ADVERTISEMENT

ಸಾರಿಗೆ ನೌಕರರಿಗೆ ನೆಮ್ಮದಿಯ ವಾತಾವರಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 5:35 IST
Last Updated 14 ನವೆಂಬರ್ 2012, 5:35 IST

ಹುಬ್ಬಳ್ಳಿ: `ವಾಯವ್ಯ ಸಾರಿಗೆ ಸಂಸ್ಥೆ ಕಾರ್ಮಿಕರು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಆಡಳಿತ ಮಂಡಳಿ ನೆಮ್ಮದಿಯ ವಾತಾವರಣ ಸೃಷ್ಟಿಸಬೇಕು~ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 15ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಈಚೆಗೆ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಹಾಗೂ ಹೆಚ್ಚು ಅಂಕ ಗಳಿಸಿದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಸಾರಿಗೆ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ ಹಲವು ಸಮಸ್ಯೆಗಳಿವೆ. ಇದರಿಂದಾಗಿ ವಾಯವ್ಯ ಸಾರಿಗೆ ಸಂಸ್ಥೆ ನಷ್ಟದತ್ತ ಮುಖ ಮಾಡಿದೆ. ಸಂಸ್ಥೆ ಲಾಭದತ್ತ ಮುನ್ನಡೆಯಲು ಕಾರ್ಮಿಕರು ಮತ್ತು ಆಡಳಿತ ಮಂಡಳಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಕಾರ್ಮಿಕರು ಸಂಸ್ಥೆಯ ನಿಯಮಗಳಿಗೆ ಕಟಿಬದ್ಧರಾಗಿ ಕಾರ್ಯ ನಿರ್ವಹಿಸಬೇಕು~ ಎಂದರು.

`ವಾಯವ್ಯ ಸಾರಿಗೆ ಸಂಸ್ಥೆಯ ವಾಹನಗಳಿಗೆ ಸರ್ಕಾರ ರೂ 300 ಕೋಟಿ ತೆರಿಗೆ ವಿನಾಯಿತಿ ನೀಡಿದೆ. 2600 ಹೊಸ ಬಸ್‌ಗಳನ್ನು ಸಂಸ್ಥೆಗೆ ನೀಡಿದೆ. ನಂಜುಂಡಪ್ಪ ವರಿದಿಯ ಅನ್ವಯ ವರ್ಷಕ್ಕೆ ರೂ 25 ಕೋಟಿ ಅನುದಾನ ನೀಡುತ್ತಿದೆ. ಈ ಸಹಾಯವನ್ನು ಸದುಪಯೋಗ ಮಾಡಿಕೊಂಡು ಸಾರಿಗೆ ನೌಕರರು ಹಾಗೂ ಆಡಳಿತ ಮಂಡಳಿ ತಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಸ್ನೇಹಯುತವಾಗಿ ಬಗೆಹರಿಸಿಕೊಂಡು ಸಂಸ್ಥೆಯ ಲಾಭ ಕುರಿತು ಚಿಂತಿಸಬೇಕು~ ಎಂದು ಸಲಹೆ ನಿಡಿದರು.

ವಾಯವ್ಯ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ವಿವಿಧ ವಿಭಾಗಗಳ ನೌಕರರಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ, ಮೇಯರ್ ಪಾಂಡುರಂಗ ಪಾಟೀಲ, ಸಾರಿಗೆ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ವ್ಯವಸ್ಥಾಪಕ ನಿರ್ದೇಶಕ ಮನೋಜ ಜೈನ್ ಮುಂತಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.