ADVERTISEMENT

ಶಾಪ ವಿಮೋಚನೆಗೆ ಕಾದಿದೆ ಚೆನ್ನಮ್ಮ ಸರ್ಕಲ್!

ಪ್ರವೀಣ ಕುಲಕರ್ಣಿ
Published 21 ಮಾರ್ಚ್ 2011, 7:20 IST
Last Updated 21 ಮಾರ್ಚ್ 2011, 7:20 IST
ಶಾಪ ವಿಮೋಚನೆಗೆ ಕಾದಿದೆ ಚೆನ್ನಮ್ಮ ಸರ್ಕಲ್!
ಶಾಪ ವಿಮೋಚನೆಗೆ ಕಾದಿದೆ ಚೆನ್ನಮ್ಮ ಸರ್ಕಲ್!   

ಹುಬ್ಬಳ್ಳಿ: ನಗರದ ಕಿತ್ತೂರು ಚೆನ್ನಮ್ಮ ಸರ್ಕಲ್‌ನಲ್ಲಿ ಪ್ರತಿಭಟನೆ-ಮೆರವಣಿಗೆಗಳನ್ನು ನಡೆಸದಂತೆ ನಿಷೇಧ ವಿಧಿಸಬೇಕೆಂಬ ಆಲೋಚನೆಗೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸದಾ ಒಂದಿಲ್ಲೊಂದು ಕಾರಣದಿಂದ ರಸ್ತೆ ಸಂಚಾರಕ್ಕೆ ತಡೆಯುಂಟಾಗಿ ಅನುಭವಿಸುವ ಹಿಂಸೆಗೆ ಇನ್ನಾದರೂ ತೆರೆ ಬೀಳಬೇಕು ಎಂಬ ಮಾತುಗಳು ಕೇಳಿ ಬಂದಿವೆ.

ನಗರದ ಈ ಹೃದಯ ಭಾಗದಲ್ಲಿ ಯಾವಾಗಲೂ ಸಂಚಾರ ಸ್ಥಗಿತಗೊಳ್ಳದಂತೆ ‘ಮೇಜರ್ ಸರ್ಜರಿ’ ಕೈಗೊಳ್ಳುವ ಅಗತ್ಯ ತೀವ್ರವಾಗಿದೆ ಎಂಬುದು ಬಹುತೇಕ ನಾಗರಿಕರ ಅಭಿಪ್ರಾಯವಾಗಿದೆ. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇ ಆದಲ್ಲಿ ಹೋರಾಟಗಾರರು ಶೀಘ್ರವೇ ತಮ್ಮ ಅತ್ಯಂತ ‘ನೆಚ್ಚಿನ ತಾಣ’ವನ್ನು ಕಳೆದುಕೊಳ್ಳಲಿದ್ದು, ಜನ ನೆಮ್ಮದಿಯಿಂದ ಓಡಾಡಬಹುದಾಗಿದೆ.

ಮೂರು ರಾಷ್ಟ್ರೀಯ ಹೆದ್ದಾರಿಗಳೂ ಸೇರಿದಂತೆ ಒಟ್ಟಾರೆ ಎಂಟು ರಸ್ತೆಗಳು ಈ ವೃತ್ತದ ಮೂಲಕ ಹಾಯ್ದು ಹೋಗುತ್ತವೆ. ಪುಣೆ-ಬೆಂಗಳೂರು (ಎನ್.ಎಚ್. 4), ಕಾರವಾರ-ಗೂಟಿ (ಎನ್.ಎಚ್. 63) ಮತ್ತು ಹುಬ್ಬಳ್ಳಿ-ಸೊಲ್ಲಾಪುರ (ಎನ್.ಎಚ್. 218) ರಾಷ್ಟ್ರೀಯ ಹೆದ್ದಾರಿಗಳು ಈ ಸರ್ಕಲ್‌ಅನ್ನು ದಾಟಿಕೊಂಡೇ ಮುನ್ನುಗ್ಗುತ್ತವೆ. ನಗರದ ಪ್ರಮುಖ ವಾಣಿಜ್ಯ ಪ್ರದೇಶಕ್ಕೆ ಹೋಗಲೂ ಈ ವೃತ್ತ ಒಂದು ಜಂಕ್ಷನ್ ಆಗಿ ಕಾರ್ಯ ನಿರ್ವಹಿಸುತ್ತದೆ.

