ಹುಬ್ಬಳ್ಳಿ: `ಪೂಜ್ಯ ಮಹಾಪೌರರೇ, ನಾನೀಗ ಅತ್ಯಂತ ಗಂಭೀರವಾದ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದೇನೆ. ಅವಳಿನಗರಕ್ಕೆ ಬೇಕಾದ ಬಲು ಮಹತ್ವದ ವಿಚಾರ ಇದು~ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅತ್ಯಂತ ಮುತ್ಸದ್ಧಿ ಸದಸ್ಯ ಎನಿಸಿದ್ದ ಅಶೋಕ ಮಲ್ಹಾರ ರಾವ್ ಜಾಧವ ಅವರ ಮಾತಿನ ಧಾಟಿಯೇ ಇದು. ಜಾಧವ ಮಾತನಾಡಲು ಎದ್ದು ನಿಂತರೆಂದರೆ ಏನೋ ಗಂಭೀರವಾದ ಚರ್ಚೆಗೆ ಪೀಠಿಕೆ ಬಿದ್ದಿದೆ ಎಂತಲೇ ಲೆಕ್ಕ.
ತಾವು ಮಂಡಿಸಲಿರುವ ವಿಷಯಕ್ಕೆ ಪೂರಕವಾಗಿ ಕಾನೂನಿನ ಅಂಶ, ಸರ್ಕಾರದ ನಿಲುವು, ಸಾರ್ವಜನಿಕರ ಅಗತ್ಯ ಮೊದಲಾದ ಮಾಹಿತಿಯನ್ನು ಅತ್ಯಂತ ನಿಖರವಾಗಿ ಅವರು ಪ್ರತಿಪಾದಿಸುತ್ತಿದ್ದರು.
ಇಂತಹ ಮೇಧಾವಿ, ಮೇಯರ್ ಗೌನನ್ನು ತೊಡಲು ಇನ್ನೇನು ಹತ್ತೇ ದಿನಗಳು ಬಾಕಿ ಉಳಿದಿದ್ದವು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಹಾವೇರಿ ಹೊರವಲಯದ ಬೈಪಾಸ್‌ನಲ್ಲಿ ಸಾವು ಅವರಿಗಾಗಿ ಹೊಂಚು ಹಾಕಿ ಕಾಯುತ್ತಿತ್ತು. ಪಾಲಿಕೆ ವಿರೋಧ ಪಕ್ಷದ ನಾಯಕ, ಸಭಾನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ... ಹೀಗೆ ಹಲವು ಮಹತ್ವದ ಹುದ್ದೆಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು ಅವರು.
ಪಾಲಿಕೆಯಲ್ಲಿ ಆಡಳಿತ ಪಕ್ಷವಾದ ಬಿಜೆಪಿಗೆ ಪಾಂಡುರಂಗ ಪಾಟೀಲ ಮತ್ತು ಜಾಧವ ಇಬ್ಬರೂ ಮಾರ್ಗದರ್ಶಕರ ಸ್ಥಾನದಲ್ಲಿದ್ದರು. ಎಂತಹ ಕ್ಲಿಷ್ಟ ಸಮಸ್ಯೆ ಎದುರಾದರೂ ಇವರಲ್ಲಿ ಪರಿಹಾರ ಸಿಗುತ್ತಿತ್ತು. ಏನೇ ಗಂಡಾಂತರ ಎದುರಾದರೂ ಬಿಜೆಪಿ ಸದಸ್ಯರು ಈ ಇಬ್ಬರತ್ತ ಹೊರಳಿ ನೋಡುತ್ತಿದ್ದರು. ಈ ದೃಷ್ಟಿಯಲ್ಲಿ ಪಾಟೀಲರು ಈಗ ಒಬ್ಬಂಟಿಯಾಗಿದ್ದಾರೆ. ಪಾಲಿಕೆಗೆ ಬರುವಾಗ ಕರ್ನಾಟಕ ಮುನ್ಸಿಪಲ್ ಕಾನೂನು-1976ರ ಪುಸ್ತಕ ಜಾಧವ ಅವರ ಕೈಯಲ್ಲಿ ಸದಾ ಇರುತ್ತಿತ್ತು.
