ADVERTISEMENT

ಹೊಸ ಕಟ್ಟಡ ಕಾಮಗಾರಿ ಮರೀಚಿಕೆ?

ಅಶೋಕ ಘೋರ್ಪಡೆ
Published 15 ಆಗಸ್ಟ್ 2016, 9:17 IST
Last Updated 15 ಆಗಸ್ಟ್ 2016, 9:17 IST
ಹೊಸ ಕಟ್ಟಡ ಕಾಮಗಾರಿ ಮರೀಚಿಕೆ?
ಹೊಸ ಕಟ್ಟಡ ಕಾಮಗಾರಿ ಮರೀಚಿಕೆ?   

ಕುಂದಗೋಳ: ಪಟ್ಟಣದ ಶಿವಾಜಿನಗರ ಕಿಲ್ಲಾದಲ್ಲಿದ್ದ ಶಾಸಕರ ಮಾದರಿ ಶಾಲೆಯನ್ನು ನೆಲಸಮಗೊಳಿಸಿ ಎರಡು ವರ್ಷ ಗತಿಸಿದೆ. ಸರ್ಕಾರದಿಂದ ಅನುದಾನ ಮಂಜೂರಾಗಿದೆ. ಆದರೆ ಕಟ್ಟಡ ಮಾತ್ರ ನಿರ್ಮಾಣಗೊಳ್ಳುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಶತಮಾನ ಕಂಡಿದ್ದ ಈ ಶಾಸಕರ ಸರ್ಕಾರಿ ಮಾದರಿ ಶಾಲೆ 13 ಕೊಠಡಿಗಳನ್ನು ಹೊಂದಿತ್ತು. ಇದರಲ್ಲಿ 7 ಕೊಠಡಿಗಳನ್ನು 2013–14ನೇ ಸಾಲಿನಲ್ಲಿ ಪಟ್ಟಣಕ್ಕೆ ಪ್ರೌಢಶಾಲೆ ಮಂಜೂರಾದ ತಕ್ಷಣ ನೆಲಸಮಗೊಳಿಸಲಾಯಿತು. ಪ್ರೌಢಶಾಲೆಯನ್ನು ನಡೆಸಲು ಜಾಗದ ಸಮಸ್ಯೆ ಇರುವುದನ್ನು ಅರಿತ ಶಿಕ್ಷಣ ಇಲಾಖೆಯವರು ಶತಮಾನ ಪೂರೈಸಿದ ಶಾಸಕರ ಮಾದರಿ ಶಾಲೆಯಲ್ಲಿಯೇ ಪ್ರೌಢಶಾಲೆಯನ್ನು ಆರಂಭಿಸಿದ್ದಾರೆ.

ಮುಂದೆ ಇಲ್ಲಿ ಹೊಸ ಕಟ್ಟಡ ನಿರ್ಮಿಸಬೇಕೆಂದು ಸರ್ಕಾರವೇ ಕಟ್ಟಡ ಕಟ್ಟಲು ಹಣವನ್ನು ಬಿಡುಗಡೆ ಮಾಡಿದ್ದು, ಬೆಂಗಳೂರಿನ ನಾಗರ್ಜುನ ಕಂಪೆನಿಗೆ ಗುತ್ತಿಗೆ ನೀಡಿದ್ದು, ಈ ಜಾಗದಲ್ಲಿ ಬೇಗ ಕಟ್ಟಡ ಆರಂಭಿಸುವಂತೆಯೂ ಸೂಚಿಸಿದೆ.

ಆದರೆ ಕಟ್ಟಡ ಕಾಮಗಾರಿ ಮಾತ್ರ ಆರಂಭಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸದ್ಯ ಇಲ್ಲಿ 8, 9, 10 ಹೀಗೆ ಮೂರು ತರಗತಿಗಳನ್ನು ಮಾತ್ರ ನಡೆಸಲಾಗುತ್ತಿದೆ. ಇಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳ ಸೇರಿ ಒಟ್ಟು 190 ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದಿರುವುರಿಂದ ಶೌಚ ಹಾಗೂ ಮೂತ್ರಕ್ಕಾಗಿ ಮನೆಗೆ ಹೋಗುವಂತಹ ಪರಿಸ್ಥಿತಿ ಇದೆ.

