‌ ಕಿತ್ತೂರ ಇದ್ದರು   

ಹುಬ್ಬಳ್ಳಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದವನ್ನು ಪರಿಹರಿಸಲಿದೆ ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ಅವರು, ಜನರನ್ನು ದಾರಿ ತಪ್ಪಿಸಲು ಮೂರ್ಖತನದ ಹೇಳಿಕೆ ನೀಡಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

ಮಹದಾಯಿ ವಿಷಯದಲ್ಲಿ ಶಾ ನೀಡಿರುವ ಹೇಳಿಕೆಯನ್ನು ಉತ್ತರ ಕರ್ನಾಟಕದ ಪ್ರಜ್ಞಾವಂತ ಜನರು, ರೈತರು ಸೂಕ್ಷ್ಮ ಮತ್ತು ಎಚ್ಚರಿಕೆಯಿಂದ ಗಮನಿಸಬೇಕು ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು.

ಮಹದಾಯಿ ವಿವಾದದ ಕುರಿತು ನ್ಯಾಯಮಂಡಳಿಯಲ್ಲಿ ಈಗಾಗಲೇ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಬರುವ ದಿನಗಳು ಹತ್ತಿರವಾಗಿವೆ. ಇಂತಹ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದರೆ ವಿವಾದ ಬಗೆಹರಿಸುತ್ತೇವೆ ಎಂಬ ಮಾತಿಗೆ ಅರ್ಥವಿಲ್ಲ ಎಂದರು.

ADVERTISEMENT

ವಿವಾದವನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಕಾಶವಿತ್ತು. ಆದರೆ, ಈ ಅವಕಾಶವನ್ನು ಅವರು ಕಳೆದು ಕೊಂಡಿದ್ದಾರೆ ಎಂದು ಟೀಕಿಸಿದರು.

ಹುಬ್ಬಳ್ಳಿಗೆ ಭೇಟಿ ನೀಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಮಹದಾಯಿ ಹೋರಾಟಗಾರರೊಂದಿಗೆ ಮಾತುಕತೆ ಮಾಡುವುದನ್ನು ಬಿಟ್ಟು ಫಲಾಯನ ಮಾಡಿರುವುದು ಸರಿಯಲ್ಲ. ಕಾಂಗ್ರೆಸ್‌, ಬಿಜೆಪಿಯಿಂದ ಈ ವಿವಾದಕ್ಕೆ ಪರಿಹಾರ ದೊರೆಯುವುದಿಲ್ಲ ಎಂದು ಹೇಳಿದರು.

ಜೆಡಿಎಸ್‌ ಅಧಿಕಾರಕ್ಕೆ: ಮುಂಬರುವ ವಿಧಾನಸಭೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗಳೆರಡೂ ಜೆಡಿಎಸ್‌ ಅನ್ನು ಲಘುವಾಗಿ ಪರಿಗಣಿಸಿವೆ. ಆದರೆ, ಅಚ್ಚರಿಯ ಫಲಿತಾಂಶದೊಂದಿಗೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಉತ್ತರ ಕರ್ನಾಟಕ ಭಾಗದ ಪ್ರತಿ ಜಿಲ್ಲೆಯಲ್ಲೂ 2 ರಿಂದ 4 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ‌ ಎಂದರು.

ಯಾವ ಪುರುಷಾರ್ಥಕ್ಕೆ: ಯಾವ ‍ಪುರುಷಾರ್ಥಕ್ಕಾಗಿ ಬಿಜೆಪಿ ಮುಖಂಡರು ಮುಷ್ಟಿಧಾನ್ಯ ಅಭಿಯಾನವನ್ನು ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಕಷ್ಟದಲ್ಲಿರುವ ರೈತರ ಮನೆಯಿಂದಲೂ ಧಾನ್ಯ ಸಂಗ್ರಹಿಸಿ ಊಟ ಮಾಡಲು ಮುಂದಾಗಿರುವ ಅವರ ನಡೆ ಖಂಡನೀಯ ಎಂದರು.

ರಾಜ್ಯದ ನೀರಾವರಿ ಯೋಜನೆಗಳಿಗೆ ₹ 58 ಸಾವಿರ ಕೋಟಿ ಅನುದಾನ ನೀಡಿದ್ದೇವೆ ಎಂದು ಜಲಸಂಪನ್ಮೂಲ ಸಚಿವರು ಹೇಳುತ್ತಾರೆ. ಅದರಲ್ಲಿ, ಭೂಮಿಗೆ ನೀರು ಹರಿಸಲು ಖರ್ಚಾಗಿರುವ ಹಣ ಎಷ್ಟು, ನಿಮ್ಮ ಜೇಬಿಗೆ ಹೋಗಿರುವ ಹಣ ಎಷ್ಟು ಎಂಬುದರ ಲೆಕ್ಕ ಕೊಡಿ ಎಂದು ಆಗ್ರಹಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.