ಯಾವುದೇ ವಿಷಯವನ್ನು ಅವರು ಮಂಡನೆ ಮಾಡುವಾಗ ಪುಸ್ತಕದಲ್ಲಿದ್ದ ನಿಯಮಾವಳಿಯನ್ನು ಉಲ್ಲೇಖಿಸುತ್ತಿದ್ದರು. ಪುಟದ ಸಂಖ್ಯೆಯನ್ನು ಗುರುತು ಹಾಕಿಕೊಂಡು ಬಂದು ಓದುತ್ತಿದ್ದರು. ಇನ್ನೊಬ್ಬರು ವಿಷಯ ಮಂಡಿಸುವಾಗ ಗಂಭೀರವಾಗಿ ಕುಳಿತು ಆಲಿಸುತ್ತಿದ್ದರು. ತಮ್ಮ ಸರದಿ ಬಂದಾಗ ಯಾರಾದರೂ ಗಲಾಟೆ ಮಾಡಲು ಮುಂದಾದರೆ `ನೀವು ಮಾತನಾಡುವಾಗ ನಾನು ಸುಮ್ಮನೇ ಕುಳಿತು ಆಲಿಸಿದ್ದೇನೆ. ಮೊದಲು ನನ್ನ ವಾದವನ್ನು ಕೇಳಿ. ಆಮೇಲೆ ಬೇಕಾದರೆ ಮಾತನಾಡಿ~ ಎಂದು ಗದರುತ್ತಿದ್ದರು.
ಬಜೆಟ್ ಮಂಡನೆ ಸಂದರ್ಭದಲ್ಲೂ ಜಾಧವ ಅವರದ್ದು ತೂಕದ ಮಾತು. ನಾಲ್ಕು ದಿನಗಳ ಹಿಂದಷ್ಟೇ ಪಾಲಿಕೆ ಬಜೆಟ್ ಮಂಡನೆಯಾದಾಗ ಅತ್ಯಂತ ಚಾಕಚಕ್ಯತೆಯಿಂದ ಅದನ್ನು ಸಮರ್ಥಿಸಿಕೊಂಡಿದ್ದರು. ಪಾಲಿಕೆ ಕೆಲ ಸದಸ್ಯರು `ಮುಂದಿನ ಮೇಯರ್~ ಎಂದು ಕಾಲೆಳೆದರೆ ಆಗ ಅಷ್ಟೇ ಸ್ಪರ್ಧಾ ಮನೋಭಾವದಿಂದ ನಸುನಗುತ್ತಲೇ ಅದನ್ನು ಸ್ವೀಕರಿಸಿದ್ದರು.
ಬಿಜೆಪಿ ಮಾತ್ರವಲ್ಲದೆ ಎಲ್ಲ ಪಕ್ಷದಲ್ಲೂ ಅವರಿಗೆ ಒಳ್ಳೆಯ ಸ್ನೇಹಿತರಿದ್ದರು. ಹಲವು ಸದಸ್ಯರು ತಮ್ಮ ವಾದ ಮಂಡನೆಗೆ ಜಾಧವ ಅವರ ಬೆಂಬಲ, ಮಾರ್ಗದರ್ಶನವನ್ನು ಕೋರುತ್ತಿದ್ದರು.
ಜಾಧವ ಪಾಲಿಕೆ ಸದಸ್ಯರಾಗಿದ್ದು ಇದು ಮೂರನೇ ಬಾರಿ. 1990ರ ದಶಕದಲ್ಲಿ ಮೊದಲ ಸಲ ಸದಸ್ಯರಾದಾಗ ಅವರು ಜನತಾದಳದಲ್ಲಿ ಇದ್ದರು. ಆಗ 30ನೇ ವಾರ್ಡ್‌ನಿಂದ ಕೇವಲ ನಾಲ್ಕು ಮತಗಳ ಅಂತರದಿಂದ ಆಯ್ಕೆ ಆಗಿದ್ದರು. ಬಳಿಕ ಬಿಜೆಪಿ ಸೇರಿದ ಅವರು ಮತ್ತೆರಡು ಸಲ ಸದಸ್ಯರಾಗಿ ಆಯ್ಕೆಯಾದರು.
47ನೇ ವಾರ್ಡ್ ಪ್ರತಿನಿಧಿಸುತ್ತಿದ್ದ ಬಿಕಾಂ ಪದವೀಧರ ಜಾಧವ ಮರಾಠಾ ಜನಾಂಗದ ಮುತ್ಸದ್ಧಿ ಧುರೀಣರಾಗಿದ್ದರು.ದಾವಣಗೆರೆಯಲ್ಲಿ ಏರ್ಪಡಿಸಿದ್ದ ಮಾವನ ಪ್ರಥಮ ಪುಣ್ಯತಿಥಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ತೆರಳಿದ್ದರು.
