ADVERTISEMENT

ಲಿಂಗಾಯತರಿಗೆ ಕೂಡಲ ಸಂಗಮ ಪವಿತ್ರ ಸ್ಥಳ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 7:13 IST
Last Updated 6 ಡಿಸೆಂಬರ್ 2017, 7:13 IST
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತೆ ಗಂಗಾದೇವಿ ಮಾತನಾಡಿದರು, ಚನ್ನಬಸವಾನಂದ ಸ್ವಾಮೀಜಿ, ಮಾತೆ ಬಸವರತ್ನ, ಸಿದ್ದಣ್ಣ ನಟೆಗಲ, ಮಲ್ಲೇಶಪ್ಪ ಕುಸುಗಲ್ ಇದ್ದಾರೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತೆ ಗಂಗಾದೇವಿ ಮಾತನಾಡಿದರು, ಚನ್ನಬಸವಾನಂದ ಸ್ವಾಮೀಜಿ, ಮಾತೆ ಬಸವರತ್ನ, ಸಿದ್ದಣ್ಣ ನಟೆಗಲ, ಮಲ್ಲೇಶಪ್ಪ ಕುಸುಗಲ್ ಇದ್ದಾರೆ.   

ಧಾರವಾಡ: ‘ಬಸವ ಧರ್ಮದ ಪ್ರತಿಯೊಬ್ಬ ಅನುಯಾಯಿ ತನ್ನ ಜೀವನದಲ್ಲಿ ಒಮ್ಮೆಯಾದರೂ ಕೂಡಲ ಸಂಗಮದಲ್ಲಿ ನಡೆಯುವ ಶರಣ ಮೇಳದಲ್ಲಿ ಪಾಲ್ಗೊಳ್ಳಲೇಬೇಕು’ ಎಂದು ಅಕ್ಕಮಹಾದೇವಿ ಅನುಭಾವ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.

ರಾಷ್ಟ್ರೀಯ ಬಸವ ದಳದ ವತಿಯಿಂದ ಕೂಡಲ ಸಂಗಮದಲ್ಲಿ ಆಯೋಜಿಸಿರುವ 31ನೇ ಶರಣ ಮೇಳದ ಪ್ರಚಾರಾರ್ಥವಾಗಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

'ಕೂಡಲ ಸಂಗಮ ಇಂದು ತಪೋಸ್ಥಾನವಾಗಿ ಕಂಗೊಳಿಸುತ್ತಿದೆ. ಧಾರ್ಮಿಕ ಅನುಯಾಯಿತ್ವ ಸ್ವೀಕರಿಸದವರು ಪ್ರಾಮಾಣಿಕ ಲಿಂಗಾಯತನಾಗುವುದಿಲ್ಲ. ವರ್ಷಕ್ಕೆ ಒಮ್ಮೆಯಾದರೂ ಕೂಡಲ ಸಂಗಮಕ್ಕೆ ಬಂದು ಗಣಲಿಂಗ ದರ್ಶನ ಮಾಡಬೇಕು’ ಎಂದರು.

ADVERTISEMENT

‘ಲಿಂಗಾನಂದ ಸ್ವಾಮೀಜಿ ರಾಷ್ಟ್ರದಾದ್ಯಂತ ಸಂಚರಿಸಿ ಬಸವ ಧರ್ಮದ ಕುರಿತು ಪ್ರವಚನ ಮಾಡಿದರು. ಜತೆಗೆ ವಚನಗಳ ಸಂದೇಶದ ಬಗ್ಗೆ ಜಾಗೃತಿ ಮೂಡಿಸಿದರು. ಬಸವ ಧರ್ಮ ಪೀಠವು ಶರಣ ಮೇಳ, ಕಲ್ಯಾಣ ಪರ್ವ, ಶರಣೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಬಸವಣ್ಣ ಹಾಗೂ ಶರಣರ ಸಂದೇಶಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಬಾರಿಯ ಶರಣ ಮೇಳಕ್ಕೆ ಅಂದಾಜು ಐದು ಲಕ್ಷಕ್ಕೂ ಅಧಿಕ ಬಸವ ಭಕ್ತರು ಭಾಗವಹಿಸುವ ನೀರಿಕ್ಷೆಯಿದ್ದು, ಎಲ್ಲರಿಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಧ್ವಜಾರೋಹಣ ನೆರವೇರಿಸಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ ಮಾತನಾಡಿ, ‘12ನೇ ಶತಮಾನದಲ್ಲಿ ಶರಣರು ರಚಿಸಿದ ವಚನ ಸಾಹಿತ್ಯವನ್ನು ಸಂರಕ್ಷಿಸಿದ ವಚನ ಪಿತಾಮಹ ಫ.ಗು. ಹಳಕಟ್ಟಿ, ವಚನ ಸಾಹಿತ್ಯ, ಬಸವಾದಿ ಶರಣರ ಸಮಗ್ರ ಚರಿತ್ರೆಯನ್ನುನಾಡಿಗೆ ಪರಿಚಯಿಸುವ ಕೆಲಸವನ್ನು ಪ್ರವಚನ ಪಿತಾಮಹ ಲಿಂಗಾನಂದ ಸ್ವಾಮೀಜಿ ಮಾಡಿರುವುದು ಶ್ಲಾಘನೀಯ’ ಎಂದರು.

ಚನ್ನಬಸವಾನಂದ ಸ್ವಾಮೀಜಿ, ಮಾತೆ ಬಸವರತ್ನ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಸಿದ್ದಣ್ಣ ನಟೆಗಲ, ಕೋಶಾಧ್ಯಕ್ಷ ಮಲ್ಲೇಶಪ್ಪ ಕುಸುಗಲ್, ಗಣ ನಾಯಕರಾದ ಬಿ.ಜಿ. ಹೊಸಗೌಡರ, ಚನಬಸಪ್ಪ ಕಗ್ಗಣ್ಣವರ, ಸೂರ್ಯಕಾಂತ ಶೀಲವಂತ, ಮಾರ್ತಾಂಡಪ್ಪ ಕರಿಯಪ್ಪನವರ, ಕೆ.ಎಸ್. ಕೋರಿಶೆಟ್ಟರ, ಚಂದ್ರಕಲಾ ಬಿರಾದಾರ, ಸುಜಾತಾ ಯರಗಟ್ಟಿ ಇದ್ದರು.

* * 

ಸಿಖ್‌ರಿಗೆ ಅಮೃತಸರ, ಬೌದ್ಧರಿಗೆ ಬುದ್ದಗಯಾ, ಮುಸ್ಲಿಂರಿಗೆ ಮೆಕ್ಕಾ ಹೇಗೆ ಪವಿತ್ರ ಸ್ಥಳವೋ ಹಾಗೆ ಲಿಂಗಾಯತರಿಗೆ ವಿಶ್ವಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮ ಪವಿತ್ರ ಸ್ಥಳ
ಮಾತೆ ಗಂಗಾದೇವಿ
ಅನುಭಾವ ಪೀಠಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.