ಚೆನ್ನಮ್ಮ ಸರ್ಕಲ್‌ನಲ್ಲಿ ನಿತ್ಯ 15 ಸಾವಿರ ವಾಹನಗಳು ಓಡಾಡುತ್ತವೆ ಎಂದರೆ ಸಂಚಾರ ಸಾಂದ್ರತೆಯನ್ನು ನೀವೇ ಊಹಿಸಿ. ಇಂತಹ ಸರ್ಕಲ್‌ನಲ್ಲಿ ವರ್ಷದಲ್ಲಿ ಕನಿಷ್ಠ ನೂರು ದಿನವಾದರೂ ಮೆರವಣಿಗೆ ಅಥವಾ ಪ್ರತಿಭಟನೆಗಳು ನಡೆಯುತ್ತವೆ. ಹೋಗುವ, ಬರುವ ಎಲ್ಲ ವಾಹನಗಳು ಗಂಟೆಗಳ ಕಾಲ ಸ್ಥಬ್ಧವಾಗಿ ನಿಂತಲ್ಲೇ ನಿಲ್ಲಬೇಕಾಗುತ್ತದೆ. ದಶಕಗಳಿಂದ ಇದು ಅನೂಚಾನವಾಗಿ ನಡೆದುಕೊಂಡು ಬಂದ ಪದ್ಧತಿ ಆಗಿಬಿಟ್ಟಿದೆ.

ಮೊದಲಾದರೆ ಪ್ರತಿಭಟನೆಗಳು ತೀರಾ ಕಡಿಮೆ ಸಂಖ್ಯೆಯಲ್ಲಿ ನಡೆಯುತ್ತಿದ್ದವು. ಈಗ ಧರಣಿ-ಪ್ರತಿಭಟನೆಗಳಿಗೆ ಕಾರಣವೇ ಬೇಕಿಲ್ಲ. 15-20 ಜನರಿದ್ದರೂ ಸರ್ಕಲ್‌ಗೆ ಬಂದು ಸಂಚಾರ ಬಂದ್ ಮಾಡುತ್ತಾರೆ. ನೀರು ಬಾರದಿದ್ದರೆ, ನಿವೇಶನ ಸಿಗದಿದ್ದರೆ, ಯಾರಿಗೋ ಬೈಯ್ದಿದ್ದರೆ, ಇನ್ಯಾರನ್ನೋ ಬಿಡುಗಡೆ ಮಾಡಬೇಕಿದ್ದರೆ, ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದರೆ, ತಮ್ಮ ವಾರ್ಡ್ ಬಿಟ್ಟು ಬೇರೆ ವಾರ್ಡ್‌ನಲ್ಲಿ ಕೆಲಸ ನಡೆದರೆ, ವೈಯಕ್ತಿಕ ವೈಷಮ್ಯ ಹೆಚ್ಚಾದರೆ, ಯಾರದ್ದೋ ಕೊಲೆಯಾದರೆ ಮೊದಲು ಗುರಿಯಾಗುವುದು ಚೆನ್ನಮ್ಮನ ಸರ್ಕಲ್ಲೇ. ಪಕ್ಷಗಳ ವಿಜಯೋತ್ಸವಕ್ಕೂ ಇದೇ ವೃತ್ತವೇ ಆಗಬೇಕು.