ಸಮಾರಂಭದಲ್ಲಿ ಪಾಲ್ಗೊಂಡು ವಾಪಸು ಬರುವಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ಕುರಿತಂತೆ ಮಾಹಿತಿ ಸಿಗುತ್ತಿದ್ದಂತೆಯೇ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಪಾಲಿಕೆ ಸಭಾನಾಯಕ ವೀರಣ್ಣ ಸವಡಿ, ಸುಧೀರ ಸರಾಫ್ ಸೇರಿದಂತೆ ಹಲವು ಸದಸ್ಯರು ಹಾವೇರಿಗೆ ದೌಡಾಯಿಸಿದರು. ಜಾಧವ ಅವರ ಮನೆ ಮುಂದೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಕಿಮ್ಸನಲ್ಲೂ ಅವರ ಬೆಂಬಲಿಗರು ನೆರೆದಿದ್ದರು.
ಜಾಧವ ಅವರ ತಾಯಿ ಜನಾಬಾಯಿ ಅವರಿಗೆ ಮಗನ ಸಾವಿನ ಸುದ್ದಿಯನ್ನು ತಿಳಿಸಿರಲಿಲ್ಲ. ದಾವಣಗೆರೆಗೆ ಹೋದ ಮಗ, ಸೊಸೆ, ಮೊಮ್ಮಕ್ಕಳು ಇನ್ನೇನು ಬರುತ್ತಾರೆ ಎಂದು ಅವರು ಕಾದಿದ್ದರು. ಜನಾಬಾಯಿ ಅವರಿಗೆ ಅಶೋಕ ಏಕೈಕ ಪುತ್ರನಾಗಿದ್ದರು.
ಗಾಯಗೊಂಡಿರುವ ಜಾಧವ ಅವರ ಪತ್ನಿ ಸ್ಮಿತಾ ಮತ್ತು ಕಿರಿಯ ಪುತ್ರಿ ಸ್ಫೂರ್ತಿಯನ್ನು ಕಿಮ್ಸಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ನತದೃಷ್ಟ ವಾಹನದ ಚಾಲಕ ಬಸುಗೆ ಸಣ್ಣಪುಟ್ಟ ಗಾಯಗಳಾಗಿವೆ.
ತಮ್ಮ ಗಂಭೀರ ವ್ಯಕ್ತಿತ್ವದಿಂದ ಎಲ್ಲರಿಗೂ ಮಾದರಿಯಾಗಿದ್ದ ಜಾಧವ, ಪಾಲಿಕೆ ಸಭೆಯಲ್ಲಿ ಕಲಾಪ ವ್ಯರ್ಥವಾಗಿ ಸೋರುತ್ತಿದ್ದಾಗಲೆಲ್ಲ ಸಾತ್ವಿಕ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಹಿಂದೆ ಮೇಯರ್ ಸ್ಥಾನ ಸಾಮಾನ್ಯ ವಿಭಾಗಕ್ಕೆ ಮೀಸಲಾಗಿದ್ದಾಗ ಗೌನು ತೊಡಲು ಜಾಧವ ಬಲವಾಗಿಯೇ ಯತ್ನಿಸಿದ್ದರು.
ಆ ಯತ್ನದಲ್ಲಿ ಯಶಸ್ಸು ಸಿಗದಿದ್ದಾಗ ಮುನಿಸಿಕೊಂಡು ಕೆಲ ದಿನಗಳ ಕಾಲ ಹುಬ್ಬಳ್ಳಿಯಿಂದಲೇ ದೂರ ಹೋಗಿದ್ದರು. ಈ ಸಲ ಮೇಯರ್ ಪೀಠ ಒಲಿದು ಬಂದರೂ ಏರಲು ಆಗದಷ್ಟು ದೂರ ಸಾಗಿಬಿಟ್ಟಿದ್ದಾರೆ.
ಮಧ್ಯಾಹ್ನ 12ಕ್ಕೆ ಅಂತ್ಯ ಸಂಸ್ಕಾರ
ಹುಬ್ಬಳ್ಳಿ: ಭಾನುವಾರ ರಾತ್ರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಪಾಲಿಕೆ ಸದಸ್ಯ ಅಶೋಕ ಜಾಧವ ಮತ್ತು ಅವರ ಪುತ್ರಿ ತೃಪ್ತಿ ಅವರ ಅಂತ್ಯ ಸಂಸ್ಕಾರ ಮಧ್ಯಾಹ್ನ 12ಕ್ಕೆ ಕೇಶ್ವಾಪುರದ ಮುಕ್ತಿಧಾಮದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.