ADVERTISEMENT

ಸಹೃದಯಿ ದೇಹ ಕಿಮ್ಸಗೆ ದಾನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 7:50 IST
Last Updated 15 ಜುಲೈ 2012, 7:50 IST

ಹುಬ್ಬಳ್ಳಿ: ಸರಳ ಜೀವನ, ಉದಾತ್ತ ಚಿಂತನೆ, ದಾನ-ಧರ್ಮದಿಂದ ಎಲ್ಲರ ಪ್ರೀತಿ ಪಾತ್ರರಾಗಿದ್ದ, ಗಾಂಧಿನಗರ ನಿವಾಸಿಗಳ ನೆಚ್ಚಿನ ಅಜ್ಜಿ ಇಹಲೋಕದಿಂದ ದೂರವಾದರೂ ದೇಹ ಹಾಗೂ ನೇತ್ರದಾನ ಮಾಡಿ ಸಾವಿನಲ್ಲೂ ವೈಶಾಲ್ಯವನ್ನು ಮೆರೆದಿದ್ದಾರೆ.

ಗೋಕುಲ ರಸ್ತೆಯ ಗಾಂಧಿನಗರದ 82 ವರ್ಷ ವಯಸ್ಸಿನ ಗಿರಿಜಾದೇವಿ ಸಂಗಪ್ಪ ಹತ್ಯಾಳ ಅವರು ಶುಕ್ರವಾರ ರಾತ್ರಿ 8 ಗಂಟೆಗೆ ನಿಧನ ಹೊಂದಿದರು. ದೇಹ ಹಾಗೂ ನೇತ್ರಗಳನ್ನು ದಾನ ಮಾಡಲು ಮನಸ್ಸು ಮಾಡಿದ್ದ ಅವರು ಒಂದೂವರೆ ವರ್ಷದ ಹಿಂದೆ ಸಂಬಂಧಪಟ್ಟ ಕಾಗದಪತ್ರಗಳಿಗೆ ಸಹಿ ಮಾಡಿದ್ದರು.
 
ಕಣ್ಣುಗಳನ್ನು ನಗರದ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಗೂ ದೇಹವನ್ನು ಕಿಮ್ಸಗೂ ದಾನ ಮಾಡಿದ್ದರು. ಅವರ ನೇತ್ರಗಳನ್ನು ಶುಕ್ರವಾರ ರಾತ್ರಿಯೇ ವೈದ್ಯರು `ದಾನ~ ಪಡೆದುಕೊಂಡಿದ್ದರು. ಶನಿವಾರ ಮಧ್ಯಾಹ್ನ ಕಿಮ್ಸ ಸಿಬ್ಬಂದಿ ಆಗಮಿಸಿ ದೇಹವನ್ನು ಪಡೆದುಕೊಂಡರು.

ಕೇವಲ ಪ್ರಾಥಮಿಕ ಶಾಲಾ ಶಿಕ್ಷಣ ಮಾತ್ರ ಪಡೆದಿದ್ದ ಗಿರಿಜಾದೇವಿ ಅವರು ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕು ನಡೆಸಿದ್ದರು ಎಂದು ಗಾಂಧಿನಗರದ ಜನರು ಹೇಳುತ್ತಾರೆ. ವಿಶಾಲ ಹೃದಯಿಯಾಗಿದ್ದ ಅವರ ಕೈಗಳು ದಾನ-ಧರ್ಮಕ್ಕೆ ಎಂದೂ ಹಿಂದೆ ಸರಿಯಲಿಲ್ಲ, ಹೆಣ್ಮಕ್ಕಳ ಬಗ್ಗೆ ಕಾಳಜಿ ಹೊಂದಿದ್ದರು ಎಂದು ನೆರೆಮನೆಯವರು ಹೇಳುತ್ತಾರೆ.

ಗಿರಿಜಾದೇವಿ ಅವರ ಪತಿ ಸಂಗಪ್ಪ ಹತ್ಯಾಳ ಕೂಡ ಆದರ್ಶವಾದಿಯಾಗಿದ್ದರು. ಪಾಲಿಕೆ ಕಚೇರಿಯಲ್ಲಿ  ಸೇವೆ ಸಲ್ಲಿಸಿದ್ದ ಅವರು ರಾಷ್ಟ್ರೀಯವಾದಿಯಾಗಿದ್ದರು. ಹದಿನಾಲ್ಕು ವರ್ಷಗಳ ಹಿಂದೆ ಅವರು ಮೃತರಾಗಿದ್ದರು. ಪುತ್ರ ಅಶೋಕ ಹತ್ಯಾಳ ಹಾಗೂ ಸೊಸೆ ವಸಂತಲತಾ ಅವರ ಜೊತೆ ಗಿರಿಜಾದೇವಿ ವಾಸವಾಗಿದ್ದರು. ಇನ್ನೊಬ್ಬ ಪುತ್ರ ನಿಜಗುಣಿ ಹತ್ಯಾಳ ಮೂರುಸಾವಿರ ಮಠ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು ಹಿರಿಯ ಮಗ ಸದಾನಂದ ಹತ್ಯಾಳ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.    

`ಒಂದೂವರೆ ವರ್ಷದ ಹಿಂದೆ ದೇಹದಾನದ ಬಗ್ಗೆ ಪ್ರಸ್ತಾಪ ಮಾಡಿದರು. ಯಾರಾದರೂ ಒತ್ತಾಯ ಮಾಡಿದ್ದರೇ ಎಂದು ಕೇಳಿದೆ, ಸ್ವ ಇಚ್ಛೆಯಿಂದ ದಾನ ಮಾಡಲು ಮುಂದಾಗಿರುವುದಾಗಿ ತಿಳಿಸಿದರು. ನಾವು ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ಈಗ ಅವರ ಬಗ್ಗೆ ಹೆಮ್ಮೆ ಅನಿಸುತ್ತಿದೆ~ ಎಂದು ಸದಾನಂದ ಹತ್ಯಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.