ADVERTISEMENT

ಶಾಲಾ ದಿನಗಳಲ್ಲಿ 2 ಲಕ್ಷ; ಈಗ 36,000 ಮಕ್ಕಳಿಗೆ ಮಧ್ಯಾಹ್ನದ ಅನ್ನ ದಾಸೋಹ

​ಪ್ರಜಾವಾಣಿ ವಾರ್ತೆ
Published 4 ಮೇ 2012, 9:40 IST
Last Updated 4 ಮೇ 2012, 9:40 IST

ಹುಬ್ಬಳ್ಳಿ: ಬರಗಾಲ ಘೋಷಣೆಯಾದ ಹಿನ್ನೆಲೆಯಲ್ಲಿ ಬೇಸಿಗೆ ರಜೆಯಲ್ಲೂ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಮುಂದುವರಿಸುವ ರಾಜ್ಯ ಸರ್ಕಾರದ ಯೋಜನೆಗೆ ಜಿಲ್ಲೆಯಲ್ಲಿ ಅಂತಹ ಸ್ಪಂದನೆ ಸಿಕ್ಕಿಲ್ಲ. ಶಾಲಾ ದಿನಗಳಲ್ಲಿ ಮಧ್ಯಾಹ್ನದ ಭೋಜನವನ್ನು ಹೆಚ್ಚು ಕಡಿಮೆ ಎರಡು ಲಕ್ಷ ಜನ ಮಕ್ಕಳು ಸ್ವೀಕರಿಸುತ್ತಿದ್ದರೆ, ಈಗ ಅವರ ಸಂಖ್ಯೆ 36,000ಕ್ಕೆ ಕುಸಿದಿದೆ.

ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ಕಲಘಟಗಿಯೊಂದನ್ನು ಹೊರತುಪಡಿಸಿ -ಧಾರವಾಡ, ಹುಬ್ಬಳ್ಳಿ, ಕುಂದಗೋಳ ಮತ್ತು ನವಲಗುಂದ- ತಾಲ್ಲೂಕುಗಳು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಹಾಗಾಗಿ, ಈ ನಾಲ್ಕೂ ತಾಲ್ಲೂಕುಗಳಲ್ಲಿ ಬೇಸಿಗೆ ರಜೆಯಲ್ಲೂ ಬಿಸಿಯೂಟ ಪೂರೈಕೆ ಯೋಜನೆ ಜಾರಿಯಲ್ಲಿದೆ. ಬರದ ಬಿಸಿ ಅಷ್ಟಾಗಿಲ್ಲದ  ಕಲಘಟಗಿ ತಾಲ್ಲೂಕಿನ ಮಕ್ಕಳಿಗೆ ಮಾತ್ರ ಈ ಅದೃಷ್ಟ ಇಲ್ಲ.

ಜಿಲ್ಲೆಯಲ್ಲಿ ಬಿಸಿಯೂಟ ಪೂರೈಸುವ ಹೊಣೆಯನ್ನು ಇಸ್ಕಾನ್ ಸಂಸ್ಥೆಯ `ಅಕ್ಷಯ ಪಾತ್ರೆ~ ಘಟಕ ಹಾಗೂ ಅದಮ್ಯ ಚೇತನ ಎಂಬ ಸ್ವಯಂಸೇವಾ ಸಂಸ್ಥೆ ಜಂಟಿಯಾಗಿ ಹೊತ್ತುಕೊಂಡಿವೆ. ಸರ್ಕಾರಿ ಶಾಲೆಗಳಿಗೆ ಅಕ್ಷಯ ಪಾತ್ರೆಯಿಂದ ಅನ್ನ ದಾಸೋಹ ನಡೆದರೆ, ಅನುದಾನಿತ ಖಾಸಗಿ ಶಾಲೆಗಳಿಗೆ ಅದಮ್ಯ ಚೇತನ ಸಂಸ್ಥೆ ಊಟ ಪೂರೈಸುತ್ತಿದೆ.

