ADVERTISEMENT

ಲೈಸನ್ಸ್ ಇಲ್ಲದೆ ವ್ಯಾಪಾರ, ಅನಧಿಕೃತ ಫಲಕ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 5:40 IST
Last Updated 17 ಆಗಸ್ಟ್ 2012, 5:40 IST
ಲೈಸನ್ಸ್ ಇಲ್ಲದೆ ವ್ಯಾಪಾರ, ಅನಧಿಕೃತ ಫಲಕ
ಲೈಸನ್ಸ್ ಇಲ್ಲದೆ ವ್ಯಾಪಾರ, ಅನಧಿಕೃತ ಫಲಕ   

ಹುಬ್ಬಳ್ಳಿ: ಅನಧಿಕೃತ ಜಾಹೀರಾತು ಫಲಕ ಹಾಗೂ ಪರವಾನಗಿ ರಹಿತ ವ್ಯಾಪಾರದ ಹಾವಳಿ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಲೆಕ್ಕಪತ್ರ ಸ್ಥಾಯಿ ಸಮಿತಿ  ಅಧ್ಯಕ್ಷ ಸುಧೀರ್ ಸರಾಫ್ ನೇತೃತ್ವದಲ್ಲಿ ಗುರುವಾರ ನಗರದ ವಿವಿಧೆಡೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.

ರಸ್ತೆ ಬದಿಯ ಜಾಹೀರಾತು ಫಲಕ ಅಳವಡಿಸುವಲ್ಲಿ ನಿಯಮ ಉಲ್ಲಂಘನೆ, ಅನಧಿಕೃತ ಫಲಕ ಅಳವಡಿಕೆ ಹಾಗೂ `ವ್ಯಾಪಾರ ಪರವಾನಗಿ~ (ಟ್ರೇಡ್ ಲೈಸನ್ಸ್) ಪಡೆಯದೆ ವ್ಯಾಪಾರ ಮಾಡುತ್ತಿರುವುದು ಇದೇ ವೇಳೆ ಬೆಳಕಿಗೆ ಬಂತು.
ಮಹಾನಗರ ಪಾಲಿಕೆ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಪಾಲಿಕೆಗೆ ಕೋಟ್ಯಂತರ ರೂಪಾಯಿ ಆದಾಯ ವಂಚಿಸುತ್ತಿ ರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿ ಗಳನ್ನು ಸುಧೀರ್ ತರಾಟೆಗೆ ತೆಗೆದುಕೊಂಡರು. 

  530 ಜಾಹಿರಾತು ಫಲಕ ಮಾತ್ರ: ಪಾಲಿಕೆ ದಾಖಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕೇವಲ 530 ಜಾಹಿರಾತು ಫಲ ಇದ್ದು, 30 ಏಜೆನ್ಸಿಗಳು ಪರವಾನಗಿ ಪಡೆದಿವೆ. ವಾರ್ಷಿಕ 78 ಲಕ್ಷ ರೂಪಾಯಿ ಶುಲ್ಕ ಭರಿಸಬೇಕಿದೆ. ಇಲ್ಲಿಯವರೆಗೆ 34 ಲಕ್ಷ ರೂಪಾಯಿ ತುಂಬಿದ್ದಾರೆ. ಉಳಿದವರಿಗೆ ನೋಟಿಸ್ ನೀಡಲಾಗಿದೆ. ಆದರೆ ಅವರು ಅದಕ್ಕೆ ಕಿಮ್ಮತ್ತು ನೀಡಿಲ್ಲ ಎಂದು ಮಹಾನಗರ ಪಾಲಿಕೆ ಮಾರುಕಟ್ಟೆ ಅಧಿಕಾರಿ ಎಂ.ಎನ್. ಪುಟ್ಟಣ್ಣ ಹಾಗೂ ಇನ್‌ಸ್ಪೆಕ್ಟರ್ ಪಿ.ಎನ್. ರಾಯ್ಕರ ವಿವರ ನೀಡಿದರು.

