ಹುಬ್ಬಳ್ಳಿ: ಈ ಬಾರಿ ಬೇಸಿಗೆ ಆರಂಭದಲ್ಲೇ ಸೆಕೆ ಹೆಚ್ಚಾಗಿದ್ದು, ಜಿಲ್ಲೆಯ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ಕೊರತೆ ನೀಗಿಸಲೆಂದು ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲವೆಡೆ ಹಾಳಾಗಿದ್ದು, ಜನರು ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 123 ಕುಡಿಯುವ ನೀರಿನ ಘಟಕಗಳು ಸ್ಥಗಿತವಾಗಿವೆ.
ಜಿಲ್ಲೆಯಾದ್ಯಂತ ಒಟ್ಟು 467 ಕುಡಿಯುವ ನೀರಿನ ಘಟಕಗಳಿವೆ. ಅವುಗಳಲ್ಲಿ 344 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ನೀರಿನ ಕೊರತೆಯಿಂದ 20ರಿಂದ 25 ಘಟಕಗಳು ಹಾಗೂ ಸ್ಥಳಾಂತರಿಸಬೇಕಿರುವ 40ರಿಂದ 50 ಘಟಕಗಳು ಸೇರಿ ವಿವಿಧ ಕಾರಣಗಳಿಂದ ಒಟ್ಟು 123 ಘಟಕಗಳು ಅನುಪಯುಕ್ತವಾಗಿವೆ.
‘ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂಬ ಉದ್ದೇಶದಿಂದ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದೆ. ಆದರೆ ನಿರ್ವಹಣೆ ಕೊರತೆ, ಜನ ನೀರು ಬಳಸದೇ ಇರುವುದು, ಕಾಯಿನ್ ಬೂತ್ ಇಲ್ಲದಿರುವುದು, ಪೈಪ್‌ಲೈನ್ ಸಮಸ್ಯೆ ಮತ್ತು ಕೆಲ ಕಡೆ ಶುದ್ಧ ನೀರಿನ ಘಟಕಗಳಲ್ಲಿನ ಗಾಜು ಒಡೆದು ಘಟಕಗಳು ಸ್ಥಗಿತಗೊಂಡಿವೆ’ ಎಂದು ಧಾರವಾಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ ಪಾಟೀಲ ಹೇಳಿದರು.
‘ಆಯಾ ಗ್ರಾಮಗಳಲ್ಲಿರುವ ಜನರ ಸಂಖ್ಯೆಗೆ ಅನುಗುಣವಾಗಿ 500, 1,000, 1,500 ಹಾಗೂ 2,000 ಲೀಟರ್ ಸಾಮರ್ಥ್ಯದ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಈ ಮೊದಲು ₹2ಕ್ಕೆ 20 ಲೀಟರ್ ನೀಡಲಾಗುತಿತ್ತು. ಪ್ರಸ್ತುತ ₹5ಕ್ಕೆ 20 ಲೀಟರ್ ನೀರು ದೊರೆಯುತ್ತದೆ. ಸರ್ಕಾರದ ಮಾನದಂಡದ ಪ್ರಕಾರ ವರ್ಷದಿಂದ ವರ್ಷಕ್ಕೆ ₹1 ಹೆಚ್ಚಿಸಬೇಕು. ಆದರೆ ಜನರ ವಿರೋಧದಿಂದಾಗಿ ಹೆಚ್ಚಿಸಿಲ್ಲ’ ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿಗಳ ನಿರ್ವಹಣೆ: ಈ ಮುಂಚೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ನೀಡಲಾಗುತಿತ್ತು. ಈ ಬಾರಿ ಧಾರವಾಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೇ ನಿರ್ವಹಣೆಯನ್ನೂ ಮಾಡುತ್ತಿದೆ. ಆದರೆ ವಿವಿಧೆಡೆ ಗ್ರಾಮ ಪಂಚಾಯಿತಿಯವರು ತಾವೇ ನಿರ್ವಹಣೆಗೆ ಮುಂದಾಗಿರುವುದರಿಂದ ಒಟ್ಟು 100 ಘಟಕಗಳ ನಿರ್ವಹಣೆಯ ಹೊಣೆಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘7 ದಿನದೊಳಗೆ ದುರಸ್ತಿ’
ಶುದ್ಧ ಕುಡಿಯುವ ನೀರಿನ ಘಟಕಗಳು ವಿವಿಧ ಕಾರಣಗಳಿಂದ ಬಂದ್ ಆಗುತ್ತಿರುತ್ತವೆ. ಸಣ್ಣ ತೊಂದರೆಯಾಗಿದ್ದಲ್ಲಿ ಎರಡು ದಿನದೊಳಗೆ ಹಾಗೂ ದೊಡ್ಡ ಪ್ರಮಾಣದ ಸಮಸ್ಯೆಯಾಗಿದ್ದರೆ ಏಳು ದಿನದೊಳಗೆ ದುರಸ್ತಿ ಮಾಡಲಾಗುವುದು’ ಎಂದು ತಿಳಿಸಿದರು.
