ADVERTISEMENT

ಮಿಶ್ರ ದಾಳಿಗೆ ಶಹಬ್ಬಾಸ್‌ಗಿರಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 5:46 IST
Last Updated 25 ಡಿಸೆಂಬರ್ 2012, 5:46 IST

ಹುಬ್ಬಳ್ಳಿ: ಉತ್ತಪ್ಪ ಅವರ ಮೋಹಕ ಡ್ರೈವ್‌ಗಳು, ಕುನಾಲ್ ಕಪೂರ್ ಪ್ರದರ್ಶಿಸಿದ ಸ್ವೀಪ್, ಕಟ್ ಹಾಗೂ ಸ್ಟಿಯರ್ ಶಾಟ್‌ಗಳು...ಸ್ಟುವರ್ಟ್ ಬಿನ್ನಿ ಬಳಗದ ಶಕ್ತಿಯನ್ನು ಪ್ರದರ್ಶಿಸಲು ಇದ್ದದ್ದು ಇದಿಷ್ಟೇ. ನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ-ಹರಿಯಾಣ ನಡುವಣ ಕ್ರಿಕೆಟ್ ಪಂದ್ಯದಲ್ಲಿ ಸೋಮವಾರವೂ ಅತಿಥಿಗಳದ್ದೇ ಕಾರುಬಾರು. ಎರಡು ದಿನ ಬ್ಯಾಟಿಂಗ್‌ನಲ್ಲಿ ಮಿಂಚಿ ಹೊಸ ಮೈದಾನದಲ್ಲಿ ದಾಖಲೆ ನಿರ್ಮಿಸಿದ ಅಮಿತ್ ಮಿಶ್ರಾ ಪಡೆ ಸೋಮವಾರ ಪರಿಣಾಮಕಾರಿ ಬೌಲಿಂಗ್ ಹಾಗೂ ಉತ್ತಮ ಕ್ಷೇತ್ರ ರಕ್ಷಣೆಯ ಮೂಲಕ ಗಮನ ಸೆಳೆಯಿತು.

ನೃಪತುಂಬ ಬೆಟ್ಟದ ಪಾದದಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಬಾಲಂಗೋಚಿಗಳ ಕೆಚ್ಚೆದೆಯ ಹೋರಾಟದ ಫಲವಾಗಿ ಸೇರಿಸಿದ ರನ್ ಗುಡ್ಡವನ್ನು ಕರಗಿಸಲು ಹೆಣಗಾಡಿದ ಕರ್ನಾಟಕದ ಬ್ಯಾಟ್ಸಮನ್‌ಗಳ ಪೈಕಿ ಮಿಂಚಿದ್ದು ಉತ್ತಪ್ಪ ಹಾಗೂ ಕುನಾಲ್ ಕಪೂರ್ ಮಾತ್ರ. ಇವರಿಬ್ಬರ ಬ್ಯಾಟಿಂಗ್ ವೈಖರಿಗೆ ಶಹಬ್ಬಾಸ್ ಗಿರಿ ಹೇಳಿದ ಪ್ರೇಕ್ಷಕರು ಮೂರನೇ ದಿನವೂ ದೂರದೂರಿಂದ ಬಂದ `ಸಿಂಗ'ರ ಬೆನ್ನು ತಟ್ಟಲು ಮರೆಯಲಿಲ್ಲ. ಅಮಿತ್ ಮಿಶ್ರಾ ಹಾಗೂ ಜೋಗೀಂದರ್ ಶರ್ಮಾ ಮೊದಲ ಬಾರಿ ಬೌಲಿಂಗ್ ಮಾಡಲು ಆಗಮಿಸಿದಾಗ ಗ್ಯಾಲರಿಗಳಲ್ಲಿ ಕೇಳಿಬಂದ `ಹೋ...' ಸದ್ದು, ಈ ಬೌಲರ್‌ಗಳಿಗೆ ಪದೇ ಪದೇ `ಕಮಾನ್' ಎಂದು ಪ್ರೋತ್ಸಾಹ ನೀಡಿದ್ದು ಎಲ್ಲವೂ ಇಲ್ಲಿನವರ ಕ್ರೀಡಾ ಮನೋಭಾವಕ್ಕೆ ಕನ್ನಡಿ ಹಿಡಿಯಿತು.

