ಧಾರವಾಡ: `ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ಲೇಖಕಿ ಗೀತಾ ಕುಲಕರ್ಣಿ ಅವರು ಮಾನವೀಯ ಅನುಕಂಪದ ಜೊತೆಗೆ ಅಂತರಂಗದ ಭಾವನೆಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವ ಮನೋಭಾವ ಹೊಂದಿದ್ದರು' ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುವಾರ ನಡೆದ `ಗೀತಾ ಕುಲಕರ್ಣಿ ಸಂಸ್ಮರಣೆ' ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
`ಕಣ್ಣಿಗೆ ಕಾಣುವ ಸತ್ಯ, ನಿಜವಾದ ಸತ್ಯ ಎರಡೂ ಒಂದೇ ಅಲ್ಲ. ಧಾರವಾಡದ ಗೆಳೆಯರ ಗುಂಪಿಗಾಗಿ ಹಗಲಿರುಳು ಶ್ರಮಿಸಿದ ಶೇ.ಗೊ.ಕುಲಕರ್ಣಿಯವರು ಗೆಳೆಯರ ಗುಂಪಿನ ದೊಡ್ಡವರ ಸಣ್ಣತನದಿಂದ ಜೀವನದಲ್ಲಿ ಸಂಕಷ್ಟಗಳನ್ನು ಅನುಭವಿಸಬೇಕಾಯಿತು' ಎಂದು ವಿಷಾದಿಸಿದರು.
ಸುಂದರ ಪುಸ್ತಕ ಪ್ರಕಾಶನದ ಡಾ.ಶಿವಾನಂದ ಗಾಳಿ ಅವರು ಪ್ರಕಟಿಸಿದ `ಗೀತಾಂಜಲಿ' ಕೃತಿಯನ್ನು ಬಿಡುಗಡೆ ಮಾಡಿದ ಡಾ.ಪಂಚಾಕ್ಷರಿ ಹಿರೇಮಠ, `ಗೀತಾ ಬರೀ ಲೇಖಕಿ ಅಥವಾ ಕಥೆಗಾರ್ತಿಯಾಗಿರಲಿಲ್ಲ. ಅಪಾರ ಅಂತಃಕರಣದ, ಕೋಮಲ ಮನಸ್ಸಿನ ಚೇತನ ಶಕ್ತಿಯಾ ಗಿದ್ದರು. ಅವರ ಜೀವನೋತ್ಸಾಹ ಅತ್ಯದ್ಭುತವಾ ದದ್ದಾಗಿತ್ತು. ಶ್ರದ್ಧೆ ಹಾಗೂ ಪ್ರೀತಿಯಿಂದ ಹಿಡಿದ ಕಾರ‌್ಯ ವನ್ನು ಅವರು ಸಾಧಿಸಿ ತೋರಿಸಬಲ್ಲ ಸಾಮರ್ಥ್ಯ ಉಳ್ಳವರಾಗಿದ್ದರು' ಎಂದರು.
ಬೆಂಗಳೂರಿನ ವಸಂತ ಪುಸ್ತಕ ಪ್ರಕಾಶನದವರು ಪ್ರಕಟಿಸಿದ ಶೇ.ಗೊ.ಕುಲಕರ್ಣಿಯವರ `ನಾನು ಕಂಡ ಗೆಳೆಯರ ಗುಂಪು' ಕೃತಿ ಬಿಡುಗಡೆ ಮಾಡಿದ ಹಿರಿಯ ಕವಿ ಡಾ.ಚನ್ನವೀರ ಕಣವಿ, `ವಾತ್ಸಲ್ಯದ ವೈಯಕ್ತಿಕ ಅನುಭವ ಸಾರ್ವತ್ರಿಕವಾದಾಗ ಸಾಹಿತ್ಯದ ರುಚಿ ಹೆಚ್ಚುತ್ತದೆ. 32 ವರ್ಷಗಳ ಹಿಂದೆ ಮೂರು ಸಂಪುಟ ಗಳಲ್ಲಿ ಪ್ರಕಟಗೊಂಡಿದ್ದ ಈ ಕೃತಿ ಇಂದು ಮೂರೂ ಸೇರಿ ಒಂದೇ ಸಂಪುಟದಲ್ಲಿ ಪ್ರಕಟಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಪ್ರಾಧ್ಯಾಪಕಿ ಡಾ.ಶಾಂತಾ ಇಮ್ರಾಪುರ ಶೇ.ಗೊ.ಕುಲಕರ್ಣಿ, ಗೀತಾ ಒಡನಾಟದ ನೆನಪುಗಳನ್ನು ಹಂಚಿಕೊಂಡರು.
ಡಾ.ಶ್ಯಾಮಸುಂದರ ಬಿದರಕುಂದಿ `ನಾನು ಕಂಡ ಗೆಳೆಯರ ಗುಂಪು' ಕೃತಿಯ ಕುರಿತು ಮಾತನಾಡಿದರು.
ಡಾ.ವೀಣಾ ಬನ್ನಂಜೆ ಅವರು ಗೀತಾ ಕುಲಕರ್ಣಿ ಹಾಗೂ ತಮ್ಮ ನಡುವಿನ ಕೌಟುಂಬಿಕ ಬಾಂಧವ್ಯದ ನೆನಪುಗಳನ್ನು ಹೃದಯಸ್ಪರ್ಶಿಯಾಗಿ ಹಂಚಿಕೊಂಡರು.
ಗೀತಾಂಜಲಿಯ ಪ್ರಧಾನ ಸಂಪಾದಕಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಡಾ.ಜಿನದತ್ತ ಹಡಗಲಿ ನಿರೂಪಿಸಿದರು. ರಂಜನಾ ನಾಯಕ ವಂದಿಸಿದರು. ಬೆಳಗಾವಿಯ ಕನ್ನಡ ಮಹಿಳಾ ಸಂಘದ ಸದಸ್ಯೆಯರು ಪ್ರಾರ್ಥಿಸಿದರು. ಇಂದುಮತಿ ಪಾಟೀಲ ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.