ADVERTISEMENT

ಹೊಂಡ,ಗುಂಡಿಗಳ ರಸ್ತೆ; ಸವಾರರ ಪರದಾಟ

ಬೆಂಗೇರಿ...ರಸ್ತೆ ಎಲ್ಲಿದೇರ್ರಿ...

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 6:29 IST
Last Updated 1 ಆಗಸ್ಟ್ 2013, 6:29 IST

ಹುಬ್ಬಳ್ಳಿ: ಕೇಶ್ವಾಪುರದಿಂದ ಬೆಂಗೇರಿಯೆಡೆಗೆ ಸಾಗುವ ರಸ್ತೆಯಲ್ಲಿ ಸಾಗುತ್ತಿದ್ದರೆ ಅದು ರಸ್ತೆ ಎಂದೆನಿಸುವುದಿಲ್ಲ. ಅಷ್ಟೊಂದು ಹೊಂಡಗುಂಡಿಗಳಿಂದ ಕೂಡಿದ ರಸ್ತೆ ಇಲ್ಲಿದ್ದು, ಈ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ತಮ್ಮ ನರನಾಡಿಗಳನ್ನು ಕಾಪಾಡಿಕೊಳ್ಳುವಲ್ಲಿ ಹೆಣಗಾಡಬೇಕಾಗಿದೆ. ಅಷ್ಟರಮಟ್ಟಿಗೆ  ರಸ್ತೆಗಳು ಹಾಳಾಗಿ ಹೋಗಿವೆ.

ನಗರದೆಲ್ಲೆಡೆ ಗುಂಡಿ ಬಿದ್ದ ರಸ್ತೆಗಳೇ ಸದ್ಯಕ್ಕೆ ಎಲ್ಲೆಡೆ ಕಂಡು ಬರುತ್ತಿವೆ. ಸತತವಾಗಿ ಸುರಿಯುತ್ತಿರುವ ಮಳೆ, ಹತ್ತು ಅಡಿಗೆ ಒಂದರಂತೆ ಎದುರಾಗುವ ಗುಂಡಿಗಳು ವಾಹನ ಸವಾರರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿವೆ.

ನಗರದ ಬೆಂಗೇರಿ ಮುಖ್ಯರಸ್ತೆಯಲ್ಲಿ ಇಂಥ ಗುಂಡಿಗಳದ್ದೇ ಕಾರುಬಾರು. ಹೊಂಡ ಗುಂಡಿಯ ರಸ್ತೆಯಲ್ಲಿ ಹರಸಾಹಸ ಪಟ್ಟು ಸಾಗಬೇಕಾಗಿದೆ. ಕೆಲವೇ ಅಡಿಗಳಷ್ಟು ದೂರ ವೇಗದಲ್ಲಿ ಸಾಗಿದರೆ ಹೊಂಡವನ್ನು ದಾಟಲಾಗದೇ ಬ್ರೇಕ್‌ಹಾಕಿ ಮುಗ್ಗರಿಸಬೇಕಾದ ದುಃಸ್ಥಿತಿ ಇಲ್ಲಿಯದು.

ಕೇಶ್ವಾಪುರ ಸರ್ಕಲ್‌ನಿಂದ ಬೆಂಗೇರಿ ಮಾರ್ಗವಾಗಿ ಸಾಗುವ ರಸ್ತೆಯು ಹಾಳಾಗಿ ಹೋಗಿದ್ದು, ವಾಹನ ಸವಾರರು ಮತ್ತು ನಾಗರಿಕರಿಗೆ ತೀವ್ರ ತೊಂದರೆಯಾಗಿದೆ. ಡಾಂಬರ್ ಕಿತ್ತುಹೋಗಿರುವ ರಸ್ತೆ ಮಣ್ಣಿಂದ ತುಂಬಿದ್ದು, ಮಳೆ ಬಂದಾಗ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ನೆಲಕ್ಕೆ ಉರುಳಬೇಕಾಗುತ್ತದೆ. ಇನ್ನು, ಕೆಸರಿನಲ್ಲಿ ವಾಹನಗಳು ಜಾರು  (ಸ್ಕಿಡ್) ತ್ತಿದ್ದು, ಅವರು ಇಂಥ ಗುಂಡಿಗಳಲ್ಲಿ ಬೀಳುವ ಸಾಧ್ಯತೆ ಹೆಚ್ಚಾಗಿದೆ. 

ಸಂತೆ ಮೈದಾನದ ರಸ್ತೆ ಸ್ಥಿತಿ ಅಯೋಮಯ
ಬೆಂಗೇರಿಯ ಮುಖ್ಯರಸ್ತೆಯ ಶನಿವಾರ ಸಂತೆ ಮೈದಾನದ ಬಳಿಯ ರಸ್ತೆಯಂತೂ ಅರ್ಧಕ್ಕರ್ಧ ಕಿತ್ತು ಹೋಗಿದೆ. ಸರಿಪಡಿಸಬೇಕಾದ ಮಹಾನಗರ ಪಾಲಿಕೆಯನ್ನು ವಾಹನ ಸವಾರರು  ಶಪಿಸುತ್ತಲೇ ತಿರುಗುತ್ತಿದ್ದಾರೆ. ಸಂತೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಇಂಥ ಗುಂಡಿ ತುಂಬಿದ, ಹಾಳಾ ಗಿರುವ ರಸ್ತೆಗಳಿಂದ ತೀವ್ರ ಅನನುಕೂಲವಾಗಿದೆ.

`ಮಹಾನಗರ ಪಾಲಿಕೆಯವರಿಗೆ ಎಷ್ಟು ಸಲ ಇಲ್ಲಿ ರಸ್ತೆಗಳು ಹಾಳಾಗಿರುವುದನ್ನು ಹೇಳಿದರೂ, ರಸ್ತೆ ದುರಸ್ತಿ ಮಾಡಿಸುವ ಬಗ್ಗೆ ಅವರು ಯೋಚಿಸುತ್ತಲೇ ಇಲ್ಲ ' ಎಂದು ಇದೇ ರಸ್ತೆಯಲ್ಲಿ ಹರಸಾಹಸ ಮಾಡುತ್ತ ಓಡಾಡುವ ಸ್ಥಳೀಯರು ಆರೋಪಿಸುತ್ತಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಈ ಬಾರಿಯ ಬಜೆಟ್‌ನಲ್ಲಿ, ಅವಳಿ ನಗರದ ಪ್ರಮುಖ ರಸ್ತೆಗಳ ದುರಸ್ತಿಗಾಗಿಯೇ ರೂ. 2.5 ಕೋಟಿ ಭರಿಸಲು ಅನುಮೋದನೆ ದೊರೆತಿದೆ. ಆದರೂ, ಪಾಲಿಕೆ ಮಾತ್ರ ಹಾಳಾಗಿ ಹೋಗಿರುವ ರಸ್ತೆಗಳನ್ನು ದುರಸ್ತಿಗೊಳಿಸುವ, ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿಲ್ಲ. ಜನಪ್ರತಿನಿಧಿಗಳು ತಮಗಿನ್ನೂ ಕಾಮಗಾರಿ ಮಾಡಿಸುವ ಅಧಿಕಾರ ಮತ್ತು ಅನುದಾನ ಕೈಗೆ ಬಂದಿಲ್ಲ ಎಂದು ದೂರಿಡುವುದು ಮಾಮೂಲಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.