ADVERTISEMENT

ಶ್ರೀರಾಮ ಸೇನೆ ಸಂಘಟನೆ ನಿಷೇಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 9:10 IST
Last Updated 6 ಜನವರಿ 2012, 9:10 IST

ಹುಬ್ಬಳ್ಳಿ: `ಕೋಮುದ್ವೇಷ ಬೆಳೆಸಲು ಹುನ್ನಾರ ನಡೆಸಿ ಸಿಕ್ಕಿಬಿದ್ದ ಶ್ರೀರಾಮ ಸೇನೆ ಸಂಘಟನೆ ಮೇಲೆ ನಿಷೇಧ ವಿಧಿಸಬೇಕು~ ಎಂದು ಆಗ್ರಹಿಸಿ ಕರ್ನಾಟಕ ಮುಸ್ಲಿಂ ಏಕೀಕರಣ ಸಮಿತಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮೂಲಕ ಗೃಹ ಸಚಿವ ಆರ್. ಅಶೋಕ್ ಅವರಿಗೆ ಮನವಿ ಅರ್ಪಿಸಿದರು.

`ಸದ್ಭಾವನೆಗೆ ಹೆಸರಾದ ವಿಜಾಪುರ ಜಿಲ್ಲೆ ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜವನ್ನು ಹಾರಿಸಿ, ಗೊಂದಲದ ವಾತಾವರಣ ಸೃಷ್ಟಿಸುವ ಮೂಲಕ ಮುಸ್ಲಿಮರ ಮೇಲೆ ಗೂಬೆ ಕೂಡಿಸುವ ಷಡ್ಯಂತ್ರ ನಡೆದಿತ್ತು~ ಎಂದು ದೂರಿದ ಪ್ರತಿಭಟನಾಕಾರರು, `ಪುರಾವೆಸಹಿತ ಶ್ರೀರಾಮ ಸೇನೆ ಪದಾಧಿಕಾರಿಗಳನ್ನು ಬಂಧಿಸುವ ಮೂಲಕ ಪೊಲೀಸರು ದಿಟ್ಟ ಕ್ರಮ ಕೈಗೊಂಡಿದ್ದಾರೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`ಕಪಟ ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಬೇಕು ಹಾಗೂ ಶ್ರೀರಾಮ ಸೇನೆ ಮೇಲೆ ನಿಷೇಧ ಹೇರಬೇಕು~ ಎಂದು ಅವರು ಒತ್ತಾಯಿಸಿದರು. `ಕೋರ್ಟ್‌ನಲ್ಲಿ ಬಾಂಬ್ ಸ್ಫೋಟಿಸಿದ ಆರೋಪ ಹೊತ್ತಿದ್ದ ನಾಗರಾಜ ಜಂಬಗಿ ಸಹ ಪ್ರಮೋದ್ ಅವರ ಬಂಟನಾಗಿದ್ದ~ ಎಂದ ಕಾರ್ಯಕರ್ತರು, `ಶ್ರೀರಾಮ ಸೇನೆಯ ಸಮಾಜ ವಿರೋಧಿ ಚಟುವಟಿಕೆಗಳಿಗೆ ಸಾಕಷ್ಟು ಪುರಾವೆಗಳಿದ್ದು, ಸರ್ಕಾರ ಕ್ರಮ ಕೈಗೊಳ್ಳಬೇಕು~ ಎಂದರು.

ಸಮಿತಿ ಅಧ್ಯಕ್ಷ ದಾದಾಪೀರ್ ಕೊಪ್ಪಳ, ಮುಖಂಡರಾದ ಎಂ.ಕೆ. ನದಾಫ್, ಕೆ.ಜಿ. ಹಳ್ಯಾಳ, ಸಿ.ಎಲ್. ಅನ್ಸಾರಿ, ಸಲಾವುದ್ದೀನ್ ಮುಲ್ಲಾ, ರಫಿಕ್ ಮನಿಯಾರ್ ಮತ್ತಿತರರು ನೇತೃತ್ವ ವಹಿಸಿದ್ದರು.

ಅಲ್ಪಸಂಖ್ಯಾತರ ಒಕ್ಕೂಟದಿಂದ ಪ್ರತಿಭಟನೆ: ಸಿಂದಗಿ ತಹಸೀಲ್ದಾರರ ಕಚೇರಿ ಮೇಲೆ ಪಾಕಿಸ್ತಾನ ಧ್ವಜವನ್ನು ಹಾರಿಸಿದ ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು ಹಾಗೂ ಸಂಘಟನೆ ಮೇಲೆ ನಿಷೇಧ ವಿಧಿಸಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾ ದಲಿತ, ಅಲ್ಪಸಂಖ್ಯಾತ ಹಾಗೂ ಪ್ರಗತಿಪರ ಒಕ್ಕೂಟ ಗುರುವಾರ ಪ್ರತಿಭಟನೆ ನಡೆಸಿತು.

ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ ಶ್ರೀರಾಮ ಸಂಘಟನೆ ಮೇಲೆ ತಕ್ಷಣ ನಿಷೇಧ ವಿಧಿಸಬೇಕು ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಧಾರವಾಡ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಅನ್ವರ್ ಮುಧೋಳ, ಪ್ರಸಾದ ಅಬ್ಬಯ್ಯ, ರಾಜಶೇಖರ ಮೆಣಸಿನಕಾಯಿ, ನಜೀರ್ ಅಹ್ಮದ್ ಕೋಲಕಾರ, ಬಾಬಾಜಾನ್ ಮುಧೋಳ, ಕಲ್ಲಪ್ಪ ಎಲಿವಾಳ, ಶಫಿ ಮುದ್ದೇಬಿಹಾಳ, ಅಲ್ತಾಫ್ ಹಳ್ಳೂರ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಜೆಡಿಎಸ್ ಆಗ್ರಹ
ಶ್ರೀರಾಮ ಸೇನೆ ಸಂಘಟನೆ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಗುರುವಾರ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು. ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ, ಎನ್.ಎಚ್. ಕೋನರೆಡ್ಡಿ, ಸುರೇಶ ಹಿರೇಮಠ, ರಾಘವೇಂದ್ರ ಸಂಡೂರ ಮತ್ತಿತರರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT