ADVERTISEMENT

‘ಗೋವು ಹಾಲು ತಾಯಿ ಹಾಲಿನಷ್ಟೇ ಶ್ರೇಷ್ಠ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 5:33 IST
Last Updated 24 ಸೆಪ್ಟೆಂಬರ್ 2013, 5:33 IST
ಧಾರವಾಡದ ಹುರಕಡ್ಲಿ ಅಜ್ಜ ಕಾನೂನು ಕಾಲೇಜಿನ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಿವ್ಯ ಸತ್ಸಂಗ ಕಾರ್ಯಕ್ರಮದಲ್ಲಿ ‘ಆರ್ಟ್‌ ಆಫ್‌ ಲಿವಿಂಗ್’ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ ಗುರೂಜಿ ಮಾತನಾಡಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಇದ್ದಾರೆ.
ಧಾರವಾಡದ ಹುರಕಡ್ಲಿ ಅಜ್ಜ ಕಾನೂನು ಕಾಲೇಜಿನ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಿವ್ಯ ಸತ್ಸಂಗ ಕಾರ್ಯಕ್ರಮದಲ್ಲಿ ‘ಆರ್ಟ್‌ ಆಫ್‌ ಲಿವಿಂಗ್’ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ ಗುರೂಜಿ ಮಾತನಾಡಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಇದ್ದಾರೆ.   

ಧಾರವಾಡ: ‘ಭಾರತೀಯ ಗೋವಿನ ಹಾಲು ತಾಯಿಯ ಎದೆ ಹಾಲಿನಷ್ಟೇ ಶ್ರೇಷ್ಠವಾದದ್ದು, ಇಂಥ ಗೋವುಗಳನ್ನು ನಾವು ರಕ್ಷಣೆ ಮಾಡುವುದನ್ನು ಬಿಟ್ಟು ಇದುವರೆಗೆ 78 ಲಕ್ಷ ಗೋವುಗಳನ್ನು ನಾಶ ಮಾಡಿದ್ದೇವೆ’ ಎಂದು ಆರ್ಟ್‌ ಆಫ್‌ ಲಿವಿಂಗ್‌ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿಯ ಹುರಕಡ್ಲಿ ಅಜ್ಜ ಕಾನೂನು ಕಾಲೇಜಿನ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ದಿವ್ಯ ಸತ್ಸಂಗ’ದಲ್ಲಿ ಮಾತನಾಡಿದ ಅವರು, ‘ನಮ್ಮ ಭಾರತೀಯ ಹಸುವಿನ ಹಾಲಿನಲ್ಲಿ ತಾಯಿಯ ಎದೆ ಹಾಲಿನಲ್ಲಿರುವಷ್ಟೇ ಪ್ರೋಟಿನ್‌ ಇದೆ. ಇದನ್ನು ಅರಿತಿರುವ ಬ್ರೆಜಿಲ್‌ ದೇಶದವರು ದೇಶದ ಗೋವು­ಗಳನ್ನು ಕೊಂಡೊಯ್ಯುತ್ತಿದ್ದಾರೆ. ಹಸುವಿನ ಹಾಲಿ­ನಷ್ಟೇ ಪೌಷ್ಟಿಕಾಂಶದ ಬೀಜಗಳು ನಮ್ಮ ದೇಶದಲ್ಲಿವೆ ಅವುಗಳ ರಕ್ಷಣೆ ಮಾಡುವ ಕೆಲಸ­ವನ್ನು ನಾವು ಮಾಡಬೇಕು’ ಎಂದರು.

‘ನಮ್ಮ ಜೀವನದಲ್ಲಿ ಜಿಗುಪ್ಸೆ ಬಂದಿದ್ದರೆ ಅದಕ್ಕೆ ಕಾರಣ ಆತ್ಮೀಯತೆಯ ಅಭಾವ. ಆತ್ಮೀಯತೆ ಎಲ್ಲರಲ್ಲಿಯೂ ಇರಬೇಕು. ಇದರೊಂದಿಗೆ ರಸಮಯ­ವಾದ ಜೀವನವನ್ನು ನಡೆಸಬೇಕು. ಈ ಜೀವನ ಇಲ್ಲದೇ ಇರುವುದಕ್ಕೆ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಎಂಥ ಕಾರ್ಯವನ್ನಾದರೂ ಮಾಡಬಲ್ಲೆ ಅಥವಾ ಎಂಥ ಸಾಧನೆಯನ್ನಾದರೂ ನಾನು ಮಾಡಬಲ್ಲೆ ಎಂಬ ದೃಢವಾದ ಆತ್ಮವಿಶ್ವಾಸ ನಮ್ಮಲ್ಲಿ ಇರಬೇಕು.

