ADVERTISEMENT

ಹುಬ್ಬಳ್ಳಿಗೆ ಬಂದ ಕರ್ನಾಟಕ ತಂಡ

ರಣಜಿ: ಪಂಜಾಬ್‌ ತಂಡದ ‘ಆಲ್‌ರೌಂಡ್‌ ಅಭ್ಯಾಸ’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 5:46 IST
Last Updated 13 ಡಿಸೆಂಬರ್ 2013, 5:46 IST
ಇದೇ 14ರಿಂದ ಪಂಜಾಬ್‌ ವಿರುದ್ಧ ನಡೆಯಲಿರುವ ರಣಜಿ ಪಂದ್ಯದಲ್ಲಿ ಆಡಲು ಗುರುವಾರ ರಾತ್ರಿ ಹುಬ್ಬಳ್ಳಿಗೆ ಬಂದ ಕರ್ನಾಟಕ ತಂಡದ ನಾಯಕ ವಿನಯ್‌ ಕುಮಾರ್‌ ಅವರನ್ನು ಹೋಟೆಲ್‌್ ಡೆನಿಸನ್‌ ಸಿಬ್ಬಂದಿ ಸ್ವಾಗತಿಸಿದರು. ಎಚ್‌.ಎಸ್‌.ಶರತ್‌ ಮತ್ತು ಅಭಿಮನ್ಯು ಮಿಥುನ್‌ ಚಿತ್ರದಲ್ಲಿದ್ದಾರೆ
ಇದೇ 14ರಿಂದ ಪಂಜಾಬ್‌ ವಿರುದ್ಧ ನಡೆಯಲಿರುವ ರಣಜಿ ಪಂದ್ಯದಲ್ಲಿ ಆಡಲು ಗುರುವಾರ ರಾತ್ರಿ ಹುಬ್ಬಳ್ಳಿಗೆ ಬಂದ ಕರ್ನಾಟಕ ತಂಡದ ನಾಯಕ ವಿನಯ್‌ ಕುಮಾರ್‌ ಅವರನ್ನು ಹೋಟೆಲ್‌್ ಡೆನಿಸನ್‌ ಸಿಬ್ಬಂದಿ ಸ್ವಾಗತಿಸಿದರು. ಎಚ್‌.ಎಸ್‌.ಶರತ್‌ ಮತ್ತು ಅಭಿಮನ್ಯು ಮಿಥುನ್‌ ಚಿತ್ರದಲ್ಲಿದ್ದಾರೆ   

ಹುಬ್ಬಳ್ಳಿ: ಮಧ್ಯಮ ವೇಗಿಗಳು ಮತ್ತು ಬ್ಯಾಟ್ಸ್‌ಮನ್‌ಗಳ ಪಡೆಯನ್ನು ಹೊಂದಿರುವ ಮನ್‌ದೀಪ್‌ ಸಿಂಗ್ ನೇತೃತ್ವದ ಪಂಜಾಬ್‌ ರಣಜಿ ತಂಡದ ಆಟಗಾರರು ಗುರುವಾರ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಆಟದ ಎಲ್ಲ ವಿಭಾಗಗಳಲ್ಲೂ ಬೆವರು ಸುರಿಸಿದರು.

ಬೆಳಿಗ್ಗೆ ಸುಮಾರು 9.40ಕ್ಕೆ ಮೈದಾನ ಪ್ರವೇ­ಶಿಸಿದ ತಂಡ ನೃಪತುಂಗ ಬೆಟ್ಟದ ತಪ್ಪಲಿನಲ್ಲಿ ವಿಶಾ­ಲ­ವಾಗಿ ಹರಡಿಕೊಂಡಿರುವ ಜಾಗದಲ್ಲಿರುವ ಮೈದಾನ, ನೆಟ್ಸ್, ಪೆವಿಲಿಯನ್‌ ನೋಡಿ ಸಂತಸಪಟ್ಟರು. ಡ್ರೆಸಿಂಗ್‌ ಕೊಠಡಿಗೆ ನುಗ್ಗಿದ ಆಟ­ಗಾ­ರರು ಅಲ್ಲಿನ ವಾತಾವರಣಕ್ಕೂ ಮನ­­ಸೋತು ಆಹಾ ಎಂಬ ಉದ್ಗಾರವನ್ನು ಹೊರಡಿಸಿದರು.

ನಂತರ ಮೈದಾನದಲ್ಲಿ ಸುಮಾರು ಅರ್ಧ ತಾಸು ಫುಟ್‌ಬಾಲ್ ಆಡಿ ವಾರ್ಮ್‌ ಆದ ಆಟಗಾರರ ಒಂದು ತಂಡ ನೆಟ್ಸ್‌ಗೆ ಹೋಗಿ ಬ್ಯಾಟಿಂಗ್‌ ಅಭ್ಯಾಸ ನಡೆಸಿತು. ಆರ್‌ಸಿ–ಕೆಎಸ್‌ಸಿಎ ಅಕಾಡೆಮಿಯ ಮಕ್ಕಳು ಅಂತರರಾಷ್ಟ್ರೀಯ ಆಟಗಾರರನ್ನು ಒಳಗೊಂಡಿರುವ ತಂಡಕ್ಕೆ ಬೌಲಿಂಗ್‌ ಮಾಡಿ ಖುಷಿಪಟ್ಟರು.

