ADVERTISEMENT

ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಕಹಿನೆನಪಿಗೆ ನೂರು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 13:59 IST
Last Updated 13 ಏಪ್ರಿಲ್ 2019, 13:59 IST
ಧಾರವಾಡದ ಭಾವಸಾರ ಮಂಗಲ ಕಾರ್ಯಾಲಯದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಎಸ್.ಆರ್. ಹಿರೇಮಠ ಮಾತನಾಡಿದರು
ಧಾರವಾಡದ ಭಾವಸಾರ ಮಂಗಲ ಕಾರ್ಯಾಲಯದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಎಸ್.ಆರ್. ಹಿರೇಮಠ ಮಾತನಾಡಿದರು   

ಧಾರವಾಡ: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಅತ್ಯಂತ ಅಮಾನವೀಯ, ರಾಕ್ಷಸೀಘಟನೆ ಜಲಿಯನ್ವಾಲಾ ಭಾಗ್ ಹತ್ಯಾಕಾಂಡಕ್ಕೆ ನೂರು ವರ್ಷಗಳು ತುಂಬಿದ ಸಂದರ್ಭದಲ್ಲಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್ ಸಂಘಟನೆಗಳು ಜತೆಗೂಡಿ ಕಾರ್ಯಕ್ರಮ ಆಯೋಜಿಸಿದ್ದವು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಾಮಾಜಿಕ ಹೋರಾಟಗಾರ ಎಸ್‌.ಆರ್. ಹಿರೇಮಠ, ‘ಈ ಹತ್ಯಾಕಾಂಡ ಜಗತ್ತಿನಲ್ಲೇ ಅತ್ಯಂತ ಕ್ರೂರ ಘಟನೆ.ಭಾರತೀಯರ ಹೋರಾಟದ ಹಕ್ಕನ್ನು ಕಸಿದುಕೊಳ್ಳಲು ಬ್ರಿಟಿಷರು ತಂದ ರೌಲೆಟ್ ಕಾಯ್ದೆಯನ್ನು ವಿರೋಧಿಸಿ ಪಂಜಾಬ್‌ನ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಸಭೆಯ ಮೇಲೆ ಬ್ರಿಟಿಷ್ ಅಧಿಕಾರಿ ಡಯರ್ ತನ್ನ ಸೈನ್ಯದೊಂದಿಗೆ ಅತ್ಯಂತ ಭೀಕರವಾಗಿ ಗುಂಡಿನ ದಾಳಿ ನಡೆಸಿ ಸಾವಿರಾರು ಜನರ ಮಾರಣಹೋಮ ನಡೆಸಿದ. ಈ ಘಟನೆಯನ್ನು ಇಡೀ ಪ್ರಪಂಚ ಖಂಡಿಸಿತ್ತು. ದುರಂತವೆಂದರೆ ಸ್ವತಂತ್ರ ಬಂದು 72 ವರ್ಷಗಳಾದರೂ ಇಂದಿಗೂ ಆಳುವ ಸರ್ಕಾರಗಳು ಜನರ ಹೋರಾಟದ ಹಕ್ಕನ್ನು ಕಸಿದುಕೊಳ್ಳುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆಳುವವರನ್ನು ಪ್ರಶ್ನಿಸಿದರೆ ದೇಶ ದ್ರೋಹಿಗಳೆಂದುಕರೆಯಲಾಗುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಆಶಯಗಳಾದ ಸಮಾನತೆ, ಸಹೋದರತೆ, ಸ್ವಾತಂತ್ರ್ಯ ಇಂದಿಗೂ ಎಲ್ಲರಿಗೂ ಸಿಕ್ಕಿಲ್ಲ. ಇಡೀ ದೇಶದ ಸಂಪತ್ತು ಕೆಲವೇ ಜನರ ನಿಯಂತ್ರಣದಲ್ಲಿದೆ. ಅವರು ವ್ಯವಸ್ಥೆಯನ್ನು ನಿಯಂತ್ರಣ ಮಾಡುತ್ತಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕೆಂದರೆ ಯುವಜನರು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಇತಿಹಾಸವನ್ನು ಅರ್ಥೈಸಿಕೊಂಡು ಅದರಿಂದ ಸ್ಪೂರ್ತಿ ಪಡೆದು ಇಂದು ನಮ್ಮ ನಡುವೆ ನಡೆಯುತ್ತಿರುವ ಅನ್ಯಾಯಗಳನ್ನು ಎದುರಿಸುವಂತಾಗಬೇಕು’ ಎಂದರು.

ADVERTISEMENT

ಎಐಡಿವೈಓ ಯುವಜನ ಸಂಘಟನೆಯ ಅಖಿಲ ಭಾರತ ಅಧ್ಯಕ್ಷರಾದ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ‘ಜಲಿಯನ್‌ವಾಲಾಭಾಗ್ ಘಟನೆ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಕಾರಿ ತಿರುವು ಕೊಟ್ಟ ಸಂದರ್ಭ. ಅಂದು ಅಲ್ಲಿ ಸೇರಿದ್ದ ಆ ಜನರಿಗೆ ತಮ್ಮ ಬಲಿದಾನದ ಮೂಲಕ ದೇಶದ ಸ್ವಾತಂತ್ರ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ವೈಯಕ್ತಿಕ ಲಾಭವನ್ನು ಮಾಡಿಕೊಳ್ಳುವ ಉದ್ದೇಶವಿರಲಿಲ್ಲ. ಆದರೆ, ಇಂದು ಒಂದು ದಿನವೂ ಜೈಲಿಗೆ ಹೋಗದವರು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದವರು ದೇಶಭಕ್ತಿಯನ್ನು ಗುತ್ತಿಗೆ ಹಿಡಿದಂತೆ ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಲುಷಿತಗೊಂಡಿರುವ ಇಂದಿನ ರಾಜಕೀಯ, ಸಾಮಾಜಿಕ ವಾತಾವರಣದಲ್ಲಿ ಹೊಸ ಕ್ರಾಂತಿಕಾರಿ ಹೋರಾಟದ ರಾಜಕಾರಣದ ಮಾದರಿಯೊಂದನ್ನು ಯುವಕರು ಸೃಷ್ಟಿಸಬೇಕಿದೆ. ಅದು ಖಚಿತವಾಗಿ ಸ್ವಾತಂತ್ರ್ಯ ಹೋರಾಟದ ಆಶಯಗಳನ್ನು ಒಳಗೊಳ್ಳಬೇಕಿದೆ. ಇಂದಿನ ರಾಜಕೀಯ ಕುಲಗೆಟ್ಟು ಹೋಗಿದೆ ಎಂದು ಮೂಗುಮುರಿಯುವ ಬದಲು ದೇಶದ ರಾಜಕೀಯವನ್ನು ಸರಿದಾರಿಗೆ ತರುವಂತಹ ಹಾಗೂ ಸಮ ಸಮಾಜದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಏಐಡಿವೈಒ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ ಜಡಗನ್ನವರ ವಹಿಸಿದ್ದರು. ಎಐಡಿವೈಒನ ಜಿಲ್ಲಾ ಜಂಟಿಕಾರ್ಯದರ್ಶಿ ಹನುಮೇಶ ಹುಡೇದ, ಎಐಎಂಎಸ್‌ಎಸ್‌ನ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ ದೇವತ್ಕಲ್, ಎಐಡಿಎಸ್‌ಒನ ಜಿಲ್ಲಾ ಸಮಿತಿ ಸದಸ್ಯರಾದ ರಣಜಿತ್ ದೂಪದ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.