ADVERTISEMENT

ಮಾವುಮೇಳ 24ರ ವರೆಗೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 22 ಮೇ 2012, 6:25 IST
Last Updated 22 ಮೇ 2012, 6:25 IST

ಧಾರವಾಡ: ಮಲ್ಲಿಕಾ... ಗುಟ್ಟಿ...ಜೀರಿಗೆ...ಆಪುಸ್..ಕಲಮಿ  ಮಾವಿನ ಹಣ್ಣುಗಳಿಗೆ ಮಾವು ಮೇಳದಲ್ಲಿ ಮೂರನೆ ದಿನಕ್ಕೆ ಬೇಡಿಕೆ ಜಾಸ್ತಿಯಾಗಿತ್ತು.. ಗ್ರಾಹಕರಂತೂ ಮೂರನೆ ದಿನಕ್ಕೆ ಮಾವಿನ ಹಣ್ಣುಗಳನ್ನು ಖರೀದಿಸಲು ಮುಗಿಬಿದ್ದಿದ್ದರು. ರೈತರು ಖುಷಿಯಿಂದ ಮೂರನೆ ದಿನದಲ್ಲಿ ಮಾವು ಮಾರಾಟದಲ್ಲಿ ತೊಡಗಿದ್ದರು. ಇನ್ನೇನು ಮೂರನೆ ದಿನಕ್ಕೆ ಮಾವು ಮೇಳಕ್ಕೆ ತೆರೆ ಬಿತ್ತು ಎನ್ನುವಷ್ಟರಲ್ಲಿಯೇ ರೈತರಿಗೆ ಮುಸ್ಸಂಜೆ ಹೊತ್ತಿನಲ್ಲಿ ಸಿಹಿ ಸುದ್ದಿ ಕಾದಿತ್ತು.

ನಗರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿರುವ ಮಾವುಮೇಳ ಇನ್ನೂ ಮೂರು ದಿನಗಳ ಕಾಲ ಮುಂದುವರೆಯಲಿದೆ. ಮೂರನೆ ದಿನದಲ್ಲಿ ಗ್ರಾಹಕರಿಂದ ಮಾವಿನ ಹಣ್ಣಿನ ಖರೀದಿ ಭರ್ಜರಿಯಿಂದ ನಡೆದಿದೆ. ರೈತರು ಕೂಡ ಅತಿ ಉತ್ಸಾಹದಿಂದ ಮಾವುಗಳನ್ನು ಮಾರಾಟ ಮಾಡುತ್ತಿದ್ದಾರೆ.
 
ಮೂರನೆ ದಿನಕ್ಕೆ ಮಾವು ಮೇಳವನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುದನ್ನು ಗಮನಿಸಿ ಮೇ 24ರ ವರೆಗೆ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕಿ ಸರಳಮ್ಮ `ಪ್ರಜಾವಾಣಿಗೆ~ ತಿಳಿಸಿದರು.

ವನರಾಜ, ಉಪ್ಪಿನಕಾಯಿ ತಳಿ ಮಾವು, ಸಿಂಧು, ಮಾವಿನ ಹಣ್ಣುಗಳನ್ನು ಖರೀದಿಸಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಮೂರು ದಿನದ ಮಾವು ಮೇಳದಲ್ಲಿ 20 ಲಕ್ಷ ರೂಪಾಯಿಗಿಂತಲೂ ಅಧಿಕ ವಹಿವಾಟು ಆಗಿದೆ ಇನ್ನೂ ಹೆಚ್ಚಿನ ವಹಿವಾಟು ಆಗುವ ಸಂಭವವಿದ್ದು, ಬೆಂಗಳೂರಿನ ತೋಟಗಾರಿಕಾ ನಿರ್ದೇಶಕರ ಜೊತೆಗೆ ಮಾತನಾಡಿ ಮೂರು ದಿನಗಳ ಕಾಲ ಮುಂದುವರೆಸಲು ತೀರ್ಮಾನಿಸಲಾಗಿದೆ.

ರಾಸಾಯನಿಕ ವಸ್ತುಗಳನ್ನು ಉಪಯೋಗಿಸದೆ ಮಾವು ಮಾರಾಟಕ್ಕಿವೆ ಎಂಬುದನ್ನು ಗಮನಿಸಿ ಗ್ರಾಹಕರು ಖರೀದಿ ಮಾಡಲು ಬರುತ್ತಿದ್ದಾರೆ ಮೂರು ದಿನದ ಈ ಮಾವುಮೇಳದಲ್ಲಿ 10 ಟನ್ ಮಾವುಗಳ ಮಾರಾಟವಾಗಿವೆ ಎಂದರು.

ಗ್ರಾಹಕರ ಪ್ರತಿಕ್ರಿಯೆ: ನಾಲ್ಕು ವರ್ಷದಿಂದ ಈ ಮಾವುಮೇಳದಲ್ಲಿ ಭಾಗವಹಿಸುತ್ತಿದ್ದು, ವರ್ಷಕ್ಕಿಂತ ಈ ವರ್ಷ ಹೆಚ್ಚಿನ ವ್ಯಾಪಾರವಾಗಿದೆ. ಮಾವು ಬೆಳೆ ಕಡಿಮೆ ಇರುವುದರಿಂದ ಗ್ರಾಹಕರು ಮಾವು ಖರೀದಿಸಲು ಬರುತ್ತಿದ್ದಾರೆ. ಮೊದಲನೆ ದಿನ 64 ಡಜನ್, ಎರಡನೆ ದಿನ 106 ಡಜನ್ ಮತ್ತು ಮೂರನೆ ದಿನ 108 ಡಜನ್ ಮಾವಿನ ಹಣ್ಣು ಮಾರಾಟ ಮಾಡಿದ್ದೇನೆ ಎಂದು ಖುಷಿಯಿಂದ ಹೇಳುತ್ತಾರೆ ಜೋಗೆಲ್ಲಾಪುರದ ಶಾಂತವ್ವ ಧಾರವಾಡ.

ಕಳೆದ ವರ್ಷ ಈ ಮಾವು ಮೇಳವನ್ನು 8 ದಿನಗಳ ಕಾಲ ಮಾಡಬೇಕು ಎಂದು ನಾವು ಒತ್ತಾಯಿಸಿದ್ದೆವು. ಆದರೆ ಈ ವರ್ಷ ಆರುದಿನಗಳ ಕಾಲ ಮುಂದುವರೆಸಿದ್ದು ನಮಗೆ ಸಂತಸ ತಂದಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಮಾವು ಮಾರಾಟ ಮಾಡಲು ನಮಗೆ ಅವಕಾಶ ಸಿಕ್ಕಂತಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.