ADVERTISEMENT

ಸಾರಿಗೆ ಇಲಾಖೆ: 6 ತಿಂಗಳಲ್ಲಿ ₹2,085 ಕೋಟಿ ತೆರಿಗೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 6:39 IST
Last Updated 8 ಅಕ್ಟೋಬರ್ 2017, 6:39 IST

ಧಾರವಾಡ: ಆರು ತಿಂಗಳಲ್ಲಿ (ಏಪ್ರಿಲ್‌–ಸೆಪ್ಟೆಂಬರ್‌) ₹2,085 ಕೋಟಿ ತೆರಿಗೆ ಸಂಗ್ರಹವಾಗಿದೆ. ಇದು ನಿಗದಿಗಿಂತ ಏಳು ಕೋಟಿ ರೂಪಾಯಿ ಹೆಚ್ಚು ಎಂದು ಸಾರಿಗೆ ಆಯುಕ್ತ ಬಿ.ದಯಾನಂದ ಶನಿವಾರ ಇಲ್ಲಿ ತಿಳಿಸಿದರು.

ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ಎಲ್ಲ ಭಾಗಗಳಿಂದಲೂ ಸಾರಿಗೆ ಅಧಿಕಾರಿಗಳು ಈ ಸಭೆಗೆ ಬಂದಿದ್ದರು. ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗಡೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು ಎಂದು ದಯಾನಂದ ತಿಳಿಸಿದರು.

ಪ್ರಸಕ್ತ ಸಾಲಿಗೆ ₹5,561.62 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇದೆ. ಇದರಲ್ಲಿ ಅರ್ಧದಷ್ಟು ತೆರಿಗೆ ಸಂಗ್ರಹ ಆಗಿದ್ದು, ಉಳಿದ ಅವಧಿಯಲ್ಲಿ ಇನ್ನರ್ಧ ತೆರಿಗೆ ಸಂಗ್ರಹಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.

ADVERTISEMENT

14.24 ಲಕ್ಷ ವಾಹನಗಳ ತಪಾಸಣೆ ನಡೆಸಿ ತೆರಿಗೆ ಹಾಗೂ ದಂಡದ ರೂಪದಲ್ಲಿ ₹71 ಕೋಟಿ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವಿಭಾಗದಲ್ಲಿ ₹13.97 ಕೋಟಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂಬುದನ್ನು ಅವರು ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.