ADVERTISEMENT

ಆನ್‌ಲೈನ್‌ನಲ್ಲಿ ₹1.25 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 4:05 IST
Last Updated 22 ಜನವರಿ 2022, 4:05 IST

ಹುಬ್ಬಳ್ಳಿ: ತಮ್ಮ ಬ್ಯಾಂಕ್ ಖಾತೆಗೆ ಪಾನ್‌ ಕಾರ್ಡ್ ಅಪ್‌ಡೇಟ್ ಮಾಡುವಂತೆ ಅಪರಿಚಿತ ಸಂಖ್ಯೆಯಿಂದ ಬಂದ ಲಿಂಕ್ ಕ್ಲಿಕ್‌ ಮಾಡಿದ ವ್ಯಕ್ತಿಯೊಬ್ಬರು ತಮ್ಮ ಖಾತೆಯಿಂದ ₹1.25 ಲಕ್ಷ ಕಳೆದುಕೊಂಡಿದ್ದಾರೆ.

‘ನಿಮ್ಮ ಎಸ್‌ಬಿಐ ಯೊನೊ ಬ್ಯಾಂಕ್ ಖಾತೆಯು ಇಂದು ಸ್ಥಗಿತಗೊಳ್ಳಲಿದೆ. ಅದಕ್ಕಾಗಿ, ಖಾತೆಗೆ ಪಾನ್ ಕಾರ್ಡ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ’ ಎಂದು ವಂಚಕ ಸಂದೇಶ ಕಳಿಸಿದ್ದಾನೆ. ಅದನ್ನು ಸತ್ಯ ಎಂದು ನಂಬಿದ ವ್ಯಕ್ತಿ ಲಿಂಕ್ ಕ್ಲಿಕ್‌ ಮಾಡಿದ್ದಾರೆ.

ಆಗ ತಮ್ಮ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿಯನ್ನು ನಮೂದಿಸಿದ್ದಾರೆ. ಅದು ತಪ್ಪಾಗಿದೆ ಎಂಬ ಸಂದೇಶದೊಂದಿಗೆ ಮತ್ತೊಂದು ಒಟಿಪಿ ಬಂದಿದೆ. ವ್ಯಕ್ತಿ ಮತ್ತೆ ಒಟಿಪಿಯನ್ನು ಹಾಕಿದ್ದಾರೆ. ಆಗ ಅವರ ಖಾತೆಯಿಂದ ಒಮ್ಮೆ ₹25 ಸಾವಿರ ಹಾಗೂ ಮತ್ತೊಮ್ಮೆ ₹1 ಲಕ್ಷ ಸೇರಿ ಒಟ್ಟು ₹1.25 ಲಕ್ಷ ಕಡಿತವಾಗಿದೆ. ಹುಬ್ಬಳ್ಳಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ರೈಲಿಗೆ ಸಿಲುಕಿ ಆತ್ಮಹತ್ಯೆ:

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಕ್ಯಾರಕೊಪ್ಪ ರೈಲು ನಿಲ್ದಾಣದ ಬಳಿ ಶುಕ್ರವಾರ ನಡೆದಿದೆ. ಮೃತ ವ್ಯಕ್ತಿಯ ವಯಸ್ಸು 35ರಿಂದ 40 ವರ್ಷವಿದ್ದು, ಗುರುತು ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹುಬ್ಬಳ್ಳಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.