ADVERTISEMENT

`ರಾಜೀನಾಮೆ ನೀಡಿ, ನಮ್ಮಂದಿಗೆ ಸೇರಿಕೊಳ್ಳಿ'

ಸಂಸದ ಪ್ರಹ್ಲಾದ ಜೋಶಿ ನಿವಾಸದ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 6:09 IST
Last Updated 2 ಸೆಪ್ಟೆಂಬರ್ 2013, 6:09 IST

ಹುಬ್ಬಳ್ಳಿ: `ನಾವೆಲ್ಲರೂ ನಿಮಗೆ ಮತ ನೀಡಿ ಸಂಸದರಾಗಿ ಆರಿಸಿ ಕಳುಹಿಸಿದ್ದೇವೆ. ಹೀಗಾಗಿ ನಮ್ಮ ಭಾವನೆಗೆ ಬೆಲೆ ನೀಡಿ, ರಿಕ್ರಿಯೇಶನ್ ಕ್ಲಬ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ನಮ್ಮಂದಿಗೆ ಸೇರಿಕೊಂಡು ಮೈದಾನವನ್ನು ಸಾರ್ವಜನಿಕರಿಗೆ ಉಳಿಸಿಕೊಡಿ'
-ಹೀಗೆಂದು ಮಯೂರಿ ಬಡಾವಣೆಯಲ್ಲಿರುವ ಸಂಸದ ಪ್ರಹ್ಲಾದ ಜೋಶಿ ಅವರ ನಿವಾಸದ ಎದುರು ಭಾನುವಾರ ಸೇರಿದ್ದ ಹುಬ್ಬಳ್ಳಿ ಸ್ಪೋಟ್ಸ್ ಗ್ರೌಂಡ್ ಬಚಾವೋ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಯ ಕರ್ನಾಟಕ ಸಂಘಟನೆ ಸದಸ್ಯರು ಆಗ್ರಹಿಸಿದರು.

ಬೆಳಿಗ್ಗೆ 11 ಗಂಟೆಗೆ ಜೋಶಿ ಮನೆಯ ಬಳಿ ಸೇರಿದ ನೂರಾರು ಪ್ರತಿಭಟನಾಕಾರರು ಒಂದು ತಾಸು ಪ್ರತಿಭಟನೆ ನಡೆಸಿದರು. ಚಿನ್ಮಯ ಹೈಸ್ಕೂಲ್ ರಸ್ತೆಯಿಂದ ಜಗ್ಗಲಿಗೆ ಬಾರಿಸುತ್ತ  ಜೋಶಿ ವಿರುದ್ಧ ಘೋಷಣೆ ಕೂಗುತ್ತ ಅವರ ಮನೆಯತ್ತ ನುಗ್ಗಲು ಪ್ರಯತ್ನಿಸಿದರು. ಆದರೆ ಪೊಲೀಸರು ಜೋಶಿ ಮನೆಗಿಂತ ಸ್ವಲ್ಪ ದೂರದಲ್ಲಿಯೇ ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಸಿ.ಬಿ.ಎಲ್.ಹೆಗ್ಡೆ ` ರಿಕ್ರಿಯೇಶನ್ ಕ್ಲಬ್  ನಿರ್ಮಾಣಕ್ಕೆ ಕುಮ್ಮಕ್ಕು ನೀಡಿರುವ ಸಂಸದ ಪ್ರಹ್ಲಾದ ಜೋಶಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರತಿಭಟನಾಕಾರರ ಅಹವಾಲು ಆಲಿಸುತ್ತಿಲ್ಲ. ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದು ಧರಣಿ ಸ್ಥಳಕ್ಕೆ ಆಗಮಿಸಿದ ಸಂಸದ ಪ್ರಹ್ಲಾದ ಜೋಶಿ  ಮನವಿ ಸ್ವೀಕರಿಸಿ ಮಾತನಾಡಿ, `ರಿಕ್ರಿಯೇಶನ್ ಕ್ಲಬ್‌ನಲ್ಲಿ ನನ್ನದೇನೂ ಪಾತ್ರವಿಲ್ಲ.  ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ತಿಳಿಸಿದ್ದೇನೆ. ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಅದಕ್ಕೆ ನಾನು ಬದ್ಧ' ಎಂದು ತೆರಳಿದರು.

ಮನೋಜ ಹಾನಗಲ್, ವೆಂಕಟೇಶ ಸವದತ್ತಿ, ಅಮೃತ್ ಇಜಾರಿ, ವೇದವ್ಯಾಸ ಕೌಲಗಿ, ವಿನಾಯಕ ಶಿರಾಡ್ಕರ್, ಹೊನ್ನಪ್ಪ ದಾಯಗೋಡಿ, ರಾಘವೇಂದ್ರ ಸವದತ್ತಿ, ಶೀಲಾ ಮಿರ್ಜಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.