ದಿನದ ಹದಿಮೂರನೇ ಓವರ್ ಎಸೆಯಲು ನಾಯಕ ಚೆಂಡನ್ನು ಜೋಗೀಂದರ್ ಶರ್ಮಾ ಕೈಗೆ ನೀಡುತ್ತಿದ್ದಂತೆ ಪ್ರೇಕ್ಷಕರು ಖಷಿಗೊಂಡರು. ಪೆವಿಲಿಯನ್ ತುದಿಯಿಂದ ಮೊದಲ ಓವರ್ ಎಸೆದ ಶರ್ಮಾ ಅವರನ್ನು ಮುಂದಿನ ಓವರ್ ಬೌಲಿಂಗ್ ಮಾಡಲು ಸಿಟಿ ತುದಿಗೆ ಕಳುಹಿಸಿದ ನಾಯಕ, ಪೆವಿಲಿಯನ್ ಕಡೆಯಿಂದ ಸ್ವತಃ ತಾವೇ ದಾಳಿ ಆರಂಭಿಸಿದರು.

ಪಾಕ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಮಿಶ್ರಾ ತಮ್ಮ ಲೆಗ್ ಬ್ರೇಕ್ ಅಸ್ತ್ರ ಪ್ರಯೋಗಿಸುತ್ತಿದ್ದಂತೆ ಪ್ರೇಕ್ಷಕರು ಖುಷಿಯಿಂದ ಕುಪ್ಪಳಿಸಿದರು. ಮಿಶ್ರಾ ಅವರ ಮೊದಲ ಎಸೆತಕ್ಕೆ ರಕ್ಷಣಾತ್ಮಕ ಆಟದ ಮೂಲಕ ಗೌರವ ನೀಡಿದ ಉತ್ತಪ್ಪ ಎರಡನೇ ಎಸೆತವನ್ನು ಎರಡು ಹೆಜ್ಜೆ ಮುಂದಿಟ್ಟು ಸುಂದರ ಆನ್‌ಡ್ರೈವ್ ಮೂಲಕ ಬೌಂಡರಿ ಬಾರಿಸಿದರು; ಗ್ಯಾಲರಿಯಲ್ಲಿ ಜನರು ಹುಚ್ದೆದ್ದು ಕುಣಿದರು. 19ನೇ ಓವರ್‌ನ 4ನೇ ಎಸೆತವನ್ನು ಲಾಂಗ್‌ಲೆಗ್‌ಗೆ ಫ್ಲಿಕ್ ಮಾಡಿ ಎರಡು ರನ್ ಗಳಿಸಿದ ಉತ್ತಪ್ಪ ಡ್ರೆಸ್ಸಿಂಗ್ ರೂಂ ಕಡೆಗೆ ಬ್ಯಾಟ್ ತೋರಿಸಿ ಹರ್ಷ ವ್ಯಕ್ತಪಡಿಸಿದಾಗ ಪ್ರೇಕ್ಷಕರು ಅಭಿನಂದನೆಯ ಮಳೆ ಸುರಿಸಿದರು.

ಮಿಶ್ರಾಗೆ ವಿಕೆಟ್ ಒಪ್ಪಿಸಿ ವಾಪಸಾಗುವಾಗ ಉತ್ತಪ್ಪ.. ಉತ್ತಪ್ಪ ಎಂಬ ಕೂಗು ಜೋರಾಗಿ ಕೇಳಿಬಂತು. ಹೆಲ್ಮೆಟ್ ತೆಗೆದು ಮುಖ ತೋರಿಸುವ ಬೇಡಿಕೆಯೂ ಬಂತು. ಮನೀಶ್ ಪಾಂಡೆ ಔಟಾಗಿ ವಾಪಸಾಗುವಾಗಲೂ ಇದೇ ರೀತಿಯ ಕೂಗು ಕೇಳಿತು.

ಚಹಾ ವಿರಾಮದ ನಂತರ ಕರ್ನಾಟಕ ಆಲ್‌ಔಟಾಗಿ ಫಾಲೋ ಆನ್‌ಗೆ ಒಳಗಾದಾಗ ತಂಡದ ಮೇಲೆ ಕವಿದ ನಿರಾಸೆಯ ಕಾರ್ಮೋಡ ಪ್ರೇಕ್ಷಕರನ್ನು ಕೂಡ ಕಾಡಿತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಪ್ಪ ಬಾರಿಸಿದ ಏಳು ಹಾಗೂ ಕೆ.ಎಲ್. ರಾಹುಲ್ ಗಳಿಸಿದ ನಾಲ್ಕು ಬೌಂಡರಿಗಳು ಸಂಜೆಯ ಸೊಬಗಿಗೆ ರಂಗು ತುಂಬಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.