`ಆಯಾ ಶಾಲೆಗಳಲ್ಲಿ ಎಷ್ಟು ಮಕ್ಕಳು ಈ ಯೋಜನೆ ಪ್ರಯೋಜನ ಪಡೆಯಲು ಬರುತ್ತಾರೆ ಎಂಬ ಮಾಹಿತಿ ಕೇಳಲಾಗಿತ್ತು. ಕೆಲವು ಶಾಲೆಗಳಿಂದ `ಯಾವ ಮಕ್ಕಳೂ ಊಟಕ್ಕೆ ಬರುವುದಿಲ್ಲ~ ಎಂಬ ಉತ್ತರ ಬಂದರೆ, ಮಿಕ್ಕ ಶಾಲೆಗಳ ಮುಖ್ಯ ಶಿಕ್ಷಕರು ಎಷ್ಟು ಮಕ್ಕಳಿಗೆ ಬಿಸಿಯೂಟ ಬೇಕಾಗುತ್ತದೆ ಎನ್ನುವ ಮಾಹಿತಿ ಕಳುಹಿಸಿಕೊಟ್ಟರು. ಶಾಲೆಗಳಿಂದ ಸಿಕ್ಕ ಮಾಹಿತಿ ಪ್ರಕಾರ ಬಿಸಿಯೂಟದ ವ್ಯವಸ್ಥೆಯನ್ನು ಮಾಡಲಾಗಿದೆ~ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಆನಂದ್ ಹೇಳುತ್ತಾರೆ.

ಬಿಸಿಯೂಟ ಪೂರೈಕೆಯಾಗುವ ಸಂದರ್ಭದಲ್ಲಿ `ಪ್ರಜಾವಾಣಿ~ ಗುರುವಾರ ಕೆಲವು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದಾಗ ಬಹುತೇಕ ಕಡೆ ಮಕ್ಕಳೇ ಇರಲಿಲ್ಲ. ಹೊಸೂರಿನ ಸರ್ಕಾರಿ ಶಾಲೆ ನಂ. 16ರಲ್ಲಿ `ಮಧ್ಯಾಹ್ನ ಕೆಲವು ಮಕ್ಕಳು ಬರುತ್ತವೆ ಸರ್~ ಎಂದು ಕಚೇರಿಯಲ್ಲಿ ಉಪಸ್ಥಿತರಿದ್ದ ಶಿಕ್ಷಕರು ಹೇಳಿದರು. ಮಧ್ಯಾಹ್ನ 12ಕ್ಕೆ ಬಂದಿದ್ದ ಬಿಸಿಯೂಟ 1.30ರ ಸುಮಾರಿಗೆ ಬರಲಿದ್ದ ಬೆರಳೆಣಿಕೆ ಮಕ್ಕಳಿಗಾಗಿ ತಣ್ಣಗೆ ಕಾಯುತ್ತಿತ್ತು.
 
`ಶಾಲೆ ಸೇರದ ಅಕ್ಕ-ಪಕ್ಕದ ಕೆಲ ಮಕ್ಕಳೂ ಇದರ ಪ್ರಯೋಜನ ಪಡೆಯುತ್ತಾರೆ~ ಎಂಬ ಮಾಹಿತಿಯೂ ಅಲ್ಲಿದ್ದ ಶಿಕ್ಷಕರಿಂದ ಸಿಕ್ಕಿತು.ಸರ್ಕಾರದ ರಜಾದಿನದ ಬಿಸಿಯೂಟ ಯೋಜನೆಗೆ ಪೂರಕವಾಗಿ ಅಶೋಕನಗರದ ಸರ್ಕಾರಿ ಶಾಲೆ ನಂ. 13ರ ಶಿಕ್ಷಕ ವೃಂದ ಮಕ್ಕಳಿಗೆ ವಿವಿಧ ಕೌಶಲವನ್ನು ಹೇಳಿಕೊಡುವ ಕಾರ್ಯಕ್ರಮ ಹಾಕಿಕೊಂಡಿದೆ.
 
ಮಧ್ಯಾಹ್ನದ ಹೊತ್ತಿಗೆ ಶಾಲೆಗೆ ಬರುವ ಮಕ್ಕಳು, ಮೈದಾನದಲ್ಲಿ ತುಸು ಸಮಯ ಆಟವಾಡಿದ ಮೇಲೆ ಅಲ್ಲಿಯೇ ಬಿಸಿಯೂಟ ಸ್ವೀಕರಿಸುತ್ತವೆ. ಊಟದ ಬಳಿಕ ನೃತ್ಯ-ಸಂಗೀತ ಪಾಠ ನಡೆಯುತ್ತದೆ. 300 ಮಕ್ಕಳನ್ನು ಹೊಂದಿರುವ ಈ ಶಾಲೆಯಲ್ಲಿ ಈಗ ಬರುತ್ತಿರುವ ಮಕ್ಕಳ ಸಂಖ್ಯೆ 30ರಿಂದ 40 ಮಾತ್ರ.

