ಲಕ್ಕುಂಡಿ (ಗದಗ ತಾ.): ಇಲ್ಲಿನ ಐತಿಹಾಸಿಕ ಹಾಲಗೊಂಡ ಬಸವೇಶ್ವರ ರಥೋತ್ಸವ ಸೋಮವಾರ ಸಂಜೆ ಸಡಗರ-ಸಂಭ್ರಮದಿಂದ ನೆರವೇರಿತು.
ಶ್ರಾವಣ ಕೊನೆಯ ಸೋಮವಾರ ಪ್ರತಿ ವರ್ಷ ಜರುಗುವ ರಥೋತ್ಸವವೂ ಈ ಬಾರಿಯೂ ಸುತ್ತಮುತ್ತಲ ಗ್ರಾಮಗಳಿಂದ ಅಪಾರ ಭಕ್ತರು ಆಗಮಿಸಿದ್ದರು. ಗ್ರಾಮದಲ್ಲಿನ 14 ಭಜನಾ ತಂಡಗಳು ಹಾಗೂ ವಿವಿಧ ಹೂವುಗಳಿಂದ ನಿರ್ಮಿಸಲಾದ ಶಿವ ಶರಣರ ಭಾವ ಚಿತ್ರಗಳ ಮೆರವಣಿಗೆ ನೆರೆದ ಜನರನ್ನು ಆಕರ್ಷಿಸಿತು.
ಪ್ರತಿಯೊಂದು ತಂಡದ ಸದಸ್ಯರು ಒಂದೇ ಬಣ್ಣದ ಬಟ್ಟೆ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಭಾವಗೀತೆ, ತತ್ವಪದ, ಜಾನಪದ, ಹಾಗೂ ಭಕ್ತಿ ಪದಗಳನ್ನು ದಾರಿಯುದ್ದಕ್ಕೂ ತಂಡದವರು ಹಾಡುತ್ತಿದ್ದದ್ದು ನೆರೆದ ಜನರಲ್ಲಿ ಭಕ್ತಿ ಉಕ್ಕುವಂತೆ ಮಾಡಿತು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು.
ಇದಕ್ಕೂ ಮುನ್ನ ಬಸವೇಶ್ವರ ಮೂರ್ತಿಗೆ ವಿಶೆಷ ಪೂಜೆ ಸಲ್ಲಿಸಲಾಯಿತು. ಭಕ್ತರು ತಂಡಪೊತಂಡವಾಗಿ ಆಗಮಿಸಿ ಪೂಜೆ ಸಲ್ಲಿಸಿ ಕಾಣಿಕೆ ಹಾಗೂ ನೈವೇದ್ಯ ಸಲ್ಲಿಸಿದರು. ಅನ್ನ ಸಂತರ್ಪಣೆಯೂ ಜರುಗಿತು.
ಸಂಜೆ 4 ಗಂಟೆಗೆ ಬಸವೇಶ್ವರ ರಥೋತ್ಸಕ್ಕೆ ಗ್ರಾಮದ ಅಲ್ಲಮಪ್ರಭು ಮಠದ ಸ್ವಾಮೀಜಿ ವೀರೇಶ್ವ ದೇವರು ಚಾಲನೆ ನೀಡಿದರು. ಡೊಳ್ಳು, ಜಾಂಜ ಮೇಳ, ನಂದಿಕೋಲ ಮೇಳ ಹಾಗೂ ಬಜಂತ್ರಿ ಮೇಳಗಳು ಪಾಲ್ಗೊಂಡು ರಥೋತ್ಸವಕ್ಕೆ ಕಳೆ ತಂದವು.
ಗ್ರಾಮದ ಬಜಾರ ರಸ್ತೆಯಲ್ಲಿ ಜರುಗುವ ರಥೋತ್ಸವದ ತೇರಿಗೆ ಭಕ್ತಾದಿಗಳು ಉತ್ತತ್ತಿ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿಯನ್ನು ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.