ADVERTISEMENT

ರೈತಸ್ನೇಹಿ ಕೃಷಿ ಬೆಲೆ ನೀತಿ ಅಗತ್ಯ: ಆಚಾರ್ಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 5:35 IST
Last Updated 19 ಡಿಸೆಂಬರ್ 2013, 5:35 IST

ಧಾರವಾಡ: ‘ರೈತರಿಗೆ ಅನುಕೂಲ­ವಾಗುವಂತೆ ಕೃಷಿ ಬೆಲೆ ನೀತಿಯನ್ನು ಅಳವಡಿಸುವಿಕೆ ಹಾಗೂ ಕೃಷಿ ಮಾರುಕಟ್ಟೆ ವ್ಯವಸ್ಥೆಗೆ ಸೂಕ್ತವಾದ ಬದಲಾವಣೆಯ ಅಗತ್ಯವಿದೆ’ ಎಂದು ಭಾರತೀಯ ಕೃಷಿ ಮಾರುಕಟ್ಟೆ ಸಂಘದ ಮಾಜಿ ಅಧ್ಯಕ್ಷ ಡಾ.ಎಸ್.ಎಸ್.­ಆಚಾರ್ಯ ಪ್ರತಿಪಾದಿಸಿದರು.

ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿ ಹಾಗೂ ಅಂತರರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಘದ ಸಹಯೋಗದಲ್ಲಿ ಇಲ್ಲಿಯ ಕೃಷಿ ವಿ.ವಿ. ಆವರಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಕೃಷಿ ಮಾರುಕಟ್ಟೆ 27ನೇ ಸಮ್ಮೇಳನ ಉದ್ಘಾಟಿಸಿದ ಅವರು, ‘ರೈತರ ಆದಾಯ ಹೆಚ್ಚಿಸುವ, ಆಹಾರ ಭದ್ರತೆ­ಯನ್ನು ಒದಗಿಸುವ ಕೃಷಿ ಮಾರುಕಟ್ಟೆ ವ್ಯವಸ್ಥೆ ಇಂದಿನ ಅಗತ್ಯವಾಗಿದೆ’ ಎಂದರು.

‘ಭಾರತದಲ್ಲಿ ಕಠಿಣ ನೀತಿಯಿಂದಾಗಿ ಕೃಷಿ ಉತ್ಪನ್ನಗಳ ರಪ್ತು ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ’ ಎಂದು ಆಸ್ಟ್ರೇಲಿಯಾದ ಕ್ರಾಫರ್ಡ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಪ್ರಾಧ್ಯಾಪಕ ಪ್ರೊ.ಕೆ.ಪಿ.ಕಾಳಿರಾಜನ್ ಹೇಳಿದರು.

‘ಉದ್ಯೋಗ ಭದ್ರತೆ ಇಲ್ಲದೇ ಇರುವುದರಿಂದ ಕೃಷಿ ಮಾರುಕಟ್ಟೆ ಪದವಿಯನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ­ಯಾಗುತ್ತಿದೆ. ಕೃಷಿ ಮಾರುಕಟ್ಟೆ ಮಂಡಳಿಯು ಇತ್ತೀಚೆಗೆ ಕೃಷಿ ಮಾರು­ಕಟ್ಟೆ ಸಂಬಂಧಿ ವಿಶೇಷ ಉದ್ದೇಶದ ವಾಹನ (ಎಸ್‌ಪಿವಿ)ವನ್ನು ಪರಿಚಯಿ­ಸುವ ಮೂಲಕ ಉದ್ಯೋಗದ ಹೊಸ ದಾರಿ­ಯೊಂದನ್ನು ತೆರೆದಿದೆ’ ಎಂದು ಅಧ್ಯಕ್ಷತೆ ವಹಿಸಿದ್ದ ಕೃಷಿ ವಿ.ವಿ. ಕುಲಪತಿ ಡಾ.ಎಚ್.ಎಸ್. ವಿಜಯ ಕುಮಾರ್‌ ಹೇಳಿದರು.

ಕೃಷಿ  ಮಹಾವಿದ್ಯಾಲಯದ ಡೀನ್ (ಕೃಷಿ) ಡಾ.ಜಿ.ಎಸ್.ದಾಸೋಗ ಸ್ವಾಗತಿ­ಸಿ­ದರು. ಸಮ್ಮೇಳನದ ಸಂಘ­ಟನಾ ಕಾರ್ಯದರ್ಶಿ ಡಾ.ಎಸ್.ಎಂ. ಮುಂದಿನಮನಿ ವಂದಿಸಿದರು.

ಮೂರು ದಿನಗಳ ಈ ಸಮ್ಮೇಳನದಲ್ಲಿ 88 ಪ್ರಬಂಧಗಳು ಮಂಡನೆಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.