ವಿಶ್ವೇಶ್ವರನಗರದ ತೆಗ್ಗಿನ ಶಾಲೆಯ ಸ್ಥಿತಿಯೂ ಇದಕ್ಕಿಂತ ಭಿನ್ನವೇನೂ ಆಗಿಲ್ಲ. ಆದರೆ, ಹಳೇಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಬದಲಾಗಿದೆ ಎನ್ನುತ್ತಾರೆ `ಅಕ್ಷಯ ಪಾತ್ರೆ~ಯ ಊಟ ಒಯ್ಯುವ ಸಿಬ್ಬಂದಿ. ಶಾಲೆಯ ಮಕ್ಕಳ ಸಂಖ್ಯೆಯಲ್ಲಿ ಅರ್ಧದಷ್ಟಾದರೂ ಬರುತ್ತಾರೆ.

ಅಲ್ಲೇ ಆಟವಾಡಿ ಊಟ ಮಾಡಿಕೊಂಡು ಹೋಗುತ್ತಾರೆ ಎನ್ನುವುದು ಅವರ ವಿವರಣೆ. ಗ್ರಾಮಾಂತರ ಭಾಗದಲ್ಲಿ ಬಿಸಿಯೂಟ ಸ್ವೀಕರಿಸುವ ಮಕ್ಕಳ ಸಂಖ್ಯೆ ದೊಡ್ಡದಿದೆ ಎಂದೂ ಅವರು ಹೇಳುತ್ತಾರೆ.`ಜಿಲ್ಲೆಯ 928 ಶಾಲೆಗಳಲ್ಲಿ ಸದ್ಯ ಬಿಸಿಯೂಟ ಸರಬರಾಜು ಆಗುತ್ತಿದೆ.
 
ಅಕ್ಷಯ ಪಾತ್ರೆಯಿಂದಲೇ 641 ಶಾಲೆಗಳ 30,483 ಮಕ್ಕಳಿಗೆ ಊಟ ಒಯ್ಯಲಾಗುತ್ತಿದೆ. ರಜೆ ಶುರುವಾಗುವ ಮುನ್ನ 789 ಶಾಲೆಗಳ 1.80 ಲಕ್ಷ ಮಕ್ಕಳಿಗೆ ಊಟ ನೀಡುತ್ತಿದ್ದೆವು. ಅದಕ್ಕಾಗಿ ನಿತ್ಯ 15 ಕ್ವಿಂಟಲ್ ಅಕ್ಕಿ, 3.5 ಕ್ವಿಂಟಲ್ ಬೇಳೆ ಉಪಯೋಗಿಸುತ್ತಿದ್ದೆವು~ ಎಂದು ಇಸ್ಕಾನ್ ಸಂಸ್ಥೆ ಹುಬ್ಬಳ್ಳಿ ಘಟಕದ ಮುಖ್ಯಸ್ಥ ರಾಜೀವ ಲೋಚನ ದಾಸ ವಿವರಿಸುತ್ತಾರೆ.

ಏಪ್ರಿಲ್ 21ರಿಂದ ಈ ಸೌಲಭ್ಯವನ್ನು ಆರಂಭಿಸಲಾಗಿದ್ದು, ಮೇ 28ರ ವರೆಗೆ ಮುಂದುವರಿಯಲಿದೆ. ಮೇ 29ರಂದು ಶಾಲೆಗಳು ಪುನರಾರಂಭ ಆಗಲಿದ್ದು, ಎಂದಿನಂತೆ ಎಲ್ಲ ಮಕ್ಕಳಿಗೆ ಬಿಸಿಯೂಟ ಪೂರೈಕೆಯಾಗಲಿದೆ ಎಂದು ಡಿಡಿಪಿಐ ಆನಂದ್ ಮಾಹಿತಿ ನೀಡುತ್ತಾರೆ.

`ಬಹುತೇಕ ಮಕ್ಕಳು ರಜೆಗಾಗಿ ಊರಿಗೆ ಹೋಗಿರುತ್ತವೆ. ಮೇಲಾಗಿ ಊಟಕ್ಕಾಗಿಯೇ -ಅದೂ ಬರಿ ಅನ್ನ, ಸಾರಿಗಾಗಿ ಶಾಲೆವರೆಗೆ ಈ ಮಕ್ಕಳು ಬರುವುದು ಕಷ್ಟ. ಮನೆಯಲ್ಲಿ ಊಟದ ತೊಂದರೆ ಇದ್ದವರು ದುಡಿಯಲು ಹೋಗು ತ್ತಾರೆಯೇ ಹೊರತು ಇಲ್ಲಿಗೆ ಬರುವುದಿಲ್ಲ. ಉಳಿದವರು ಕಳಿಸುವುದಿಲ್ಲ~ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕಿಯೊಬ್ಬರು ವಾಸ್ತವಾಂಶವನ್ನು ತೆರೆದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.