  ಜಾಹೀರಾತು ಮಾಫಿಯಾ: `ವಾಸ್ತವವಾಗಿ ಅವಳಿ ನಗರದಲ್ಲಿ ಐದು ಸಾವಿರಕ್ಕೂ ಹೆಚ್ಚು ಜಾಹಿರಾತು ಫಲಕಗಳಿದ್ದು, 530 ಮಾತ್ರ ಲೆಕ್ಕ ತೋರಿಸಲಾಗುತ್ತಿದೆ. ಸ್ಟೇಶನ್ ರಸ್ತೆಯಿಂದ ಹೊಸೂರು ವೃತ್ತದ ನಡುವೆಯೇ 500ಕ್ಕೂ ಹೆಚ್ಚು ಜಾಹೀರಾತು ಫಲಕಗಳಿವೆ. ಗುತ್ತಿಗೆ ದಾರರೊಂದಿಗೆ ಶಾಮೀಲಾಗದೆ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಪಾಲಿಕೆಗೆ 2 ಕೋಟಿಗೂ ಅಧಿಕ ಆದಾಯ ಬರುತ್ತದೆ~ ಎಂದು ಸುಧೀರ್ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಒಂದು ವಾರದೊಳಗಾಗಿ ಅನಧಿಕೃತ ಜಾಹಿರಾತು ಫಲಕಗಳ ಪಟ್ಟಿ ಮಾಡಿ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಪಾಲಿಕೆ ಸಾಮಾನ್ಯ ಸಭೆಯ ಎದುರು ಈ ವಿಷಯ ಇಟ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

  ನಿಯಮಾವಳಿ ಉಲ್ಲಂಘನೆ: ಪರವಾನಗಿ ಪಡೆದ ಏಜೆನ್ಸಿಗಳು ಫಲಕ ಅಳವಡಿಸುವಾಗ ನಿಗದಿತ ಮಿತಿಗಿಂತ ಹೆಚ್ಚಿನ ಗಾತ್ರದ ಫಲಕ ಅಳವಡಿಸುವುದು, ಜಾಹೀರಾತು ಫಲಕದಲ್ಲಿ ಸಂಸ್ಥೆಯ ಹೆಸರು ಹಾಗೂ ವಿಳಾಸ ಬರೆಯದಿರುವುದು ಕಂಡುಬಂತು.

 ವನ ನಿರ್ಲಕ್ಷ್ಯ: ವಿದ್ಯಾನಗರ, ಗೋಕುಲ ರಸ್ತೆ, ಸ್ಟೇಶನ್ ರಸ್ತೆಯಲ್ಲಿ ರಸ್ತೆ ವಿಭಜಕಗಳಲ್ಲಿ ಜಾಹೀರಾತು ಫಲಕ ಅಳವಡಿಸುವ ಮುನ್ನ ತಮ್ಮದೇ ಖರ್ಚಿನಲ್ಲಿ ಅಲ್ಲಿ `ಮೀಡಿಯನ್ ವನ~ ನಿರ್ಮಿಸಬೇಕೆಂಬ ನಿಯಮಾವಳಿ ಇದೆ.
 ಷರತ್ತು ಪೂರೈಕೆಯಾದ ನಂತರವೇ ಜಾಹೀರಾತು ಫಲಕ ಅಳವಡಿಸಲು ಪಾಲಿಕೆ ಯಿಂದ ನಿರ ಪೇಕ್ಷಣಾ ಪತ್ರ ಪಡೆಯಬೇಕಿದೆ. 

 ಆದರೆ ಗುತ್ತಿಗೆದಾರರು ನಿಯಮ ಪಾಲನೆಯ ಗೋಜಿಗೆ ಹೋಗದಿರುವುದು ಕಂಡುಬಂತು. ಪರಿಶೀಲನೆ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ರಾಘವೇಂದ್ರ ರಾಮದುರ್ಗ, ಹೂವಪ್ಪ ದಾಯಗೋಡಿ, ಪಾಲಿಕೆ ಅಧಿಕಾರಿಗಳು   ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.