ADVERTISEMENT

ಹೆಸರೇ ಇಲ್ಲದ ಅನಾಮಿಕ ಬಡಾವಣೆ !

ಸಂಧ್ಯಾರಾಣಿ
Published 29 ಅಕ್ಟೋಬರ್ 2017, 7:06 IST
Last Updated 29 ಅಕ್ಟೋಬರ್ 2017, 7:06 IST
ಹೆಸರೇ ಇಲ್ಲದೇ ಇರುವ ಬಡಾವಣೆ
ಹೆಸರೇ ಇಲ್ಲದೇ ಇರುವ ಬಡಾವಣೆ   

ಹುಬ್ಬಳ್ಳಿ: ಇಲ್ಲೊಂದು ಬಡಾವಣೆ ಇದೆ. ಈ ಬಡಾವಣೆ ನಿರ್ಮಾಣವಾಗಿ ಸುಮಾರು 50 ವರ್ಷವಾಗಿದೆ. ಆದರೆ, ಈ ಬಡವಾಣೆಗೆ ಹೆಸರೇ ಇಲ್ಲ.  ಹೆಸರಿಲ್ಲದ ಈ ಅನಾಮಿಕ ಬಡಾವಣೆಯ ವಿಳಾಸವನ್ನು ಯಾರಾದರು ಕೇಳಿದರೆ ಹೊಸ ಕೋರ್ಟ್‌ ಪಕ್ಕದಲ್ಲಿರುವ ‘ಆಶೀರ್ವಾದ್’ ಗ್ಯಾಸ್ ಏಜನ್ಸಿ ಪಕ್ಕದ ರಸ್ತೆ ಎಂದು ಹೇಳಬೇಕಷ್ಟೆ! ಹೌದು, ಹುಬ್ಬಳ್ಳಿ ನಗರದ ನಡುವೆ ಇರುವ ಈ ಬಡಾವಣೆಯ ಮುಖ್ಯ ರಸ್ತೆ ಸುಸಜ್ಜಿತವಾಗಿದೆ. ಆದರೆ, ಬಡಾವಣೆಯು ಮೂಲಸೌಲಭ್ಯಗಳಿಂದ ವಂಚಿತವಾಗಿದೆ.

ವಿದ್ಯಾನಗರದಿಂದ ಹರಿದು ಬರುವ ತ್ಯಾಜ್ಯ ನೀರು ಮತ್ತು ಮಳೆ ನೀರು ಇಲ್ಲಿರುವ ಮನೆಗಳಿಗೆ ನುಗ್ಗುತ್ತದೆ. ಬಡಾವಣೆಯ ಮುಖ್ಯ ರಸ್ತೆಯ ಒಂದು ಭಾಗದಲ್ಲಿ ಮಾತ್ರ ಚರಂಡಿ ಇದೆ. ಈ ಚರಂಡಿಯಲ್ಲೂ ನೀರು ಸರಾಗವಾಗಿ ಹರಿಯುತ್ತಿಲ್ಲ. ಚರಂಡಿಯಲ್ಲಿ ಕೊಳಚೆ ನೀರು ನಿಲ್ಲುತ್ತಿರುವುದರಿಂದ ದುರ್ವಾಸನೆ ಬೀರುತ್ತಿದೆ. ಇಲಿ, ಹೆಗ್ಗಣ, ಸೊಳ್ಳೆಗಳ ಆವಾಸ ಸ್ಥಾನವಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

‘ಈ ಬಡಾವಣೆಗೊಂದು ಹೆಸರನ್ನು ನಾಮಕರಣ ಮಾಡಿ, ಫಲಕ ಹಾಕಿಸಿ ಎಂದು ಪಾಲಿಕೆ ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಚನ್ನಪ್ಪ ಗೌಡ.

ADVERTISEMENT

‘ಬಡಾವಣೆಗೆ 24X7 ನಿರಂತರ ನೀರು ಕೊಡುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ಬೊಬ್ಬೆ ಹೊಡೆದ ಕಾರ್ಪೊರೇಟರ್‌, ಈಗ ಎಂಟು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ವಾರಕ್ಕಾಗುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಈ ಬಡಾವಣೆಯ ಸಹವಾಸವೇ ಸಾಕು’ ಎನ್ನುತ್ತಾರೆ ಇಲ್ಲಿಯ ನಿವಾಸಿ ಆಶಾ.

‘ಬಡಾವಣೆಯಲ್ಲಿ ಸುಮಾರು 25 ರಿಂದ 30 ಬೀದಿ ನಾಯಿಗಳು ಇವೆ. ಮಕ್ಕಳು, ಹಿರಿಯರು ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ. ಈ ಬಗ್ಗೆ ಪಾಲಿಕೆ ಗಮನ ಹರಿಸಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ.

‘ಹಳೆಯದಾದ ಈ ಬಡಾವಣೆಗೆ ನಾಮಕರಣ ಮಾಡಬೇಕು, ಚರಂಡಿ ನಿರ್ಮಿಸಬೇಕು, ಸಮರ್ಪಕ ಕುಡಿಯುವ ನೀರು ಪೂರೈಸಬೇಕು’ ಎನ್ನುತ್ತಾರೆ ಹಿರಿಯ ನಿವಾಸಿ ಎ.ಎಸ್‌.ಕುಲಕರ್ಣಿ.

ಈ ಬಡಾವಣೆಗೆ ಹೆಸರಿಲ್ಲ. ದೂರದ ಊರುಗಳಿಂದ ನೆಂಟರು ಬಂದಾಗ ವಿಳಾಸ ಹೇಳಲು ತೋಚದೆ ಪೇಚಾಡಿದ್ದೂ ಇದೆ. ಅಂಚೆ, ಕೊರಿಯರ್‌ನವರು ಫೋನ್ ಮಾಡಿ, ವಿಳಾಸ ತಿಳಿದುಕೊಂಡು ಬರುತ್ತಾರೆ
ಎ.ಎಸ್.ಕುಲಕರ್ಣಿ
ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.