ADVERTISEMENT

ಹುಬ್ಬಳ್ಳಿ: ಚಿನ್ನದ ವ್ಯಾಪಾರಿಗೆ ₹19 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 4:57 IST
Last Updated 26 ಜನವರಿ 2023, 4:57 IST

ಹುಬ್ಬಳ್ಳಿ: ಹರಾಜು ಹಾಕಲು ಮುಂದಾಗಿದ್ದ ಚಿನ್ನಾಭರಣಗಳನ್ನು ಖರೀದಿಸಲು ಮುಂದಾದ ಆಭರಣ ವ್ಯಾಪಾರಿಗೆ ದೇಶಪಾಂಡೆ ನಗರದ ಎಚ್‌.ಡಿ.ಎಫ್‌.ಸಿ ಬ್ಯಾಂಕ್‌ ಅಧಿಕಾರಿಗಳು ಹಾಗೂ ಇತರರು ₹19 ಲಕ್ಷ ವಂಚಿಸಿದ್ದಾರೆ.

ಈ ಕುರಿತು ಗಣೇಶ ಪಾರ್ಕ್‌ನ ಚಿನ್ನದ ವ್ಯಾಪಾರಿ ಶುಭಂ ಪಾಟೀಲ ಅವರು, ನೀಡಿದ ದೂರಿನ ಮೇರೆಗೆ ರವೀಂದ್ರ ದೇಶಮುಖ, ಅಭಿಷೇಕ, ಚನ್ನಪ್ಪ, ಗಣೇಶ, ಹರೀಶ, ಸಲ್ಮಾನ ಹಾಗೂ ಬ್ಯಾಂಕ್‌ ಸಿಬ್ಬಂದಿಯಾದ ಆನಂದ, ಓಂಕಾರ, ಮಾನಪ್ಪ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಗಣೇಶ ಎಂಬಾತ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 545 ಗ್ರಾಂ ಚಿನ್ನಾಭರಣ ಅಡವಿಟ್ಟಿದ್ದು, ಅದನ್ನು ಬ್ಯಾಂಕ್‌ನವರು ದಂಡ ನಿಗದಿಪಡಿಸಿ ಹರಾಜು ಹಾಕುತ್ತಿದ್ದಾರೆ. ಅದನ್ನು ಬಿಡಿಸಿಕೊಂಡು ಖರೀದಿ ಮಾಡುತ್ತೀರ’ ಎಂದು ಶುಭಂ ಅವರಿಗೆ ರವೀಂದ್ರ ಹೇಳಿದ್ದ. ಶುಭಂ ಅವರು ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಗಣೇಶ ಎಂಬುವರು ಆಭರಣ ಅಡವಿಟ್ಟು ಪಡೆದಿರುವ ಸಾಲ ತುಂಬಿದರೆ, ಆಭರಣ ನೀಡುವುದಾಗಿ ಬ್ಯಾಂಕ್‌ನ ಮುಖ್ಯ ಮತ್ತು ಉಪ ವ್ಯವಸ್ಥಾಪಕರು ಹೇಳಿದ್ದಾರೆ.

ADVERTISEMENT

ಅದರಂತೆ 2022ರ ನ. 3ರಂದು ಗಣೇಶ ಅವರ ಖಾತೆಗೆ ಶುಭಂ ಅವರು ₹19 ಲಕ್ಷವನ್ನು ಆರ್‌ಟಿಜಿಎಸ್‌ ಮಾಡಿದ್ದಾರೆ. ಆದರೆ, ಇದುವರೆಗೆ ಅವರಿಗೆ ಆಭರಣವನ್ನೂ ನೀಡದೆ, ಹಣವನ್ನೂ ಮರಳಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಕಲಿ ಚಿನ್ನಕ್ಕೆ ₹2ಲಕ್ಷ ಸಾಲ: ಕಿಮ್ಸ್‌ ಆವರಣದ ಕೆನರಾ ಬ್ಯಾಂಕ್‌ ಶಾಖೆಯಲ್ಲಿ, ಬ್ಯಾಂಕ್‌ನ ಬಂಗಾರ ಪರೀಕ್ಷಕನ ಸಹಕಾರದಿಂದ ಮಹಿಳೆಯೊಬ್ಬಳು ನಕಲಿ ಬಂಗಾರ ಅಡವಿಟ್ಟು ₹2 ಲಕ್ಷ ಸಾಲ ಪಡೆದು ವಂಚಿಸಿರುವ ಕುರಿತು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳವಾರ ಪೇಟೆಯ ಉಷಾ ಅಣ್ವೇಕರ ಮತ್ತು ನಾಗಶೆಟ್ಟಿ ಕೊಪ್ಪದ ನಿವಾಸಿ, ಬಂಗಾರ ಪರೀಕ್ಷಕ ನಾಗರಾಜ ಪುಟ್ಲೇಕರ್‌ ಆರೋಪಿಗಳು. 2022ರ ಮೇ 31ರಂದು ಉಷಾ ನಕಲಿ ಬಂಗಾರ ತಂದು, ನಾಗರಾಜ ಸಹಕಾರದಿಂದ ಅಸಲಿಯೆಂದು ನಂಬಿಸಿ ಸಾಲ ಪಡೆದಿದ್ದಳು. ವಾರ್ಷಿಕ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನಾಭರಣಗಳನ್ನು, ಮತ್ತೊಬ್ಬ ಪರೀಕ್ಷಕರಿಂದ ಪರೀಕ್ಷಿಸುವಾಗ ಉಷಾ ಅಡವಿಟ್ಟ ಬಂಗಾರ ನಕಲಿ ಎಂದು ತಿಳಿದು ಬಂದಿದೆ. ಆರೋಪಿಗಳಿಬ್ಬರಿಂದ ಹಣ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಉಪಕರಣ ಕಳವು: ಇಲ್ಲಿನ ಯಲ್ಲಾಪುರ ಓಣಿಯ ಮನೆಯೊಂದರ ಮೇಲಿದ್ದ ಮೊಬೈಲ್‌ ಟವರ್‌ನ ₹10.34 ಲಕ್ಷ ಮೌಲ್ಯದ ಉಪಕರಣಗಳನ್ನು ಕಳವು ಮಾಡಲಾಗಿದೆ. ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಳಿಪಟ ಉತ್ಸವದಲ್ಲಿ ಹೊಡೆದಾಟ: ನಗರದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಯುವಕರ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಆರ್‌ಸಿಬಿ ಎಂದು ಘೊಷಣೆ ಕೂಗಿದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಜಗಳವಾಗಿ, ಹಲ್ಲೆವರೆಗೂ ತಲುಪಿದೆ ಎನ್ನಲಾಗಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.