40ಕ್ಕೂ ಹೆಚ್ಚು ಘಟಕಗಳು ಸ್ಥಳಾಂತರ:
ಜಾಗದ ಕೊರತೆ, ಜನರು ಬಳಸದೇ ಇರುವುದರಿಂದ ವಿವಿಧೆಡೆ ಒಟ್ಟು 40ರಿಂದ 50 ಘಟಕಗಳನ್ನು ಸ್ಥಳಾಂತರ ಮಾಡಬೇಕಿದೆ. ಆಯಾ ಗ್ರಾಮದ ಗ್ರಾಮ ಪಂಚಾಯಿತಿಯವರು ಸೂಕ್ತ ಸ್ಥಳ ತೋರಿಸಿದ್ದಲ್ಲಿ ಸ್ಥಳಾಂತರ ಮಾಡುತ್ತೇವೆ ಎಂದು ಜಗದೀಶ ಹೇಳಿದರು.
‘ಈ ಬಾರಿ ಬಿಸಿಲು ಹೆಚ್ಚಾಗಿದ್ದು, ಪದೇ ಪದೇ ನೀರು ಕುಡಿಯಬೇಕೆನಿಸುತ್ತದೆ. ನಳದ ಮೂಲಕ ಬಿಡುವ ನೀರು ಮೂರ್ನಾಲ್ಕು ದಿನದ ನಂತರ ಕುಡಿಯಬೇಕೆನಿಸುವುದಿಲ್ಲ. ಆದರೆ ಕುಡಿಯುವ ನೀರನ್ನು ಆರೇಳು ದಿನಕ್ಕೊಮ್ಮೆ ಬಿಡಲಾಗುತ್ತಿದೆ. ಹಾಗಾಗಿ ವಿದ್ಯಾನಗರದಲ್ಲಿರುವ ಶುದ್ಧ ಘಟಕದ ನೀರನ್ನು ಬಳಸುತ್ತಿದ್ದೇವು. ಆದರೆ ಈ ನಡುವೆ ಘಟಕ ಹಾಳಾಗಿದ್ದರಿಂದ ಕುಡಿಯುವ ನೀರಿಗೆ ಪರದಾಡಬೇಕಾಯಿತು. ಬೇಸಿಗೆಯಲ್ಲಿ ಶುದ್ಧ ಘಟಕಗಳು ಹಾಳಾಗದಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ವಿದ್ಯಾನಗರದ ನಿವಾಸಿ ಶಿವಾನಿ ಬಿ. ತಿಳಿಸಿದರು.
ಅಶುದ್ಧ ನೀರು ಪೂರೈಕೆ!
‘ಹೆಸರಿಗೆ ಮಾತ್ರವೇ ಇದು ಶುದ್ಧ ಘಟಕ. ಇದರಲ್ಲಿ ಬರುವ ನೀರನ್ನು ಕುಡಿದರೆ ಆಸ್ಪತ್ರೆಗೆ ಸೇರುವುದು ಖಚಿತ. ಅಷ್ಟು ಅಶುದ್ಧವಾಗಿರುತ್ತದೆ. ನೀರಿನ ಟ್ಯಾಂಕ್ ಸಹ ಸ್ವಚ್ಛಗೊಳಿಸುವುದಿಲ್ಲ. ಕೆಲವೊಮ್ಮೆ ಹಾಕಿದ ಕಾಯಿನ್ ಸಿಕ್ಕಿಕೊಳ್ಳುತ್ತದೆ ನೀರೂ ಬರುವುದಿಲ್ಲ. ದುರಸ್ತಿಗೊಳಿಸುವಂತೆ ರಾಜಕೀಯ ಪ್ರತಿನಿಧಿಗಳಿಗೆ ತಿಳಿಸಿದರೆ ‘ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ನುಣುಚಿಕೊಳ್ಳುತ್ತಾರೆ. ಹಾಗಾಗಿ ಸಮೀಪದಲ್ಲೇ ಘಟಕವಿದ್ದರೂ ಇಲ್ಲಿನ ನಿವಾಸಿಗಳು ದೂರದ ಘಟಕಗಳಿಂದ ನೀರು ತರುತ್ತಾರೆ. ದುರಸ್ತಿಯೊಂದಿಗೆ ಸ್ವಚ್ಛತೆಗೂ ಆದ್ಯತೆ ನೀಡಬೇಕು ಎನ್ನುತ್ತಾರೆ ಸಿಬಿಟಿಯ ಬಸ್‌ನಿಲ್ದಾಣದ ಸ್ಥಳೀಯ ನಿವಾಸಿಯೊಬ್ಬರು.