ಇಲ್ಲಿ ಈಗಾಗಲೇ ಹೊಸ ಕಟ್ಟಡ ಕಟ್ಟಲು ಅನುದಾನವನ್ನು ಬಿಡುಗಡೆ ಮಾಡಿದ್ದರಿಂದ ಮತ್ತೊಂದು ಶೌಚಾಲಯ ಕಟ್ಟಲಿಕ್ಕೆ ಅನುದಾನ ಕೊಟ್ಟಿಲ್ಲ. ಸಾಮೂಹಿಕವಾಗಿ ಒಂದೇ ಶೌಚಾಲಯ ಕಟ್ಟಿದ್ದಾರೆ. ಇದರಲ್ಲಿ ಹುಡುಗರು ಮಾತ್ರ ಹೋಗುತ್ತಾರೆ. ಹೆಣ್ಣು ಮಕ್ಕಳಿಗೆ ಬಹಳ ತೊಂದರೆಯಾಗಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಹೊಸ ಕಟ್ಟಡದಲ್ಲಿ ಶೌಚಾಲಯ ಸೇರಿ ನೀಲ ನಕ್ಷೆ ಸಿದ್ಧಪಡಿಸಿರುತ್ತಾರೆ.

ಹೀಗಾಗಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಕಟ್ಟಲು ಅನುದಾನ ಬಿಡುಗಡೆ ಮಾಡಲು ಬರುವದಿಲ್ಲ. ಶಾಲೆ ಕಟ್ಟಲು ಗುತ್ತಿಗೆ ಪಡೆದಿರುವ ಕಂಪೆನಿಯವರು ಎರಡು ವರ್ಷದಲ್ಲಿ ಮೂರು ಬಾರಿ ಬಂದು ಜಾಗ ನೋಡಿಕೊಂಡು ಹೋಗಿದ್ದಾರೆ. ಆದರೆ ಕೆಲಸ ಮಾತ್ರ ಆರಂಭಿಸಿಲ್ಲ ಎನ್ನುತ್ತಾರೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಗಂಜಿಯವರು.

ಶಾಲೆಗಳ ವಿಲೀನ: ಕಳೆದ 2011ರಲ್ಲಿ ಶಾಸಕರ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯನ್ನು ಸರ್ಕಾರ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಎರಡು ಶಾಲೆಗಳನ್ನು ವಿಲೀನಗೊಳಿಸಿದೆ.

ಇಲ್ಲಿ ಎರಡು ಶಾಲೆಗಳ 486 ವಿದ್ಯಾರ್ಥಿಗಳಿದ್ದಾರೆ. ಈ ವಿಧ್ಯಾರ್ಥಿಗಳಿಗೆ 16 ಜನ ಶಿಕ್ಷಕರಿರಬೇಕಿತ್ತು. ಆದರೆ 20 ಜನ ಶಿಕ್ಷಕರು ಈ ವಿಲೀನಗೊಂಡ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 1 ರಿಂದ 7 ತರಗತಿಯವರಿಗೆ ಒಬ್ಬರು ಮುಖ್ಯಶಿಕ್ಷಕರು ಹಾಗೂ 8ರಿಂದ 10ನೇ ತರಗತಿಯವರಿಗೆ ಮತ್ತೊಬ್ಬ ಮುಖ್ಯ ಶಿಕ್ಷಕರಿದ್ದಾರೆ. ಹೀಗೆ ಒಂದೇ ಶಾಲೆಗೆ ಇಬ್ಬರು ಮುಖ್ಯ ಶಿಕ್ಷಕರಿದ್ದಾರೆ.

***
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಸಿದ್ಧತೆಯಲ್ಲಿದ್ದೇನೆ. ನಾಲ್ಕು ದಿನಾ ಬಿಟ್ ಕಚೇರಿ ಕಡಿಗೆ ಬರ್ರಿ. ಶಾಲೆಯ ಸಮಸ್ಯೆ ಬಗ್ಗೆ ಮಾಹಿತಿ ಕೊಡ್ತೀನಿ.
-ಮಂಗಳಾ ಪಾಟೀಲ, ಕುಂದಗೋಳ ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.