ವೇಗಿಗಳಾದ ಮನ್‌ಪ್ರೀತ್‌ ಗೋನಿ, ವಿಆರ್‌ವಿ ಸಿಂಗ್‌, ಲೆಗ್‌ ಸ್ಪಿನ್ನರ್‌ ರಾಹುಲ್‌ ಶರ್ಮಾ ಮುಂತಾದವರು ಬ್ಯಾಟಿಂಗ್‌ಗೆ ಆದ್ಯತೆ ನೀಡಿದರು. ಗೋನಿ ಸುಮಾರು 45 ನಿಮಿಷಗಳ ಕಾಲ ತದೇಕಚಿತ್ತದಿಂದ ಬ್ಯಾಟಿಂಗ್‌ ಮಾಡಿ ಕೆಲವು ಉತ್ತಮ ಶಾಟ್‌ಗಳನ್ನು ಸಿಡಿಸಿದರು. ಬ್ಯಾಟ್ಸ್‌ಮನ್‌ ಮತ್ತು ಮಧ್ಯಮ ವೇಗಿ ಸಂದೀಪ್‌ ಶರ್ಮಾ ಕೂಡ ತುಂಬ ಹೊತ್ತು ಬ್ಯಾಟಿಂಗ್‌ ಮಾಡಿದರು.

ಗೋನಿ ಕೆಲ ಹೊತ್ತು ಬೌಲಿಂಗ್‌ ಮಾಡಿ ಕೆಲವು ಶಾಟ್‌ ಎಸೆತಗಳ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಕಾಡಲು ಶ್ರಮಿಸಿದರು. ರಾಹುಲ್‌ ಶರ್ಮಾ ಮಾತ್ರ ಬೌಲಿಂಗ್‌ ಕಡೆಗೆ ಹೆಚ್ಚು ಲಕ್ಷ್ಯ ಕೊಡಲಿಲ್ಲ. ಕೆಲವೇ ಎಸೆತಗಳ ನಂತರ ವಿಶ್ರಾಂತಿ ಪಡೆದು ಸಹ ಆಟಗಾರರೊಂದಿಗೆ ಪಟ್ಟಾಂಗ ಹೊಡೆದರು.

ನಂತರ ಎಲ್ಲರೂ ಮೈದಾನಕ್ಕೆ ತೆರಳಿ ಫೀಲ್ಡಿಂಗ್‌ ಮತ್ತು ಕ್ಯಾಚಿಂಗ್‌ ಅಭ್ಯಾಸ ಮಾಡಿದರು. ಕೋಚ್‌ ಭೂಪೀಂದರ್‌ ಸಿಂಗ್ ಸೀನಿಯರ್ ಸ್ಲಿಪ್‌ನಲ್ಲಿ ಕ್ಯಾಚುಗಳನ್ನು ತೆಗೆದುಕೊಳ್ಳುವುದರ ಬಗ್ಗೆ ವಿಶೇಷ ಕಾಳಜಿ ವಹಿಸಿ ಅಭ್ಯಾಸ ಮಾಡಿಸಿದರು. 

ADVERTISEMENT

ವಿನಯ್‌ ಬಳಗದ ಆಗಮನ: ನವೆಂಬರ್‌ 30ರಂದು ವಿವಾಹಿತರಾದ ವೇಗಿ ಹಾಗೂ ಕರ್ನಾಟಕ ತಂಡದ ನಾಯಕ ವಿನಯ್‌ ಕುಮಾರ್‌ ಮದುವೆಯ ಹಿನ್ನೆಲೆಯಲ್ಲಿ ಕಳೆದ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಹುಬ್ಬಳ್ಳಿ ಪಂದ್ಯಕ್ಕೂ ಅವರು ಬರುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಗುರುವಾರ ಸಂಜೆ ಕೆಎಸ್‌ಸಿಎ ಧಾರವಾಡ ವಲಯ ಪದಾಧಿಕಾರಿ­ಗಳಿಗೆ ಬಂದ ತಂಡದ ಆಟಗಾರರ ಪಟ್ಟಿಯಲ್ಲಿ ವಿನಯ್‌ ಕುಮಾರ್‌ ಹೆಸರು ಕಾಣಿಸಿಕೊಂಡಿತು. ತಂಡ ರಾತ್ರಿ ನಗರಕ್ಕೆ ಬಂದಿಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.