‘ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ’
ಅಣ್ಣಿಗೇರಿ: ಪಟ್ಟಣದ ಪುರಸಭೆಗೆ ಸಂಬಂಧಿಸಿದ ಒಟ್ಟು 8 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಪಟ್ಟಣದಲ್ಲಿ ಈಗಾಗಲೇ 24*7 ಶುದ್ಧ ಕುಡಿಯುವ ನೀರು ಸರಬರಾಜು ಆಗುತ್ತಿರುವುದರಿಂದ ಯಾವುದೇ ತೊಂದರೆ ಆಗುತ್ತಿಲ್ಲ. ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಮಾತ್ರ ಬಂದ್ ಆಗಿದೆ. ಇದರಿಂದ ಎಪಿಎಂಸಿ ಆವರಣದಲ್ಲಿ ಕೃಷಿ ಚಟುವಟಿಕೆ ಮಾಡುವ ರೈತರಿಗೆ ಅನಾನುಕೂಲವಾಗುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಘಟಕ ಬಳಕೆಯಾಗುತ್ತಿಲ್ಲ’ ಎಂದು ರೈತ ಉಮೇಶ ಗುಡ್ಡದ ದೂರಿದರು.
ಪಟ್ಟಣದಲ್ಲಿರುವ 8 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಬೇಸಿಗೆ ಆರಂಭವಾಗಿದ್ದರಿಂದ ನೀರಿನ ತೊಂದರೆ ಆಗದಂತೆ ಈಗಾಗಲೇ ಸ್ಥಳೀಯ ಆಡಳಿತ ಮುಂಜಾಗ್ರತ ಕ್ರಮ ಕೈಗೊಂಡಿದೆ ಎಂದು ಅಣ್ಣಿಗೇರಿ ಪುರಸಭೆ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ತಿಳಿಸಿದರು.
’ದೂರು ನೀಡಿದರೂ ದುರಸ್ತಿ ಮಾಡದ ಇಲಾಖೆ‘
ಅಳ್ನಾವರ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದ್ದು ಜನರ ಬಾಯಾರಿಕೆ ನೀಗಿಸಬೇಕಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಬಂದ್ ಆಗಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ತಾಲ್ಲೂಕು ವ್ಯಾಪ್ತಿಯ 13 ಹಳ್ಳಿಗಳಲ್ಲಿ ಒಟ್ಟು 17 ಶುದ್ದ ನೀರಿನ ಘಟಕಗಳಿದ್ದು ಅದರಲ್ಲಿ ಕೇವಲ ಆರು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ಭಾಗಕ್ಕೆ ಕಾಳಿ ನದಿ ಅಥವಾಮಲಪ್ರಭಾ ನದಿ ನೀರು ನೀಡಿದರೆ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಇಒ ಪ್ರಶಾಂತ ತುರ್ಕಾಣಿ.
’ಸಮೀಪದ ಕಾಶೇನಟ್ಟ ಗ್ರಾಮದಲ್ಲಿನ ಘಟಕ ಮೂರು ವರ್ಷದಿಂದ ಬಂದ್ ಆಗಿದೆ. ದೂರು ನೀಡಿದರೆ ಸಕಾಲಕ್ಕೆ ಕ್ರಮ ಕೈಗೊಳ್ಳಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಿಬ್ಬಂದಿ ಹಿಂದೇಟು ಹಾಕುತ್ತಾರೆ‘ ಎಂದು ಕಾಶೇನಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ದಸ್ತಗೀರ್ ಹುಣಸೀಕಟ್ಟಿ ದೂರಿದರು.
