ADVERTISEMENT

ಮಾವು ರಫ್ತು ಕೇಂದ್ರ ಸ್ಥಾಪನೆ: ಬೆಲ್ಲದ

​ಪ್ರಜಾವಾಣಿ ವಾರ್ತೆ
Published 29 ಮೇ 2018, 7:19 IST
Last Updated 29 ಮೇ 2018, 7:19 IST

ಧಾರವಾಡ: ಈ ಭಾಗದ ಮಾವು ಬೆಳೆಗಾರರ ಅನುಕೂಲಕ್ಕಾಗಿ ಮಾವು ಸಂಸ್ಕರಣೆ ಹಾಗೂ ರಫ್ತು ಕೇಂದ್ರ ಸ್ಥಾಪನೆ ಅಗತ್ಯವಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಕೆಲಗೇರಿಯ ಗುಡ್ಡದಮಠ ವೇ-ಬ್ರಿಡ್ಜ್ ಬಳಿ ಇರುವ ಮಾವು ಖರೀದಿ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.

‘ಕೋಲಾರ ಹಾಗೂ ರಾಮನಗರ ಹೊರತು ಪಡಿಸಿದರೆ ಇಡೀ ರಾಜ್ಯದಲ್ಲಿ ಧಾರವಾಡದಲ್ಲಿಯೇ ಅತೀ ಹೆಚ್ಚು ಮಾವು ಬೆಳೆಯಲಾಗುತ್ತಿದೆ. ಆದರೆ, ಈ ಭಾಗದ ಬೆಳೆಗಾರರಿಗೆ ಮಾವು ಕೊಯ್ಲು ಮಾಡಿ ಸಂಸ್ಕರಿಸಿ ಉತ್ತಮ ಬೆಲೆಗೆ ಮಾರಾಟ ಮಾಡಲು ಯಾವ ಅನುಕೂಲತೆಗಳಿಲ್ಲ. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಸಂಸ್ಕರಣ ಹಾಗೂ ಖರೀದಿ ಕೇಂದ್ರ ಸ್ಥಾಪಿಸಲಾಗುವುದು’ ಎಂದರು.

ADVERTISEMENT

‘ಈ ಕೇಂದ್ರ ಸ್ಥಾಪನೆ ಸಂಬಂಧ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಆದಷ್ಟು ಶೀಘ್ರ ಮಹಾರಾಷ್ಟ್ರ ಹಾಗೂ ಕೋಲಾರದಲ್ಲಿರುವ ಮಾವು ರಪ್ತು ಕೇಂದ್ರಕ್ಕೆ ಭೇಟಿ ನೀಡಿ, ಅದೇ ಮಾದರಿಯಲ್ಲಿ ಇಲ್ಲೂ ಸ್ಥಾಪನೆ ಮಾಡುವ ಕುರಿತು ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಮಾವು ಬೆಳೆಗಾರರ ಹಾಗೂ ಖರೀದಿ ಕೇಂದ್ರದ ಮುಖ್ಯಸ್ಥ ದೇವೇಂದ್ರ ಜೈನರ್ ಮಾತನಾಡಿ, ‘ಹಲವು ವರ್ಷಗಳಿಂದ ಮಾವು ಮಾರಾಟ ಕೇಂದ್ರ ಸ್ಥಾಪನೆ ಬಗ್ಗೆ ಚರ್ಚೆ ನಡೆದಿದ್ದು, ಸರ್ಕಾರ ಈ ಕುರಿತು ಶೀಘ್ರ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು’ ಎಂದರು. ‘ಈ ಭಾಗದಲ್ಲಿ ಅತ್ಯುತ್ತಮ ಮಾವು ಬೆಳೆಯಲಾಗುತ್ತಿದೆ. ಆದರೆ, ಪ್ರತಿಬಾರಿ ಮಳೆ, ಗಾಳಿಗೆ ಸಿಲುಕಿ ಮಾವು ಬೆಳೆಗಾರರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಸರ್ಕಾರ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು. ಪಾಲಿಕೆ ಸದಸ್ಯ ಬಲರಾಮ ಕುಸುಗಲ್, ಮಾವು ಬೆಳೆಗಾರರಾದ ಶಿವಪುತ್ರಯ್ಯ ಗುಡ್ಡದಮಠ, ಈರಣ್ಣ ಹಳವದ, ಮುತ್ತು ಸಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.