ADVERTISEMENT

ಸಂಭ್ರಮ, ಸಡಗರದ ದಸರಾ ಉತ್ಸವ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2013, 6:01 IST
Last Updated 15 ಅಕ್ಟೋಬರ್ 2013, 6:01 IST
ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಭಾನುವಾರ ಧಾರವಾಡಲ್ಲಿ ಹಮ್ಮಿಕೊಂಡಿದ್ದ ಜಂಬೂ ಸವಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಸಚಿವ ಎಚ್‌.ಕೆ.ಪಾಟೀಲ ಪುಷ್ಪಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಮಾಜಿ ಶಾಸಕಿ ಸೀಮಾ ಮಸೂತಿ, ಸಮಾಜವಾದಿ ಪಕ್ಷದ ರಾಜ್ಯ ಅಧ್ಯಕ್ಷ ಬಾಬಾಗೌಡ ಪಾಟೀಲ ಇದ್ದಾರೆ
ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಭಾನುವಾರ ಧಾರವಾಡಲ್ಲಿ ಹಮ್ಮಿಕೊಂಡಿದ್ದ ಜಂಬೂ ಸವಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಸಚಿವ ಎಚ್‌.ಕೆ.ಪಾಟೀಲ ಪುಷ್ಪಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಮಾಜಿ ಶಾಸಕಿ ಸೀಮಾ ಮಸೂತಿ, ಸಮಾಜವಾದಿ ಪಕ್ಷದ ರಾಜ್ಯ ಅಧ್ಯಕ್ಷ ಬಾಬಾಗೌಡ ಪಾಟೀಲ ಇದ್ದಾರೆ   

ಧಾರವಾಡ: ಮೈಸೂರಿನಲ್ಲಿ ರಾಜರ ವೈಭವಿಕರಣಕ್ಕಾಗಿ, ಅವರನ್ನು ಸಂತುಷ್ಟಿಗೊಳಿ­ಸಲು ಪ್ರಾರಂಭಿಸಿದ ದಸರಾ ಉತ್ಸವ ವಿಶ್ವ ವಿಖ್ಯಾತಿ ಪಡೆದಿದ್ದು ಹೆಮ್ಮೇಯ ವಿಷಯ­ವಾಗಿದ್ದು, ಧಾರವಾಡ ಭಾಗದಲ್ಲಿ ನಡೆಯುವ ದಸರಾ ಉತ್ಸವಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಇಲಾಖೆ ಸಚಿವ ಎಚ್‌.ಕೆ.ಪಾಟೀಲ ಭರವಸೆ ನೀಡಿದರು.

ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿಯು ಭಾನುವಾರ ಗಾಂಧಿನಗರ­ದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಂಬೂ ಸವಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕ ಭಾಗದಲ್ಲಿ ದಸರಾ ಎಂದರೆ ಬನ್ನಿ ಕೊಡುವ ಮೂಲಕ ಎಷ್ಟೆ ದೊಡ್ಡ ವ್ಯಕ್ತಿ ಇದ್ದರೂ ಒಬ್ಬರಿಗೊಬ್ಬರು ನಮಿಸಿ ಸಣ್ಣವರಿಗೂ ಗೌರವಿಸುವದಾಗಿದೆ’ ಎಂದರು.

ಮೈಸೂರ ಮಾದರಿಯಲ್ಲಿ ನಮ್ಮಲ್ಲಿಯೂ ಅನೇಕ ಸಾಂಸ್ಕೃತಿಕ ಕಾರ್ಯ­ಕ್ರಮಗಳನ್ನು ಏರ್ಪಡಿಸಿ ಕಲಾಕಾರರನ್ನು ಕರೆಸಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ. ಬರುವ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳಿಗೆ, ಕಲೆಗಳಿಗೆ ಹೆಚ್ಚು ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಸಮಾಜವಾದಿ ಪಕ್ಷದ ರಾಜ್ಯ ಅಧ್ಯಕ್ಷ ಬಾಬಾಗೌಡ ಪಾಟೀಲ, ‘ಇಂಥ ಉತ್ಸವಗಳು ಗ್ರಾಮಗಳಿಂದ ಪ್ರಾರಂಭವಾಗಿದ್ದು ಇಂದು ಅಂಥವುಗಳು ನಶಿಸುತ್ತಿರುವುದು ಖೇದಕರ. ಪಾಶ್ಚಾತ್ಯ ಶೈಲಿಗೆ ಮಾರುಹೋಗದೆ ನಮ್ಮ ಸಂಸ್ಕ್ರತಿಯನ್ನು ಉಳಿಸಿಕೊಂಡು ಹೋಗುವುದು ಜನತೆಯ ಆದ್ಯ ಕರ್ತವ್ಯವಾಗಬೇಕು’ ಎಂದು ತಿಳಿಸಿದರು.

ಮಾಜಿ ಸಚಿವರಾದ ಹನುಮಂತಪ್ಪ ಅಲ್ಕೋಡ, ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿದರು.
ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಮೀಜಿ, ಹುಬ್ಬಳ್ಳಿ ಮೂರಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಕಲಾತಂಡಗಳಾದ ಪೂಜಾ ಕುಣಿತ, ನಗಾರಿ, ಬೆಂಕಿ ಕರಗ,  ಮಲ್ಲಕಂಬ, ಡೊಳ್ಳು, ಚಂಡೆ ವಾದ್ಯ, ತಮಟೆ, ಆಕರ್ಷಕ ಗೊಂಬೆಗಳು, ಯಕ್ಷಗಾನದ ವೇಷಧಾರಿಗಳು, ವೈಭವಿಕೃತ ರಥಗಳು, ನಾಲ್ಕು ಆನೆಗಳೊಂದಿಗೆ ಸುಮಾರು 45 ಕಲಾ ತಂಡಗಳು ಈ ಆಕರ್ಷಕ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಧಾರವಾಡದ ಗಾಂಧಿನಗರ ಈಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ತೇಜಸ್ವಿನಗರ, ಕಲಘಟಗಿ ರಸ್ತೆ ಮೂಲಕ ಪಿ.ಬಿ. ರೋಡ, ಹೊಸ­ಯಲ್ಲಾಪುರ, ಕಾಮನಕಟ್ಟಿ, ಲಕ್ಷ್ಮೀ ನಾರಾಯಣ ದೇವಸ್ಥಾನ, ಗಾಂಧಿಚೌಕ, ಕೆ..ಸಿ.ಸಿ ಬ್ಯಾಂಕ್‌, ಸುಭಾಷ್‌ ರಸ್ತೆ ಮೂಲಕ ಕಲಾಭವನ ಮೈದಾನದಲ್ಲಿ  ಸಮಾ­ರೋಪಗೊಂಡಿತು. ಸಮಾರಂಭದ ಕೊನೆಯಲ್ಲಿ ಕಲಾತಂಡಗಳಿಗೆ ಬಹುಮಾನ ವಿತರಿ­ಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.