ADVERTISEMENT

‘ಏಡ್ಸ ನಿಯಂತ್ರಣಕ್ಕೆ ನೈತಿಕತೆ, ಬದ್ಧತೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 7:25 IST
Last Updated 2 ಡಿಸೆಂಬರ್ 2013, 7:25 IST

ಹುಬ್ಬಳ್ಳಿ: ‘ಏಡ್ಸ ಹರಡದಂತೆ ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ನೈತಿಕತೆ, ಸಂಸ್ಕೃತಿಯ ಅರಿವು, ಬದ್ಧತೆ ಅತೀ ಅಗತ್ಯ’ ಎಂದು ಶಾಸಕ ಪ್ರಸಾದ ಅಬ್ಬಯ್ಯ  ಹೇಳಿದರು.

ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ನಗರದ ಲ್ಯಾಮಿಂಗ್ಟನ್ ಶಾಲೆಯ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ ದಿನಾಚರಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಏಡ್‌್ಸ ಕುರಿತು ತಿಳಿವಳಿಕೆ ಮೂಡಿಸುವ ಬಗ್ಗೆ ಹೆಚ್ಚು ಒತ್ತು ನೀಡಬೇಕು’ ಎಂದರು.

‘ಮೊಬೈಲ್‌, ಟಿವಿ, ಸಿನಿಮಾ ಮತ್ತಿತರ ಮಾಧ್ಯಮಗಳಿಂದ ಯುವ ಸಮುದಾಯದ ಮನಸ್ಸು ಕೆಡುತ್ತಿದೆ ಎನ್ನುವುದು ವಾಸ್ತವ. ಆದರೆ ಅವುಗಳನ್ನು ಅನುಕೂಲಕ್ಕೆ ತಕ್ಕಂತೆ ಒಳ್ಳೆಯದಕ್ಕೆ ಬಳಸಿಕೊಳ್ಳಬೇಕು. ಅಶ್ಲೀಲ ಪ್ರದರ್ಶನಕ್ಕೆ ಕಡಿ­ವಾಣ ಹಾಕುವ ಜೊತೆಗೆ ಆಧುನಿಕ ತಂತ್ರಜ್ಞಾನ­ವನ್ನು ಅಗತ್ಯಗಳಿಗೆ ಅನುಗುಣವಾಗಿ ಸದುಪಯೋ­ಗಪ­ಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಏಡ್ಸ ಹರಡುವಿಕೆ ಮತ್ತು ತಡೆಯ ಕುರಿತು ಮಾಹಿತಿ ನೀಡಿದ ಜಿಲ್ಲಾ ರೆಡ್‌ ಕ್ರಾಸ್‌ ಸೊಸೈಟಿ ಅಧ್ಯಕ್ಷ ಡಾ. ವಿ.ಡಿ. ಕರ್ಪೂರಮಠ, ‘ಧಾರ್ಮಿಕ ಕೇಂದ್ರಗಳಾದ ಮಸೀದಿ, ಚರ್ಚ್‌, ಮಂದಿರಗಳಲ್ಲಿ ಧರ್ಮ ಬೋಧನೆಯ ಜೊತೆಗೆ ಏಡ್ಸ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು. ಭವಿಷ್ಯದ ದೃಷ್ಟಿಯಿಂದ ಯುವ ಸಮುದಾಯ ಮದ್ಯ, ಸಿಗರೇಟು, ಗುಟ್ಕಾದ ಬೆನ್ನುಹತ್ತದಂತೆ ಎಚ್ಚರಿಕೆ ವಹಿಸುವ ಹೊಣೆ ಹಿರಿಯರ ಮೇಲಿದೆ’ ಎಂದರು.

‘ಬೆಳೆಯುವ ಮಕ್ಕಳ ಮೇಲೆ ನಿಗಾ ಇರಿಸುವ ಜೊತೆಗೆ ಅವರಿಗೆ ನೈತಿಕತೆ ಮೌಲ್ಯಗಳನ್ನು ಬೋಧಿಸುವ ಮಹತ್ವದ ಹೊಣೆ ಹಿರಿಯರ ಮೇಲಿದೆ. ಹಿರಿಯರು ಸಾಧ್ಯವಾದಷ್ಟು ಯುವ ಸಂಘಗಳಿಗೆ ಭೇಟಿ ನೀಡಿ ಏಡ್‌್ಸ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ, ‘ನಿವೃತ್ತ ನೌಕರರು ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿ­ಕೊಳ್ಳಬೇಕು. ಸದಾ ಚಟುವಟಿಕೆಯಿಂದ ಇರುವ ಮೂಲಕ ಸರ್ಕಾರದಿಂದ ನ್ಯಾಯಯುತವಾಗಿ ಸಿಗಬೇಕಾದ ಅನುಕೂಲಗಳನ್ನು ಪಡೆಯಲು ಸಂಘಟಿತರಾಗಬೇಕು’ ಎಂದರು.

‘ಸಂಘದ ನಿರಂತರ ಹೋರಾಟದ ಫಲವಾಗಿ ರಸ್ತೆ ಸಾರಿಗೆ ಬಸ್ಸಿನಲ್ಲಿ ಹಿರಿಯ ನಾಗರಿಕರ ರಿಯಾಯಿತಿ ಬಸ್‌ ಪಾಸ್‌ ವಯೋಮಿತಿಯನ್ನು ಸರ್ಕಾರ 65ರಿಂದ 60ಕ್ಕೆ ಇಳಿಸಿದೆ. ರೈಲ್ವೆಯಲ್ಲಿ ಹಿರಿಯ ಪುರುಷರಿಗೆ ಶೇ 40ರಷ್ಟು ಮತ್ತು ಮಹಿಳೆಯರಿಗೆ ಶೇ 50 ರಷ್ಟು ಪ್ರಯಾಣ ದರ ರಿಯಾಯಿತಿ ಪಡೆಯಲು ಸಾಧ್ಯವಾಗಿದೆ. ಸಂಘಕ್ಕೆ ಸ್ವಂತ ನಿವೇಶನ ಮತ್ತು ಕಟ್ಟಡ ನಿರ್ಮಿಸಿಕೊಳ್ಳುವ ನಿಟ್ಟಿನಲ್ಲೂ ಪ್ರಯತ್ನ ಅಗತ್ಯ’ ಎಂದರು.

ಸಂಘದ ಗೌರವಾಧ್ಯಕ್ಷ ಪಿ.ಎಸ್‌. ಧರಣೆಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಡಾ. ಬಿ.ಎಲ್‌. ಪಾಟೀಲ, ಆರ್‌.ಸಿ. ಹಲಗತ್ತಿ, ಡಾ. ರವಿಕಿರಣ, ಡಾ.ಎ.ಬಿ. ಸಾಲಿ, ಡಾ. ಸುಮಿತ್ರಾ ಮಮ್ಮಿಗಟ್ಟಿ, ಶಂಕರ ಕುಂಬಿ ಮತ್ತಿತರರು ಇದ್ದರು.

ಕಲಾವಿದ ಎಸ್‌.ಆರ್‌. ಕಂಪ್ಲಿ ನೇತೃತ್ವ­ದಲ್ಲಿ ನಟರಾಜ ನಾಟ್ಯ ಸಂಘದ ವತಿಯಿಂದ ‘ಏಡ್ಸ ಬಂತು ಏಡ್ಸ’ ನಾಟಕ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.