ಧಾರವಾಡ: `ಯುವಜನರು ಬೌದ್ಧಿಕ ಶಿಕ್ಷಣ ಪಡೆದು ಹೊರಬಂದ ನಂತರ ಅಗತ್ಯದ ವೃತ್ತಿ ನೈಪುಣ್ಯತೆಯನ್ನು ಪಡೆದಲ್ಲಿ ಉದ್ಯೋಗಕ್ಕೆ ಅವಕಾಶಗಳು ಹೆಚ್ಚಾಗಿರುತ್ತವೆ~ ಎಂದು ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.
ಇಲ್ಲಿನ ಡಯಟ್ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಸುವರ್ಣ ವಸ್ತ್ರನೀತಿಯಡಿ ಆಯೋಜಿಸಿರುವ ಒಂದು ದಿನದ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಹತ್ತಿ ಹಾಗೂ ರೇಷ್ಮೆ ಉಡುಪುಗಳ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದೆ. ವಿದೇಶಗಳಿಗೆ ರಫ್ತು ಮಾಡುವ ಪ್ರಮಾಣ ಸಹ ಹೆಚ್ಚಾಗಿದೆ. ಇದರ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಗಣನೀಯವಾಗಿದೆ ಎಂದರು.
ಎಲ್ಲರಿಗೂ ಶಿಕ್ಷಣ, ಉದ್ಯೋಗ ದೊರಕಿಸಲು ವೃತ್ತಿ ನೈಪುಣ್ಯತೆ, ಕೌಶಲ ಒದಗಿಸಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸಿದ್ಧ ಉಡುಪು ತಯಾರಿಕಾ ಕ್ಷೇತ್ರದಲ್ಲಿ ಇಂದು ಹೆಚ್ಚಿನ ಅವಕಾಶಗಳಿದ್ದು, ಯುವಜನರು ಅದರಲ್ಲೂ ಮಹಿಳೆಯರು ಇಂಥ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮಗಳ ಉಪಯೋಗ ಪಡೆಯಬೇಕು ಎಂದು ಹೇಳಿದರು.
ಶಾಸಕಿ ಸೀಮಾ ಮಸೂತಿ ಮಾತನಾಡಿ, ಇಂದು ಕುಟುಂಬದ ಪ್ರತಿಯೊಬ್ಬ ಸದಸ್ಯರು ದುಡಿಮೆ ಮಾಡಬೇಕಾದ ಪರಿಸ್ಥಿತಿ ಇದೆ. ಕುಟುಂಬದ ಕಾರ್ಯದ ಜೊತೆಗೆ ಹೊರಗಿನ ದುಡಿಮೆಯನ್ನು ಸಂಭಾಳಿಸುವ ಗುರುತರ ಹೊಣೆ ಮಹಿಳೆಯರ ಮೇಲಿದೆ.
ಮಹಿಳೆಯರಿಗೆ ಸಿದ್ಧ ಉಡುಪು ಉದ್ಯೋಗ ಮತ್ತು ಅವಕಾಶ ಕಲ್ಪಿಸುವ ಕ್ಷೇತ್ರವಾಗಿದೆ. ಆದುದರಿಂದ ಜಿಲ್ಲೆಯಲ್ಲಿ ಸಿದ್ಧ ಉಡುಪು ತಯಾರಿಸುವ ಕೈಗಾರಿಕೆಗಳನ್ನು ಸ್ಥಾಪಿಸಲು ಹೆಚ್ಚಿನ ಪ್ರೋತ್ಸಾಹದ ಅವಶ್ಯಕತೆ ಇದೆ ಎಂದರು.
ಮೇಯರ್ ಪೂರ್ಣಾ ಪಾಟೀಲ, ಜಿಲ್ಲಾ ಪಂಚಾಯಿತಿಯ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಕರಡಿಕೊಪ್ಪ ಮಾತನಾಡಿದರು.
ಜವಳಿ ಇಲಾಖೆಯ ಯೋಜನಾ ನಿರ್ದೇಶಕ ವಿಜಯಕುಮಾರ ನಿರಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ನಿರ್ದೇಶಕಿ ಸುಮಲತಾ ಸ್ವಾಗತಿಸಿ, ನಿರೂಪಿಸಿದರು. ಸಣಕಲ್ಲ ವಂದಿಸಿದರು.
ನಂತರ ನಡೆದ ತಾಂತ್ರಿಕ ಅಧಿವೇಶನದಲ್ಲಿ ಉದ್ಯಮ, ಉದ್ಯಮಶೀಲತೆ ಕುರಿತು ಎಸ್.ಜಿ.ಗರಗ, ಜವಳಿ ಉದ್ಯಮಕ್ಕಿರುವ ಬೇಡಿಕೆ ಬಗ್ಗೆ ವಂದನಾ ಪಾಂಡೆ, ಸಿದ್ಧ ಉಡುಪು ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳು ಕುರಿತು ಎ.ಎಚ್.ಅಗ್ನಿಹೋತ್ರಿ, ಸಿದ್ಧ ಉಡುಪುಗಳ ಸಣ್ಣ ಘಟಕಗಳ ಸ್ಥಾಪನೆ ಬಗ್ಗೆ ಸುಜಾತಾ ಹಿರೇಮಠ ಉಪನ್ಯಾಸ ನೀಡಿದರು. 200 ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.