ADVERTISEMENT

ಶುದ್ಧ ಗಾಳಿಗೆ ಪರಿಸರ ಸಂರಕ್ಷಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 5:25 IST
Last Updated 2 ಜುಲೈ 2012, 5:25 IST

ಧಾರವಾಡ: “ಮುಂದಿನ ಜನಾಂಗಕ್ಕೆ ಶುದ್ಧ ನೀರು, ಗಾಳಿ ನೀಡಬೇಕಾದರೆ ಇಂದು ಪ್ರತಿಯೊಬ್ಬರೂ ಪರಿಸರವನ್ನು ಸಂರಕ್ಷಿಸಬೇಕು” ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಸಲಹೆ ನೀಡಿದರು.

ನಗರದ ಭಾರತೀಯ ಸ್ಟೇಟ್ ಬ್ಯಾಂಕ್, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಹಾಗೂ ರಾಜ್ಯ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ವನ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, “ಅಭಿವೃದ್ಧಿ ಕುರಿತ ಕಲ್ಪನೆ ನಮ್ಮಲ್ಲಿ ಸರಿಯಾಗಿರಬೇಕು. ನಗರಗಳ ವ್ಯಾಪಕ ಬೆಳವಣಿಗೆ ಹಾಗೂ ಕೈಗಾರಿಕೀಕರಣ ಗಳಿಂದಾಗಿ ಪರಿಸರ ಅಸಮತೋಲನಗೊಂಡಿದೆ” ಎಂದು ವಿಷಾದಿಸಿದರು.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವಿ.ಎಂ.ಹಲಗತ್ತಿ, “ಇಲಾಖೆ ವತಿಯಿಂದ ಆರು ಲಕ್ಷ ಸಸಿಗಳನ್ನು ಜಿಲ್ಲೆಯಾದ್ಯಂತ ನೆಡಲಾಗುವದು ಹಾಗೂ ಅವಳಿ ನಗರಗಳಲ್ಲಿ 14 ಸಾವಿರ ವಿವಿಧ ಜಾತಿಯ ಸಸಿಗಳನ್ನು ನೆಡಲಾಗುವುದು. ಜಿಲ್ಲೆಯ ರೈತರಿಗೆ ಇಲಾಖೆಯು ಉಚಿತವಾಗಿ ಎರಡು ಲಕ್ಷ ಸಸಿಗಳನ್ನು ವಿತರಿಸುವ ಪ್ರೋತ್ಸಾಹ ಯೋಜನೆಯನ್ನು ಹಾಕಿಕೊಂಡಿದೆ. ಇದರ ಜತೆಗೆ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ 35 ಸಾವಿರ ಸಸಿಗಳನ್ನು ಕೊಡಲಾಗುತ್ತಿದೆ. ರಾಯಾಪೂರದ ಹತ್ತಿರ ಟ್ರೀ ಪಾರ್ಕ್ ಯೋಜನೆಯನ್ನು ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು” ಎಂದು ತಿಳಿಸಿದರು.

ಸ್ಟೇಟ್ ಬ್ಯಾಂಕ್‌ನ ಉಪಪ್ರಧಾನ ವ್ಯವಸ್ಥಾಪಕ ವೇಣುಗೋಪಾಲ ರೆಡ್ಡಿ, “ಪರಿಸರ ಸಂರಕ್ಷಣೆ ಸಾಮಾಜಿಕ ಜವಾಬ್ದಾರಿ. ಇದು ಎಲ್ಲ ನಾಗರಿಕರ ಕರ್ತವ್ಯ ಆಗಬೇಕು. ನೆಡಲಾದ ಸಸಿಗಳನ್ನು ಸಂರಕ್ಷಿಸಿ, ಪೋಷಿಸುವುದು ನಮ್ಮೆಲ್ಲರ ಹೊಣೆ. ಕಾಗದ ರಹಿತ  ಗ್ರೀನ್ ಚಲನ್ ಕೌಂಟರ್‌ಗಳನ್ನು ಬ್ಯಾಂಕ ಆರಂಭಿಸಿದೆ. ಇದರಿಂದ ಗ್ರಾಹಕರು ಹಣವನ್ನು ಎಟಿಎಂನಿಂದ ಪಡೆದು ಪೇಪರ್ ಬಳಕೆ ಕಡಿಮೆ ಮಾಡಬಹುದು” ಎಂದರು.

ಸೌರ ವಿದ್ಯುತ್ ಚಾಲಿತ ಶಾಖೆಗಳನ್ನು ಸ್ಟೇಟ್ ಬ್ಯಾಂಕ್ ಸ್ಥಾಪಿಸುತ್ತಿದೆ. ಈಗಾಗಲೇ ಬೀದರ ಜಿಲ್ಲೆಯ ಒಂದು ಶಾಖೆಯು ಪೂರ್ಣ ಪ್ರಮಾಣದ ಸೌರ ವಿದ್ಯುತ್ತಿನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪ್ತಿ ಭಟ್ಕಳ ಪ್ರಾರ್ಥಿಸಿದರು. ಯು.ಬಿಭಟ್ಕಳ ಸ್ವಾಗತಿಸಿದರು. ಪರಿಸರ ಸಮಿತಿ ಉಪಾಧ್ಯಕ್ಷ ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ನಿರೂಪಿಸಿದರು. ಜಗದೀಶ ರಾವ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.