ADVERTISEMENT

ವರ್ತುಲ ರಸ್ತೆ, ಫ್ಲೈಓವರ್: ಶೆಟ್ಟರ್ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 6:36 IST
Last Updated 24 ಏಪ್ರಿಲ್ 2013, 6:36 IST

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಹುಬ್ಬಳ್ಳಿ-ಧಾರವಾಡ ನಡುವೆ ವರ್ತುಲ ರಸ್ತೆ ಹಾಗೂ ಫ್ಲೈಓವರ್ ನಿರ್ಮಿಸಿಕೊಡುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ಇಲ್ಲಿನ ದೈವಜ್ಞ ಭವನದಲ್ಲಿ ಮಂಗಳವಾರ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರೊಡನೆ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು, ರಾಜಧಾನಿ ಬೆಂಗಳೂರಿಗೆ ಸರಿಸಾಟಿಯಾಗಿ ಅವಳಿ ನಗರವನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯ 67 ವಾರ್ಡ್‌ಗಳಲ್ಲೂ 24್ಡ7 ಕುಡಿಯುವ ನೀಡಿನ ಯೋಜನೆ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ. ಎಂಟು ವಾರ್ಡ್‌ಗಳ ವ್ಯಾಪ್ತಿಯಲ್ಲಿದ್ದ ಈ ಯೋಜನೆಯ ಪ್ರಯೋಜನವನ್ನು ಈಗಾಗಲೇ 100 ಕೋಟಿ ರೂಪಾಯಿ ವೆಚ್ಚದಲ್ಲಿ 20 ವಾರ್ಡ್‌ಗಳಿಗೆ ವಿಸ್ತರಿಸಲಾಗಿದೆ ಎಂದರು.

ಬಿಜೆಪಿ ಅಧಿಕಾರಾವಧಿಯಲ್ಲಿ ಧಾರವಾಡದಲ್ಲಿ ಟಾಟಾ ಮಾರ್ಕೊಪೋಲೊ ಕಂಪೆನಿಗೆ 2500 ಕೋಟಿ ರೂಪಾಯಿ ಹೂಡಿಕೆ ನೀಡಲು ಅವಕಾಶ ಮಾಡಿಕೊಟ್ಟ ಕಾರಣ ಸಾವಿರಾರು ಜನರು ಉದ್ಯೋಗಾವಕಾಶ ಪಡೆದಿದ್ದಾರೆ. ಅದೇ ರೀತಿ ಐಟಿ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ಹುಬ್ಬಳ್ಳಿಯಲ್ಲಿ ಇನ್‌ಫೋಸಿಸ್ ಕಂಪೆನಿಗೆ 50 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ 96ರಷ್ಟು ಸಾಕ್ಷರತೆ ಇದ್ದರೂ ಮತದಾನ ಮಾತ್ರ ಶೇ 55ರಿಂದ 60 ದಾಟುವುದಿಲ್ಲ. ಈ ಬಾರಿ ಶೇ 80ರಿಂದ 90ರಷ್ಟು ಮತದಾನ ಮಾಡಿ ತಮ್ಮ ಗೆಲುವಿನ ಅಂತರವನ್ನು ಹೆಚ್ಚಿಸುವಂತೆ ಶೆಟ್ಟರ್ ಮನವಿ ಮಾಡಿದರು.

ದೈವಜ್ಞ್ಯ ಸಮಾಜಕ್ಕೆ ಕೊಡುಗೆ: ದೈವಜ್ಞ್ಯ ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಎರಡು ಕೋಟಿ ರೂಪಾಯಿ ನೀಡಲಾಗಿದೆ. ಶಿವಮೊಗ್ಗದಲ್ಲಿ 10 ಎಕರೆ ಮಂಜೂರು ಮಾಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ ಹೇಳಿದರು.

ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ದೈವಜ್ಞ್ಯ ಬ್ರಾಹ್ಮಣ ಸಂಘಕ್ಕೆ ನಿವೇಶನ ಮಂಜೂರು ಮಾಡಲಾಗುವುದು. ಸಮಾಜದ ರಾಜ್ಯ ಘಟಕದ ಅಧ್ಯಕ್ಷ ರಾಮರಾವ್ ರಾಯ್ಕರ್ ಅವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ದೈವಜ್ಞ್ಯ ಸಮಾಜದ ಮುಖಂಡರಾದ ರಮೇಶ ವರ್ಣೇಕರ, ವಿಜಯ ವರ್ಣೇಕರ, ಮಹಾನಗರ ಪಾಲಿಕೆ ಸದಸ್ಯೆ ಲಕ್ಷ್ಮೀ ಉಪ್ಪಾರ, ಲಕ್ಷ್ಮಣ ಉಪ್ಪಾರ, ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.