ADVERTISEMENT

ರಾಜಕೀಯ ಹೋರಾಟವಲ್ಲ: ಶಿಕ್ಷಕರ ಆಂದೋಲನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 4:30 IST
Last Updated 13 ಫೆಬ್ರುವರಿ 2012, 4:30 IST

ಧಾರವಾಡ: `ಶಿಕ್ಷಕರ ಹೋರಾಟವನ್ನು ಯಾವುದೇ ರಾಜಕೀಯ ದುರುದ್ದೇಶದಿಂದ ನಡೆಸುತ್ತಿಲ್ಲ. ಪಕ್ಷಾತೀತವಾಗಿ ನಡೆದಿರುವ ಈ ಹೋರಾಟ ಶಿಕ್ಷಕರ ಹಿತದೃಷ್ಟಿಯಿಂದ ಕೂಡಿದೆ~ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದರು.

ಫೆ 22ರಂದು ಪಾದಯಾತ್ರೆ ನಡೆಸುವ ಸಂಬಂಧ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
`ಮುಖ್ಯಮಂತ್ರಿಗಳು ಸಹ ಅನುದಾನ ಬಿಡುಗಡೆಗೆ ಆಸಕ್ತಿ ಹೊಂದಿದ್ದಾರೆ~ ಎಂದ ಅವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆಪಾದಿಸಿದರು.

ಕಳೆದ 60 ದಿನಗಳಿಂದ ಶಿಕ್ಷಕರು ವಿವಿಧ ರೀತಿಯಲ್ಲಿ ಹೋರಾಟ ನಡೆಸಿ ದ್ದರೂ ಸರ್ಕಾರ ಈವರೆಗೆ ಅನುದಾನ ಬಿಡುಗಡೆ ಬಗ್ಗೆ ಮಾತನಾಡಿಲ್ಲ. ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕಳೆದ ಫೆ. 8 ರಂದು ಸದನದಲ್ಲಿ ಅನುದಾನ ಬಿಡುಗಡೆ ಕುರಿತು ಸ್ಪಷ್ಟನೆ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ ಅಂದು ಸದನದಲ್ಲಿ ಸಚಿವರು ನೀಲಿ ಚಿತ್ರ ವೀಕ್ಷಿಸಿದ ಪ್ರಕರಣದ ಚರ್ಚೆಯಿಂದ ಅನುದಾನ ಕುರಿತು ಪ್ರಸ್ತಾಪವಾಗಲಿಲ್ಲ ಎಂದು ವಿಷಾದಿಸಿದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸೇರಿದಂತೆ ಶಿಕ್ಷಕರನ್ನು ಪ್ರತಿನಿಧಿಸುವ ಶಾಸಕರು ಸಹ ಅನುದಾನ ಕೊಡಬೇಕು ಎಂದು ಸದನದಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಭಾಪತಿಗಳು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಸಹ ಬರೆದಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದ ಹೊರಟ್ಟಿ, ತಾವು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ಬಿ.ಡಿ.ಹಿರೇಮಠ, ಎನ್.ಎಚ್.ಕೋನರಡ್ಡಿ, ಶರಣಪ್ಪ ಕೊಟಗಿ, ರಾಜಣ್ಣ ಕೊರವಿ, ಸುರೇಶ ಹಿರೇಮಠ, ಶ್ಯಾಮ ಮಲ್ಲನಗೌಡರ, ಆನಂದ ಕುಲಕರ್ಣಿ, ಮುತ್ತುರಾಜ ಮತ್ತಿಕೊಪ್ಪ, ಸಾಲಿಮಠ, ಮೋಹನ ಅರ್ಕಸಾಲಿ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.