ADVERTISEMENT

‘ನ್ಯಾಯಾಂಗ ನಂಬಿಕೆ ಉಳಿಸಿಕೊಳ್ಳಬೇಕು’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 8:12 IST
Last Updated 5 ಡಿಸೆಂಬರ್ 2013, 8:12 IST

ಧಾರವಾಡ: ‘ಪ್ರಸ್ತುತ ಸಮಾಜದಲ್ಲಿ ಸಾಮರ್ಥ್ಯ, ಗುಣವಂತಿಕೆ ಮತ್ತು ನಡತೆಯ ಕೊರತೆ ಅಪಾರವಾಗಿ ಕಂಡು ಬರುತ್ತಿದ್ದು, ಸಮಾಜ ಅಧಃಪತನದತ್ತ ಮುಖ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ನ್ಯಾಯಾಂಗ ತನ್ನ ಮೊದಲಿನ ನಂಬಿಕೆಯನ್ನು ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು’ ಎಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಡಾ.ವಿ.ಎಸ್.ಮಳಿಮಠ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜನೆಗೊಂಡಿದ್ದ ಹಿರಿಯ ವಕೀಲ ದಿವಂಗತ ಎಂ.ಜಿ ಅಗಡಿ ಸಂಸ್ಮರಣೆ ದತ್ತಿ ಉದ್ಘಾಟಿಸಿ ಮಾತನಾಡಿ, ‘ವ್ಯವಸ್ಥೆಯೊಂದು ಗಟ್ಟಿಗೊಳ್ಳಬೇಕಾದರೆ ಕೇವಲ ಸಾಮರ್ಥ್ಯವಿದ್ದರೆ ಸಾಲದು. ಅದರ ಜೊತೆ ಗುಣವಂತಿಕೆ, ಉತ್ತಮ ನಡತೆ, ಮಾನವೀಯ ಮೌಲ್ಯಗಳು ಬೇಕು. ವಿಶೇಷವಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಇವುಗಳ ಅಧಃಪತನವಾಗಕೂಡದು. ಏಕೆಂದರೆ ಬೇರೆ ಕ್ಷೇತ್ರಗಳಲ್ಲಿಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವ ನಂಬಿಕೆಯಿಂದ ಜನ ನ್ಯಾಯಾಲಯಕ್ಕೆ ಬರುತ್ತಾರೆ. ವಕೀಲರು ಮತ್ತು ನ್ಯಾಯಾಧೀಶರು ಈ ಗುಣಗಳನ್ನು ಉಳಿಸಿಕೊಂಡರೆ ಮಾತ್ರ ಗುಣಮಟ್ಟದ ನ್ಯಾಯ ದೊರಕಿಸಲು ಸಾಧ್ಯವಾಗುತ್ತದೆ’ ಎಂದರು.

‘ಈ ನಿಟ್ಟಿನಲ್ಲಿ ಅಗಡಿಯವರಂಥ ವಕೀಲರು ಇಂದಿನ ಪೀಳಿಗೆಗೆ ಮಾದರಿ. ತಮ್ಮ ಬದುಕಿನುದ್ದಕ್ಕೂ ಆಳವಾದ ಅಧ್ಯಯನ, ಸಾಮಾಜಿಕ ಕಳಕಳಿ, ನಿರಾಡಂಬರ ಬದುಕಿನ ಮೂಲಕ ಸಮಾಜದಲ್ಲಿ ತಮ್ಮದೇ ಆದ ಸ್ಥಾನ ಸಂಪಾದಿಸಿದವರು. ಅವರನ್ನು ನೆನಪಿಸಿಕೊಳ್ಳುವುದು ಕೇವಲ ಸಂತೋಷವಲ್ಲ. ಅದು ಕರ್ತವ್ಯ. ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದವರನ್ನು ನಿರಂತರವಾಗಿ ನೆನಪಿಸಿಕೊಳ್ಳುವ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ಆರಂಭಗೊಂಡಿರುವ ದತ್ತಿ ಔಚಿತ್ಯಪೂರ್ಣ. ನಮ್ಮನ್ನು ರೂಪಿಸಿರುವ ಸಮಾಜಕ್ಕೆ ನಾವು ಋಣಿಯಾಗಿರಬೇಕು. ಅದರ ಅಭ್ಯುದಯಕ್ಕೆ ನಮ್ಮಿಂದಾದಷ್ಟು ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಅಗಡಿಯವರ ಬದುಕಿನಿಂದ ಸ್ಫೂರ್ತಿ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಡಾ.ಟಿ.ಆರ್.ಸುಬ್ರಮಣ್ಯ, ಸಂಘದ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ, ಕೆ.ಬಿ.ನಾವಲಗಿಮಠ, ಹೈಕೋರ್ಟ್‌ ನ್ಯಾಯಮೂರ್ತಿ ರವಿ ಮಳಿಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.