ಈ ಆತ್ಮವಿಶ್ವಾಸವಿಲ್ಲದ ವ್ಯಕ್ತಿ ಮಾನಸಿಕ ಕಾಯಿಲೆಗೆ ಒಳಗಾಗುತ್ತಾನೆ. ಎರಡನೆಯದಾಗಿ ನಾವು ಜನರ ಮೇಲೆ ನಂಬಿಕೆ ಅಥವಾ ವಿಶ್ವಾಸ ಇಡಬೇಕು. ಜಗತ್ತಿನಲ್ಲಿರುವ ಜನರಲ್ಲಿ ಶೇ 90ರಷ್ಟು ಒಳ್ಳೆಯ­ವರೇ ಇದ್ದಾರೆ. ಉಳಿದವರು ಯಾವ್ಯಾವುದೋ ಕಾರಣಗಳಿಂದಾಗಿ ಕೆಟ್ಟವರಾಗಿ­ದ್ದಾರೆ. ಅವರಲ್ಲಿಯೂ ಯಾವುದೋ ಒಂದು ಮೂಲೆ­ಯಲ್ಲಿ ಒಳ್ಳೆಯ ಗುಣ ಇದ್ದೇ ಇರುತ್ತದೆ, ಅದನ್ನು ನಾವು ಕಂಡುಕೊಳ್ಳಬೇಕು’ ಎಂದು ತಿಳಿಸಿದರು.

‘ಇಂದು ಸಮಾಜ ಕೆಟ್ಟು ಹೋಗಿದೆ ಎಂಬುದಕ್ಕೆ ಕೆಲವು ಕೆಟ್ಟ ಜನರಷ್ಟೇ ಕಾರಣರಲ್ಲ. ಕೆಟ್ಟದನ್ನು ನೋಡಿಯೂ ನಿಷ್ಕ್ರಿಯತೆಯಿಂದ ಕುಳಿತಿರುವ ಒಳ್ಳೆಯ ಜನರಿಂದಲೂ ಸಮಾಜ ಕೆಟ್ಟು ಹೋಗುತ್ತಿದೆ. ಆದ್ದರಿಂದ ಮೊದಲು ನಾವು ಧರ್ಮ ಮತ್ತು ನ್ಯಾಯವನ್ನು ಎತ್ತಿ ಹಿಡಿಯಬೇಕು. ಭಾರತ ದೇಶದಲ್ಲಿ ನ್ಯಾಯ ಮತ್ತು ಧರ್ಮಕ್ಕೆ ಇನ್ನೂ ಪ್ರಾಶಸ್ತ್ಯ ಇದೆ. ಮಾನವ ಕುಲಕ್ಕೆ ದೊಡ್ಡ ಕಳಂಕವಾಗಿರುವ ಹಿಂಸಾ ಪ್ರವೃತ್ತಿಯನ್ನು ನಾವು ತೆಗೆದು ಹಾಕಬೇಕಿದೆ.

ಈ ಜಗತ್ತನ್ನು ಅಥವಾ ಪ್ರಕೃತಿಯನ್ನು ಸೃಷ್ಟಿ ಮಾಡಿರುವುದಕ್ಕೆ ಹಿನ್ನೆಲೆ­ಯಾಗಿ ಒಂದು ಶಕ್ತಿ ಇದೆ ಎಂಬ ವಿಶ್ವಾಸ ನಮ್ಮಲ್ಲಿರಬೇಕು. ಅದು ಇಲ್ಲದೇ ಹೋದರೆ ಎಷ್ಟು ಸಂಪತ್ತಿದ್ದರೂ ಮತ್ತೆ ನಮ್ಮನ್ನು ದುಃಖ ಆವರಿಸಿ­ಕೊಳ್ಳುತ್ತದೆ. ಇಡೀ ಪ್ರಪಂಚಕ್ಕೆ ಭಾರತ ಮಾನ­ವೀಯ ಮೌಲ್ಯಗಳ ಆಧಾರ ಸ್ತಂಭವಾಗಿ ನಿಲ್ಲ­ಬೇಕು. ಈ ನಿಟ್ಟಿನಲ್ಲಿ ಇಂದಿನ ಯುವಕರು ಇದಕ್ಕೆ ಪೂರಕವಾದ ಕೆಲಸ ಮಾಡಬೇಕು’ ಎಂದರು.

ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಮಕೃಷ್ಣ ವಿವೇಕಾನಂದ ಆಶ್ರಮ ವಿಜಯಾನಂದ ಸರಸ್ವತಿ ಸ್ವಾಮೀಜಿ ಇದ್ದರು. ಇದಕ್ಕೂ ಮುನ್ನ ಶಾಲಿನಿ ಮತ್ತು ಶ್ರೀನಿವಾಸನ್‌ ಭಕ್ತಿ ಸಂಗೀತ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.