ADVERTISEMENT

ವಿವಿಧ ಸಂಘಟನೆಗಳಿಂದ ಸಿ.ಎಂ.ಗೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 9:14 IST
Last Updated 24 ಡಿಸೆಂಬರ್ 2017, 9:14 IST

ಧಾರವಾಡ: ಹಕ್ಕುಪತ್ರ ನೀಡಿ, ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರ್ಕಿಟ್ ಹೌಸ್ ಆವರಣದಲ್ಲಿ ವಿವಿಧ ಸಂಘಟನೆಗಳವರು ಶನಿವಾರ ಮನವಿ ಸಲ್ಲಿಸಿದರು.

ಕೊಳೆಗೇರಿ ಪ್ರದೇಶದ ನಿವಾಸಿಗಳ ಹಕ್ಕಿಗಾಗಿ ಹೋರಾಟ ಸಂಘ: ಹುಬ್ಬಳ್ಳಿ- ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ ಬರುವಂತಹ 106 ಕೊಳಗೇರಿ ಪ್ರದೇಶಗಳ ಪೈಕಿ 44 ಪ್ರದೇಶಗಳು ಸರ್ಕಾರದ ಜಾಗೆಯಲ್ಲಿ ನಿರ್ಮಾಣಗೊಂಡಿವೆ. ಈ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಅಂದಾಜು 14,413 ಮನೆಗಳಿದ್ದು, 1 ಲಕ್ಷಕ್ಕೂ ಆಧಿಕ ಜನರು ವಾಸಿಸುತ್ತಿದ್ದಾರೆ. ಶೇ 30ರಷ್ಟು ನಿವಾಸಿಗಳಿಗೆ ಮಾತ್ರ ಪರಿಚಯ ಪತ್ರ ವಿತರಿಸಲಾಗಿದ್ದು, ಹಕ್ಕು ಪತ್ರ ನೀಡಿಲ್ಲ ಎಂದು ಹ್ಯುಮ್ಯಾನಿಟಿ ಫೌಂಡೇಷನ್ ಅಧ್ಯಕ್ಷೆ ಸ್ವಾತಿ ಮಾಳಗಿ ದೂರಿದರು.

40 ವರ್ಷಗಳಿಂದ ಅಲ್ಲಿನ ನಿವಾಸಿಗಳು ಹಕ್ಕಿನಿಂದ ವಂಚಿತರಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಈ ಕುಟುಂಬಗಳಿಗೆ ಪರಿಚಯ ಹಾಗೂ ಕ್ರಯ ಪತ್ರ ವಿತರಿಸಲು ಮುಂದಾಗಬೇಕು. ಜಿಲ್ಲಾಡಳಿತಕ್ಕೆ ಕ್ರಮಕ್ಕೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಧಾರವಾಡ ತಾಲ್ಲೂಕಿನಲ್ಲಿ ಉಳಿಸಿ ಹೋರಾಟ ಸಮಿತಿ: ನೂತನ ಅಳ್ನಾವರ ತಾಲ್ಲೂಕಿನಲ್ಲಿ ಧಾರವಾಡ ತಾಲ್ಲೂಕಿನ ನಿಗದಿ, ಮುಗದ, ಮನಗುಂಡಿ, ಮನಸೂರ ಸೇರಿದಂತೆ 13 ಗ್ರಾಮ ಪಂಚಾಯ್ತಿಗಳನ್ನು ಸೇರಿಸುವುದನ್ನು ಕೈಬಿಡಬೇಕು. ಈ ಎಲ್ಲ ಗ್ರಾಮಗಳು ಧಾರವಾಡದಿಂದ 10 ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿವೆ. ಅಳ್ನಾವರ ಪಟ್ಟಣ ಈ ಗ್ರಾಮಗಳಿಂದ 40 ರಿಂದ 55 ಕಿ.ಮೀ. ದೂರದಲ್ಲಿದೆ. ಆದ್ದರಿಂದ ಅಳ್ನಾವರ ವ್ಯಾಪ್ತಿಗೆ ಸೇರಿಸಬಾರದು ಎಂದು ಮನವಿ ಮಾಡಿದರು.

ಧಾರವಾಡ ತಾಲ್ಲೂಕಿನಲ್ಲಿ ಉಳಿಸಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಮಹದೇವಪ್ಪ ನೀರಲಗಿ, ‘ರಾಜ್ಯ ಸರ್ಕಾರ ಹೆಚ್ಚಿನ ಮುತವರ್ಜಿ ವಹಿಸಿ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕಾಳಿ ನದಿ ಯೋಜನೆಯಡಿ ಎಲ್ಲ ಕೆರೆಗಳನ್ನು ತುಂಬಿಸಬೇಕು’ ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಆದಿ ಜಾಂಬವ ಮಾದರ ಸಂಘ: ‘ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿಗೊಳಿಸಬೇಕು. ಈಗಾಗಲೇ ನಡೆದಿರುವ ಸಮೀಕ್ಷೆಯ ವರದಿಯನ್ನು ಕೇಂದ್ರಕ್ಕೆಕಳುಹಿಸಬೇಕು’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ದೊಡ್ಡಮನಿ ಮನವಿ ಮಾಡಿದರು.

‘ಈ ಹಿಂದೆ ಕೂಡಲಸಂಗಮದಲ್ಲಿ ನಡೆದ ಕಾರ್ಯಕ್ರಮದಲ್ಲೂ ಮನವಿ ಮಾಡಿಕೊಳ್ಳಲಾಗಿತ್ತು. ಈಗಲೂ ಕೇಳುತ್ತಿದ್ದೇವೆ. ದಯವಿಟ್ಟು ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿ ಶೀಘ್ರದಲ್ಲಿ ಬೇಡಿಕೆ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.