ವಾಹನಗಳು ಹೆಚ್ಚು-ಹೆಚ್ಚಾಗಿ ಕಿರಿಕಿರಿ ಅನುಭವಿಸುತ್ತಾ ನಿಂತಷ್ಟು ಹೋರಾಟಗಾರರ, ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗುತ್ತದೆ. ಧರಣಿ-ಪ್ರತಿಭಟನೆಯನ್ನು ಬೇಗ ಮುಗಿಸಲು ಮನಸ್ಸೇ ಬರುವುದಿಲ್ಲ. ನಗರದ ಗಮನ ಸೆಳೆಯಲು ಎಲ್ಲರಿಗೂ ಸರ್ಕಲ್‌ನಲ್ಲಿ ಸೇರುವುದು ಸುಲಭೋಪಾಯ ಎನಿಸಿಬಿಟ್ಟಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಕಾರ್ಮಿಕ ಯೂನಿಯನ್‌ಗಳ ಮುಖಂಡರು-ಕಾರ್ಯಕರ್ತರು ತಾವು ಅನ್ಯಾಯ ಅನುಭವಿಸಿದ್ದೇವೆ ಎಂಬ ಭಾವ ಬಂದಾಗಲೆಲ್ಲ ‘ನ್ಯಾಯ’ಕ್ಕಾಗಿ ಬರುವುದು ಇದೇ ಚೆನ್ನಮ್ಮನ ಸನ್ನಿಧಾನಕ್ಕೆ.

ಗಂಟೆಗಟ್ಟಲೆ ನಿಂತ ವಾಹನಗಳಲ್ಲಿ ಆ್ಯಂಬುಲೆನ್ಸ್ ಕೂಡ ಸಿಕ್ಕಿ ಹಾಕಿಕೊಂಡಿರುತ್ತದೆ ಮತ್ತು ಕಿಮ್ಸ್‌ಗೆ ಇದೇ ದಾರಿಯಲ್ಲಿ ಹೋಗಬೇಕು ಎಂಬ ಸಂಗತಿ ಎಂದಿಗೂ ಪ್ರತಿಭಟನಾಕಾರರ ಮನಸ್ಸನ್ನು ತಟ್ಟುವುದಿಲ್ಲ. ‘ಮಣ್ಣಿ’ಗಾಗಿ ದೂರದ ಊರಿಗೆ ಹೊರಟು ನಿಂತವರ ನೋವೂ ಅವರನ್ನು ಮುಟ್ಟುವುದಿಲ್ಲ. ಬೆಂಗಳೂರು, ಕಾರವಾರ, ಗದಗ, ವಿಜಾಪುರ, ಧಾರವಾಡ ಸೇರಿದಂತೆ ಎಲ್ಲೆಡೆಗೆ ಹೋಗುವ ರಸ್ತೆಗಳು ಆ ವೃತ್ತದ ಮೂಲಕವೇ ಹೋಗಬೇಕು.

ಹುಬ್ಬಳ್ಳಿ ಎಂದರೆ ಥಟ್ಟನೆ ನೆನಪಾಗುವುದು ಚೆನ್ನಮ್ಮನ ಸರ್ಕಲ್. 70 ಲಕ್ಷ ರೂಪಾಯಿ ವೆಚ್ಚದಲ್ಲಿ ಆ ವೃತ್ತವನ್ನು ಸುಂದರಗೊಳಿಸಲಾಗಿದೆ. ಹುಬ್ಬಳ್ಳಿಗರೆಲ್ಲ ಅದನ್ನು ಹೆಮ್ಮೆಯಿಂದ ನೋಡುವಂತಾಗಿದೆ. ಸಂಚಾರ ಸ್ಥಗಿತದಿಂದ ಯಾರೂ ನೋವು ಅನುಭವಿಸುವಂತೆ ಆಗಬಾರದು ಎಂಬುದು ಸಂಚಾರ ಸುರಕ್ಷತೆಗಾಗಿ ದುಡಿಯುತ್ತಿರುವ ಒಕ್ಕೂಟಗಳ ಅಭಿಪ್ರಾಯವಾಗಿದೆ. ಪೊಲೀಸ್ ಆಯುಕ್ತ ಡಾ.ಕೆ. ರಾಮಚಂದ್ರರಾವ್ ಈ ನಿಟ್ಟಿನಲ್ಲಿ ಆಲೋಚನೆ ಶುರು ಮಾಡಿರುವುದನ್ನು ಸ್ವಾಗತಿಸಿರುವ ಜನ, ಸರ್ಕಲ್‌ನಲ್ಲಿ ಎಲ್ಲ ಪ್ರತಿಭಟನೆಗಳನ್ನು ನಿಷೇಧಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.