ಹೊನ್ನಾಪೂರದಲ್ಲಿನ ಎರಡು ಘಟಕಗಳಲ್ಲಿ ಅಲ್ಲಂಪ್ರಭು ದೇವಸ್ಥಾನ ಆವರಣದಲ್ಲಿನ ಘಟಕ ಸುಸ್ಥಿತಿಯಲ್ಲಿದ್ದು ಜನರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರ ನಿರಾಸಕ್ತಿಯಿಂದಲೂ ಕೆಲವು ಘಟಕಗಳು ಬಂದ್ ಆಗಿವೆ. ಪ್ರಸ್ತುತ 20 ಲೀಟರ್ ನೀರು ಪಡೆಯಲು ₹5 ನೀಡಬೇಕು. ಅದನ್ನು ₹2 ಗೆ ಇಳಿಸಿದರೆ ಅನುಕೂಲ ಎಂಬುದು ಗ್ರಾಮಸ್ಥರ ಒತ್ತಾಯವಾದರೆ ನಿರ್ವಹಣೆ ವೆಚ್ಚ ಹೆಚ್ಚಾಗಿದ್ದು ದರ ಏರಿಕೆ ಅನಿವಾರ್ಯ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಸಮೀಪದ ಬೆಣಚಿ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಿದ್ದು ಸದ್ಯ ಖಾಸಗಿ ಬೋರವೆಲ್ ಬಾಡಿಗೆ ಪಡೆದು ಜನರಿಗೆ ತೊಂದರೆ ಆಗದಂತೆ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಸದ್ಯದಲ್ಲಿಯೇ ಗ್ರಾಮದೇವಿ ಜಾತ್ರೆ ಇದ್ದು ಬೆಣಚಿ ನೀರಿನ ಸಮಸ್ಯೆ ಬಗೆಹರಿಸುವ ಅನಿವಾರ್ಯತೆ ಇದೆ. ಅಳ್ನಾವರ ಪಟ್ಠಣದಲ್ಲಿ ಕಾಳಿ ನದಿ ನೀರು ನಿರಂತರವಾಗಿ ಪೂರೈಕೆಯಾಗುತ್ತಿದ್ದು ಪಟ್ಟಣದ ಜನರಿಗೆ ಕುಡಿಯುವ ನೀರಿನ ತೊಂದರೆ ಇಲ್ಲ.
ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳದ ಕುರಿತು ಮಾಹಿತಿ ನೀಡಿದ್ದಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.ಜಗದೀಶ ಪಾಟೀಲ, ಕಾರ್ಯನಿರ್ವಾಹಕ ಎಂಜಿನಿಯರ್, ಧಾರವಾಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ತಿಂಗಳಲ್ಲಿ ಮೂರು ವಾರ ನೀರಿನ ಘಟಕ ಬಂದ್ ಆಗಿರುತ್ತದೆ. ನಿರಂತರ ಕಾರ್ಯನಿರ್ವಹಣೆಯೊಂದಿಗೆ ಸ್ವಚ್ಛತೆಗೂ ಆದ್ಯತೆ ನೀಡಬೇಕು.ಸ್ಥಳೀಯ ನಿವಾಸಿ, ಸಿಬಿಟಿ ಹುಬ್ಬಳ್ಳಿ
ತಾಲ್ಲೂಕಿನ ಎಲ್ಲ ಘಟಕಗಳನ್ನು ಸುಸ್ಥಿತಿಯಲ್ಲಿರುವಂತೆ ಮಾಡಿ ಆಯಾ ಗ್ರಾಮ ಪಂಚಾಯಿತಿಗಳಿಗೆ ನಿರ್ವಹಣೆ ಜವಾಬ್ದಾರಿ ನೀಡಬೇಕುದಸ್ತಗೀರ ಹುಣಸೀಕಟ್ಟಿ, ಕಾಶೇನಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಅಳ್ನಾವರ
ಪೂರಕ ಮಾಹಿತಿ: ರಾಜಶೇಖರ ಸುಣಗಾರ, ಜಗದೀಶ ಗಾಣಿಗೇರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.