ADVERTISEMENT

ಸಪ್ನ ಬುಕ್‌ಹೌಸ್ ನಾಳೆ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 6:03 IST
Last Updated 4 ಜುಲೈ 2013, 6:03 IST

ಹುಬ್ಬಳ್ಳಿ: ದೇಶದ ಅತಿದೊಡ್ಡ ಪುಸ್ತಕ ಭಂಡಾರ ಎನಿಸಿದ ಬೆಂಗಳೂರಿನ ಸಪ್ನ ಬುಕ್ ಹೌಸ್ ಹುಬ್ಬಳ್ಳಿಯಲ್ಲಿ ತನ್ನ 10ನೇ ಶಾಖೆ ಆರಂಭಿಸುತ್ತಿದ್ದು, ಇದೇ ಐದರಂದು ಕೊಯಿನ್ ರಸ್ತೆಯ ಲಕ್ಷ್ಮಿಪ್ರೈಡ್ ಮಾಲ್‌ನಲ್ಲಿ ನೂತನ ಮಳಿಗೆ ಕಾರ್ಯಾರಂಭ ಮಾಡಲಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್, ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಪುಸ್ತಕ ಭಂಡಾರ ಉದ್ಘಾಟಿಸುವ ಮೂಲಕ ಉತ್ತರ ಕರ್ನಾಟಕ ಭಾಗದ ಓದುಗರ ಬಹುದಿನದ ಕನಸನ್ನು ನನಸಾಗಿಸಲಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಪ್ನ ಬುಕ್ ಹೌಸ್ ಶೀಘ್ರ ಪುಣೆ ಹಾಗೂ ಚೆನ್ನೈ ನಗರಗಳಲ್ಲಿಯೂ ತನ್ನ ಶಾಖೆ ಆರಂಭಿಸಲಿದೆ. ಹುಬ್ಬಳ್ಳಿಯ ಮಳಿಗೆ 10 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಹವಾನಿಯಂತ್ರಿತವಾಗಿದೆ. ಕೊಯಮತ್ತೂರು ಸೇರಿದಂತೆ ರಾಜ್ಯದಲ್ಲಿರುವ 10 ಸಪ್ನ ಪುಸ್ತಕ ಮಳಿಗೆಗಳು ಒಂದೇ ಸಂಪರ್ಕ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸಲಿವೆ.

ಎರಡು ಲಕ್ಷ ಇಂಗ್ಲಿಷ್ ಪುಸ್ತಕಗಳು ಹಾಗೂ 20 ಸಾವಿರ ಕನ್ನಡ ಪುಸ್ತಕಗಳು ಸೇರಿದಂತೆ ಮಕ್ಕಳ ಆಟಿಕೆ, ಚಾಕೊಲೇಟ್, ಗ್ರೀಟಿಂಗ್ಸ್, ಸಿನಿಮಾ, ಸಂಗೀತದ ಸಿಡಿ-ಡಿವಿಡಿಗಳು, ಸ್ಪರ್ಧಾತ್ಮಕ ಪರೀಕ್ಷೆ, ಎಂಜಿನಿಯರಿಂಗ್, ವೈದ್ಯಕೀಯ, ಕಂಪ್ಯೂಟರ್, ಶಾಲಾ ಪುಸ್ತಕಗಳು, ಸಿಬಿಎಸ್‌ಸಿ, ಐಸಿಆರ್, ರಾಜ್ಯ ಸಿಲೆಬಸ್‌ನ ಪುಸ್ತಕಗಳು ಸೇರಿದಂತೆ ಎಲ್ಲಾ ರೀತಿಯ, ವರ್ಗದ ಜನರ ಜ್ಞಾನದಾಹ ನೀಗಿಸುವ ಪುಸ್ತಕಗಳು ಇಲ್ಲಿ ಲಭ್ಯವಿದೆ ಎಂದು ನಿತಿನ್ ಷಾ ಹೇಳಿದರು.

`1967ರಲ್ಲಿ ಬೆಂಗಳೂರಿನ ಗಾಂಧಿನಗರದಲ್ಲಿ 100 ಅಡಿ ಜಾಗದಲ್ಲಿ ನನ್ನ ತಂದೆ ಸುರೇಶ್ ಷಾ ಪುಸ್ತಕ ಮಾರಾಟ ಆರಂಭಿಸಿದ್ದರು. ಇಂದು 2.20ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಪುಸ್ತಕ ಮಾರಾಟದ ಸಂಸ್ಥೆಯಾಗಿ ಸಪ್ನ ಬುಕ್ ಹೌಸ್ ಬೆಳೆದಿದೆ. ಲಿಮ್ಕಾ ಬುಕ್ ಆಫ್ ರೆಕಾಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಂಸ್ಥೆ ಸ್ಥಾನ ಪಡೆದಿದೆ. ಪ್ರಸ್ತುತ ಖಾಸಗಿ ಲಿಮಿಟೆಡ್ ಕಂಪೆನಿ ಆಗಿರುವ ಸಪ್ನ ಬುಕ್ ಹೌಸ್ ಅನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕರನ್ನು ಭಾಗಿಯಾಗಿಸಿದ ಕಂಪೆನಿಯಾಗಿ ಬೆಳೆಸುವ ಉದ್ದೇಶವಿದೆ' ಎಂದು ಹೇಳಿದರು.

ಐದು ನೂರು ರೂಪಾಯಿಗಿಂತ ಹೆಚ್ಚು ಮೊತ್ತದ ಪುಸ್ತಕಗಳ ಖರೀದಿಸಿದವರಿಗೆ ಸಂಸ್ಥೆಯಿಂದ ಪ್ರಿವಿಲೇಜ್ ಕಾರ್ಡ್ ವಿತರಿಸಲಾಗುವುದು. ಕಾರ್ಡ್ ಹೊಂದಿದ ಗ್ರಾಹಕರು ಸಪ್ನ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕ ಖರೀದಿಸಬಹುದು ಎಂದರು.

1971ರಿಂದ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಪೂರೈಸಲಾಗುತ್ತಿದೆ. ಈಗಾಗಲೇ 3500 ಸಂಸ್ಥೆಗಳು ನಮ್ಮ ಗ್ರಾಹಕರಾಗಿದ್ದಾರೆ ಎಂದರು. ಸಂಸ್ಥೆಯಿಂದ ದಿನಕ್ಕೊಂದು ಪ್ರಕಟಿಸುವ ಯೋಜನೆ ಇದೆ. ಪ್ರತೀ ತಿಂಗಳು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸಲಾಗುವುದು.

ಆನ್‌ಲೈನ್, ಅಂಚೆ, ಕೋರಿಯರ್ ಮೂಲಕವೂ ಗ್ರಾಹಕರಿಗೆ ಅಗತ್ಯವಿರುವ ಪುಸ್ತಕಗಳನ್ನು ಮನೆ ಬಾಗಿಲಿಗೆ ಕಳುಹಿಸಿಕೊಡುವ ವ್ಯವಸ್ಥೆ ಇದೆ ಎಂದು ನಿತಿನ್‌ಷಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.