ADVERTISEMENT

‘ಸೇಫ್ಎಕ್ಸ್‌ಪ್ರೆಸ್’ ಲಾಜಿಸ್ಟಿಕ್ಸ್‌ ಆರಂಭ

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಏರ್‌ ಕಾರ್ಗೊ ಶೀಘ್ರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 8:21 IST
Last Updated 21 ಏಪ್ರಿಲ್ 2018, 8:21 IST

ಹುಬ್ಬಳ್ಳಿ: ಸರಕು ಸಾಗಾಟ ಕಂಪನಿಯಾದ ‘ಸೇಫ್‌ ಎಕ್ಸ್‌ಪ್ರೆಸ್‌’ನ 33ನೇ ಅತ್ಯಾಧುನಿಕ ಲಾಜಿಸ್ಟಿಕ್ಸ್‌ ಪಾರ್ಕ್‌ ಹುಬ್ಬಳ್ಳಿಯಲ್ಲಿ ಶುಕ್ರವಾರದಿಂದ ಕಾರ್ಯಾರಂಭಿಸಿದೆ.ಇಲ್ಲಿನ ಗಬ್ಬೂರು ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ 4ರ ಸಮೀಪ ಅತ್ಯಾಧುನಿಕ ಲಾಜಿಸ್ಟಿಕ್ಸ್‌ ಪಾರ್ಕ್‌ ಆರಂಭಿಸಲಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರುಬಲ್‌ ಜೈನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹುಬ್ಬಳ್ಳಿ ನಗರವು ಇತ್ತೀಚಿನ ದಿನಗಳಲ್ಲಿ ಆರ್ಥಿಕವಾಗಿ ತೀವ್ರಗತಿಯಲ್ಲಿ ಪ್ರಗತಿ ಕಾಣುತ್ತಿದೆ. ಒಂದು ಲಕ್ಷಕ್ಕೂ ಅಧಿಕ ಸಣ್ಣ, ಮಧ್ಯಮ ಪ್ರಕಾರದ ಉದ್ದಿಮೆಗಳಿದ್ದು, ಇವುಗಳಿಗೆ ಅಗತ್ಯ ಉಗ್ರಾಣ ಮತ್ತು ಲಾಜಿಸ್ಟಿಕ್ಸ್‌ ಮೂಲ ಸೌಕರ್ಯಗಳಿರಲಿಲ್ಲ. ಈ ಕೊರತೆ ನೀಗಿಸಲು ಪಾರ್ಕ್‌ ನೆರವಾಗಲಿದೆ ಎಂದು ಅವರು ಹೇಳಿದರು.

30 ಸಾವಿರ ಚದರ ಅಡಿ ಜಾಗದಲ್ಲಿ ಪಾರ್ಕ್‌ ನಿರ್ಮಿಸಲಾಗಿದೆ. ಏಕಕಾಲಕ್ಕೆ ಸುಮಾರು 20 ವಾಹನಗಳ ಲೋಡಿಂಗ್‌, ಅನ್‌ ಲೋಡಿಂಗ್‌ ಮಾಡಬಹುದಾಗಿದೆ. ಇದರಿಂದ ಸರಕು ಸಾಗಣೆ ಸುಲಭವಾಗಲಿದೆ. ಕೈಗಾರಿಕಾ ಪ್ರಗತಿಗೆ ಸಹಾಯಕವಾಗಲಿದೆ ಎಂದರು.

ADVERTISEMENT

ಹುಬ್ಬಳ್ಳಿಯಿಂದ ದೇಶದ 620 ಸ್ಥಳಗಳಿಗೆ ಅತಿ ಕ್ಷಿಪ್ರಗತಿಯಲ್ಲಿ ಸರಕು ಸಾಗಾಣೆ ಮಾಡಬಹುದಾಗಿದೆ. ಪರಿಸರ ಸ್ನೇಹಿ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಏರ್‌ ಕಾರ್ಗೊ ಶೀಘ್ರ: ಈಗಾಗಲೇ ದೇಶದ 54 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಏರ್‌ ಕಾರ್ಗೊ ಸೇವೆಯನ್ನು ಆರಂಭಿಸಿರುವ ಕಂಪನಿಯು ಶೀಘ್ರದಲ್ಲೇ ಹುಬ್ಬಳ್ಳಿಯಿಂದಲೂ ಏರ್‌ ಕಾರ್ಗೊ ಆರಂಭಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಕಂಪನಿಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ವಿನೀತ್‌ ಕನೋಜಿಯಾ, ಆಡಳಿತ ಮುಖ್ಯಸ್ಥ ಎಸ್‌.ಕೆ.ಜೈನ್‌, ಕರ್ನಾಟಕ ಪ್ರಾಂತೀಯ ವ್ಯವಸ್ಥಾಪಕ ಪಿ.ಎಸ್‌.ನಾರಾಯಣ ಮತ್ತು ಹುಬ್ಬಳ್ಳಿ ಶಾಖೆಯ ವ್ಯವಸ್ಥಾಪಕ ಮುರುಳಿ ನಾಕೋಡ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.