ADVERTISEMENT

ಹುಬ್ಬಳ್ಳಿ: ಕಿಮ್ಸ್‌ನಲ್ಲಿ 101 ಮಂದಿ ಕೋವಿಡ್‌–19 ಪೀಡಿತರಿಗೆ ಹೆರಿಗೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 8:30 IST
Last Updated 14 ಸೆಪ್ಟೆಂಬರ್ 2020, 8:30 IST
   

ಹುಬ್ಬಳ್ಳಿ: ಏಪ್ರಿಲ್‌ನಿಂದ ಸೆ.13ರವ‌ರೆಗೆ ಕೋವಿಡ್‌–19 ಪೀಡಿತ 101 ಹೆರಿಗೆಗಳನ್ನು ಕಿಮ್ಸ್‌ನಲ್ಲಿ ಮಾಡಿಸಲಾಗಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದರಲ್ಲಿ 35 ಮಂದಿಗೆ ಸಾಮಾನ್ಯ ಹೆರಿಗೆಯಾಗಿದ್ದರೆ, 66 ಸಿಸೇರಿಯನ್‌ ಮಾಡಲಾಗಿದೆ. ಕೋವಿಡ್‌–19 ಪೀಡಿತರಾಗಿದ್ದರಿಂದ ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳದೇ ಸಿಸೇರಿಯನ್‌ ಮಾಡಿದ್ದರಿಂದ, ಆ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು.

ಬಳ್ಳಾರಿ, ಬೆಂಗಳೂರು ಆಸ್ಪತ್ರೆಯಲ್ಲಿಯೂ 100 ಹೆರಿಗೆಗಳಾಗಿವೆ. ಪ್ರತಿ ತಿಂಗಳು 900 ರಿಂದ ಒಂದು ಸಾವಿರ ಹೆರಿಗೆಗಳಾಗುತ್ತಿದ್ದವು. ಕೋವಿಡ್‌ನಿಂದಾಗಿ ಕಿಮ್ಸ್‌ನಲ್ಲಿ ಶೇ 10 ರಿಂದ 15ರಷ್ಟು ಹೆರಿಗೆ ಮಾಡಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಎಂದರು.

ADVERTISEMENT

ಕೆಲವರಿಗೆ ಹೆರಿಗೆ ಮಾಡಿಸುವುದು ಕಷ್ಟಕರವಾಗಿತ್ತು. ಕಿಮ್ಸ್‌ ಸಿಬ್ಬಂದಿ ಹೆಚ್ಚಿನ ಜಾಗರೂಕತೆ ವಹಿಸಿ ಹೆರಿಗೆ ಮಾಡಿದ್ದಾರೆ. ಆಸ್ಪತ್ರೆಗೆ ತರುವ ಮೊದಲೇ ನಾಲ್ವರು ಮಕ್ಕಳು ಗರ್ಭಕೋಶದಲ್ಲಿಯೇ ಮೃತಪಟ್ಟಿದ್ದವು. ಮೂವರು ತಾಯಂದಿರು ಹೆರಿಗೆ ನಂತರ ಮೃತಪಟ್ಟಿದ್ದಾರೆ ಎಂದು ಹೇಳಿದರು.

ಹೆರಿಗೆ ವಿಭಾಗದ ಮೂವರು ವೈದ್ಯರು, 8 ಮಂದಿ ಪಿಜಿ ವಿದ್ಯಾರ್ಥಿಗಳು, ಸ್ಟಾಫ್‌ ನರ್ಸ್‌ಗಳು ಕೋವಿಡ್‌–19 ದೃಢಪಟ್ಟಿತ್ತು. ಎಲ್ಲರೂ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಮತ್ತೆ ಕೆಲಸಕ್ಕೂ ಮರಳಿದ್ದಾರೆ. ಅವರೆಲ್ಲರ ಕಾರ್ಯ ಶ್ಲಾಘನೀಯ ಎಂದರು.

ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ.ಕಸ್ತೂರಿ ದೋಣಿಮಠ ಮಾತನಾಡಿ, 101 ಹೆರಿಗೆಯಲ್ಲಿ 55 ಗಂಡು, 46 ಹೆಣ್ಣು ಮಕ್ಕಳು ಜನಿಸಿವೆ. ಇಬ್ಬರು ಅವಳಿ ಮಕ್ಕಳಿಗೆ ಜನನ ನೀಡಿದ್ದಾರೆ. ಆರಂಭದಲ್ಲಿ ಹೆರಿಗೆ ಮಾಡಿಸುವಾಗ ವೈದ್ಯಕೀಯ ಸಿಬ್ಬಂದಿಗೂ ಭಯವಿತ್ತು. ಆದರೆ, ಎಲ್ಲ ವೈದ್ಯರ ಸಹಕಾರದಿಂದ ಈಗ ಸರಳವಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದೇವೆ ಎಂದು ಹೇಳಿದರು.

‘ನಾಲ್ಕು, ಐದು ತಿಂಗಳ ಗರ್ಭಿಣಿಯರಿಗೂ ಕೋವಿಡ್‌–19 ದೃಢಪಟ್ಟಿತ್ತು. ಹೆರಿಗೆಯಾದವರು ಹೊರತುಪಡಿಸಿ 59 ಗರ್ಭಿಣಿಯರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈಗಲೂ 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಮಕ್ಕಳ ತಜ್ಞ ಡಾ. ಪ್ರಕಾಶ ವಾರಿ ಮಾತನಾಡಿ, ಇಲ್ಲಿಯವರೆಗೆ ಕೋವಿಡ್‌–19 ದೃಢಪಟ್ಟ 66 ಮಕ್ಕಳು ದಾಖಲಾಗಿದ್ದವು. ಶೇ 10 ರಷ್ಟು ಮಕ್ಕಳಿಗೆ ಮಾತ್ರ ಸಣ್ಣ ಪ್ರಮಾಣದಲ್ಲಿ ರೋಗದ ಲಕ್ಷಣಗಳಿದ್ದವು. ಎಲ್ಲರೂ ಆರಾಮಾಗಿ ಬಿಡುಗಡೆಯಾಗಿದ್ದಾರೆ ಎಂದರು.

ಆಕ್ಸಿಜನ್‌ ಕೊರತೆ ಇಲ್ಲ

ಕಿಮ್ಸ್‌ನಲ್ಲಿ ರೋಗಿಗಳಿಗೆ ಆಕ್ಸಿಜನ್‌ ಕೊರತೆಯಾಗಿಲ್ಲ ಎಂದು ಡಾ.ರಾಮಲಿಂಗಪ್ಪ ಅಂಟರತಾನಿ ಹೇಳಿದರು.

20 ಕೆಎಲ್‌ ಸಂಗ್ರಹ ಸಾಮರ್ಥ್ಯವನ್ನು ಕಿಮ್ಸ್‌ ಹೊಂದಿದ್ದು, ನಿತ್ಯ 10 ರಿಂದ 11 ಕೆಎಲ್‌ ಬೇಡಿಕೆ ಇದೆ. 600 ಆಕ್ಸಿಜನ್‌ ಸೌಲಭ್ಯ ಹೊಂದಿದ ಬೆಡ್‌ಗಳಿವೆ. ಅದನ್ನು ಗಮನದಲ್ಲಿಟ್ಟುಕೊಂಡು ಇನ್ನೂ 20 ಕೆಎಲ್‌ ಸಂಗ್ರಹ ಸಾಮರ್ಥ್ಯದ ಟ್ಯಾಂಕ್‌ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಇಲ್ಲಿಯವರೆಗೆ ಕಿಮ್ಸ್‌ನಲ್ಲಿ 4,300 ಕೋವಿಡ್‌–19 ಪೀಡಿತರಿಗೆ ಚಿಕಿತ್ಸೆ ನೀಡಲಾಗಿದೆ. 44 ಮಂದಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲಾಗಿದೆ. ಹಾವೇರಿ, ಗದಗ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಸುತ್ತಲಿನ ರೋಗಿಗಳು ಇಲ್ಲಿಗೆ ಬರುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.