ADVERTISEMENT

ವಿದ್ಯಾರ್ಥಿಗಳಿಂದ ಮೆರವಣಿಗೆ, ಮಾನವ ಸರಪಳಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 5:51 IST
Last Updated 19 ಡಿಸೆಂಬರ್ 2013, 5:51 IST

ಧಾರವಾಡ: ಬಡ ಪ್ರತಿಭಾವಂತ ವಿದ್ಯಾರ್ಥಿ­­ಗಳನ್ನು ವೃತ್ತಿ ಶಿಕ್ಷಣದಿಂದ ವಂಚಿತರನ್ನಾಗಿಸುವ ಉದ್ದೇಶ­ದಿಂದ ರಾಜ್ಯ ಸರ್ಕಾರ 2006ರ ಸಿಇಟಿ ಕಾಯ್ದೆ­­ಯನ್ನು ಜಾರಿಗೊಳಿಸಲು ಹೊರಟಿದೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಬುಧವಾರ ಇಲ್ಲಿನ ಜ್ಯುಬಿಲಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ನಗರದ ಕಲಾಭವನದಿಂದ ಹೊರಟ, ಆರ್ಎಲ್ಎಸ್, ಕಿಟೆಲ್ ಹಾಗೂ ಸೆಂಟ್ ಜೊಸೆಫ್ ಕಾಲೇಜಿನ ಸುಮಾರು 600ಕ್ಕೂ ಅಧಿಕ ಜನ ವಿದ್ಯಾರ್ಥಿಗಳು ಜ್ಯಬಿಲಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸುಮಾರು 15-–20 ನಿಮಿಷಗಳ ಕಾಲ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿದ್ದರಿಂದ ವಾಹನ ಸಂಚಾರಕ್ಕೆ ಆಸ್ಪದವೇ ಇಲ್ಲದಂತಾಯಿತು, ಹುಬ್ಬಳ್ಳಿ ಕಡೆಯಿಂದ ಹಾಗೂ ಹಳೆ ಬಸ್ ನಿಲ್ದಾಣದಿಂದ ಬರುವ ವಾಹನಗಳು 15 ನಿಮಿಷಗಳ ಕಾಲ ಅಲ್ಲಿಯೇ ನಿಲ್ಲಬೇಕಾಯಿತು.

ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ನಗರ ಕಾರ್ಯದರ್ಶಿ ಹರ್ಷ ಭಟ್, ‘ಸರ್ಕಾರ ಜಾರಿಗೊಳಿಸಲು ಹೊರಟಿರುವ ಸಿಇಟಿ ಕಾಯ್ದೆಯಿಂದ ಎಂಜಿನಿಯರಿಂಗ್‌ನ ಶೇ 45, ಮೆಡಿಕಲ್‌ನ ಶೇ 40 ಹಾಗೂ ದಂತ ವೈದ್ಯಕೀಯ ವಿಭಾಗದ ಶೇ 35ರಷ್ಟು ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿದ್ದು, ಯಾವುದೇ ಖಾಸಗಿ ಅನುದಾನರಹಿತ ಕಾಲೇಜಿನಲ್ಲಿ ಒಂದೂ ಸರ್ಕಾರಿ ಕೋಟಾದ ಸೀಟುಗಳು ಇಲ್ಲದಂತಾಗುತ್ತದೆ. ತನ್ನ ಪಾಲಿನ ಸೀಟುಗಳಿಗಾಗಿ ಕಾಮೆಡ್–-ಕೆ ನಡೆಸುವ ಪ್ರವೇಶ ಪರೀಕ್ಷೆಯ ಬಗ್ಗೆ ಈಗಾಗಲೇ ಹಲವಾರು ದೂರುಗಳಿದ್ದು, ಅಂಥದ್ದರಲ್ಲಿ ಸರ್ಕಾರ ಉಳಿದ ಸೀಟುಗಳಿಗೂ ಪರೀಕ್ಷೆ ನಡೆಸಲು ಕಾಮೆಡ್-–ಕೆ ಗೆ ಬಿಟ್ಟುಕೊಡುತ್ತಿರುವುದು ಖಂಡನೀಯ’ ಎಂದರು.

ಕಾರ್ಯಕರ್ತರಾದ ಜಗದೀಶ ಮಾನೆ, ಷರೀಫ್‌, ಮಂಜುನಾಥ ಧಾರವಾಡ, ಯಾಸೀನ್, ವಿಜಯ, ವಿನಯ, ಶ್ರೀಕಾಂತ, ಆಕಾಶ, ಪ್ರವೀಣ ಬೇಲೂರ ಸೇರಿದಂತೆ ಅನೇಕರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.