ADVERTISEMENT

ಹುಬ್ಬಳ್ಳಿ: ₹15 ಜಿಎಸ್‌ಟಿ ತೆರಿಗೆ ತಪ್ಪಿಸಿದ್ದಕ್ಕೆ ₹20 ಸಾವಿರ ದಂಡ!

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 13:40 IST
Last Updated 9 ಡಿಸೆಂಬರ್ 2018, 13:40 IST
   

ಹುಬ್ಬಳ್ಳಿ: ವರ್ತಕರೊಬ್ಬರು ₹ 15 ತೆರಿಗೆ ಪಾವತಿ ಮಾಡಿದ್ದಕ್ಕೆ ಜಿಎಸ್‌ಟಿ ನಿರ್ವಹಣೆ ಮಾಡುವ ವಾಣಿಜ್ಯ ತೆರಿಗೆ ಅಧಿಕಾರಿಗಳು ಬರೋಬ್ಬರಿ ₹ 20 ಸಾವಿರ ತೆರಿಗೆ ವಿಧಿಸಿದ್ದು, ವರ್ತಕರನ್ನು ಕಂಗಾಲು ಮಾಡಿದೆ.

ಬಟ್ಟೆ ವ್ಯಾಪಾರಿಯೊಬ್ಬರು ಗ್ರಾಹಕರೊಬ್ಬರಿಗೆ ₹ 300 ಮೊತ್ತದ ನೈಟಿಯನ್ನು (ಮಹಿಳೆಯರು ಉಡುಪು) ಮಾರಾಟ ಮಾಡಿದ್ದರು. ಅದಕ್ಕೆ ₹ 15 ತೆರಿಗೆಯನ್ನು ರಾಜ್ಯ ಹಾಗೂ ಕೇಂದ್ರಕ್ಕೆ ಸಲ್ಲಿಸಬೇಕಿತ್ತು. ಅದನ್ನು ನಿಗದಿತ ಸಮಯಕ್ಕೆ ಸಲ್ಲಿಸಿರಲಿಲ್ಲ. ಇದನ್ನು ಪತ್ತೆ ಹಚ್ಚಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ರಾಜ್ಯಕ್ಕೆ (ಎಸ್‌ಜಿಎಸ್‌ಟಿ) ₹ 10 ಸಾವಿರ ಹಾಗೂ ಕೇಂದ್ರಕ್ಕೆ ₹ 10 (ಸಿಜಿಎಸ್‌ಟಿ) ಸಾವಿರ ಪಾವತಿಯಾಗುವಂತೆ ಒಟ್ಟು ₹ 20 ಸಾವಿರ ದಂಡ ವಿಧಿಸಿದ್ದಾರೆ. ಸರಕು ಹಾಗೂ ಸೇವೆಗಳ ತೆರಿಗೆ ಕಾಯ್ದೆ 2017ರ ಸೆಕ್ಷನ್‌ 122ರ ಅನ್ವಯ ದಂಡ ವಿಧಿಸಿ ತೆರಿಗೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

ಕರಾಳ ಶಾಸನ: ಈ ಕುರಿತು ಪ್ರತಿಕ್ರಿಯೆ ನೀಡಿರುವ ಧಾರವಾಡ ಜಿಲ್ಲಾ ಕಾಂಗ್ರೆಸ್‌ ವಕ್ತಾರ ವಸಂತ ಲದವಾ, ಒಂದು ದೇಶ ಒಂದು ತೆರಿಗೆ ಘೋಷ ವಾಕ್ಯ ಹೇಳಲು ಸುಂದರವಾಗಿದೆಯೇ ಹೊರತು ನೈಜ ಸ್ಥಿತಿ ಬಹಳ ಕರಾಳವಾಗಿದೆ. ಕೇವಲ ₹ 300 ಮಾರಟ ಬಿಲ್‌ ನೀಡದ ಕಾರಣ ಸಣ್ಣ ಪುಟ್ಟ ವರ್ತಕರಿಗೂ ಇಪ್ಪತ್ತು ಸಾವಿರ ದಂಡ ವಿಧಿಸಿರುವುದು ದೇಶದ ಇತಿಹಾಸದಲ್ಲಿ ಕಂಡು ಕೇಳರಿಯದ ಉಗ್ರ ಕಾನೂನಾಗಿದೆ ಎಂದು ಟೀಕಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರ ಜಿಎಸ್‌ಟಿಗೆ ಸಂಬಂಧಿಸಿದ ಎಲ್ಲ ತಂತ್ರಾಂಶಗಳನ್ನು ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಿಲ್ಲ. ಜಿಎಸ್‌ಟಿ ರಿಟರ್ನ್‌ ಸಲ್ಲಿಕೆ ಪ್ರಕ್ರಿಯೆ ಬಹಳಷ್ಟು ಸಂಕೀರ್ಣವಾಗಿದೆ. ಅಲ್ಲದೇ, ಇಷ್ಟು ಪ್ರಮಾಣದ ದಂಡ ವಿಧಿಸಿದರೆ ವ್ಯಾಪಾರಿಗಳು ಬದುಕುವುದು ಹೇಗೆ? ಜಿಎಸ್ಟಿ ನಮೂನೆಗಳನ್ನು ಸಲ್ಲಿಸುವಲ್ಲಿ ಒಂದು ದಿನ ತಡವಾದರೂ ದಂಡವನ್ನು ಏಕಪಕ್ಷೀಯವಾಗಿ ಮನಬಂದಂತೆ ವಿಧಿಸಲಾಗುತ್ತದೆ. ದಂಡ ಹಾಗೂ ಬಡ್ಡಿಯನ್ನು ಸಕಾಲಕ್ಕೆ ಕಟ್ಟದಿದ್ರೆ ಅಂಥ ವರ್ತಕರ ಎಲ್ಲ ಸೌಲಭ್ಯಗಳನ್ನೂ ಹಿಂದಕ್ಕೆ ಪಡೆಯಲಾಗುತ್ತದೆ. ಇಂಥ ಕರಾಳ ತೆರಿಗೆ ವ್ಯವಸ್ಥೆ ದೇಶದಲ್ಲಿ ಹಿಂದೆಂದೂ ಇರಲಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.