ADVERTISEMENT

ಮನೆಮುಂದೆಯೇ 24X7 ಚರಂಡಿ ನೀರು!

ಆರೂಢನಗರದ ನಿವಾಸಿಗಳಿಗೆ ಹೊರೆಯಾದ ಖಾಲಿಸೈಟಿನ ಕಸ

ಪ್ರಮೋದ
Published 16 ಫೆಬ್ರುವರಿ 2021, 19:30 IST
Last Updated 16 ಫೆಬ್ರುವರಿ 2021, 19:30 IST
ಹುಬ್ಬಳ್ಳಿಯ ಏಕತಾ ಕಾಲೊನಿಯ ರಸ್ತೆ ಮೇಲೆ ಹರಿಯುವ ಚರಂಡಿ ನೀರು –ಪ್ರಜಾವಾಣಿ ಚಿತ್ರ/ಗುರು ಹಬೀಬ
ಹುಬ್ಬಳ್ಳಿಯ ಏಕತಾ ಕಾಲೊನಿಯ ರಸ್ತೆ ಮೇಲೆ ಹರಿಯುವ ಚರಂಡಿ ನೀರು –ಪ್ರಜಾವಾಣಿ ಚಿತ್ರ/ಗುರು ಹಬೀಬ   

ಹುಬ್ಬಳ್ಳಿ: ಅವಳಿ ನಗರಗಳ ಜನರಿಗೆ ದಿನದ 24 ಗಂಟೆಯೂ ಕುಡಿಯುವ ನೀರು ಒದಗಿಸಲು ಸ್ಥಳೀಯ ಆಡಳಿತ ಸಂಸ್ಥೆಗಳು ಯೋಜನೆ ರೂಪಿಸಿವೆ. ಆದರೆ ಆನಂದ ನಗರ ವ್ಯಾಪ್ತಿಯ ಏಕತಾ ಕಾಲೊನಿಯಲ್ಲಿ ರಸ್ತೆ ಮೇಲೆ ದಿನಪೂರ್ತಿ ಚರಂಡಿ ನೀರು ಹರಿದರೂ ಯಾರೂ ಕೇಳುವುವರೇ ಇಲ್ಲದಂತಾಗಿದೆ.

ಇದರಿಂದಾಗಿ ಎಕತಾ ಕಾಲೊನಿ, ಕೃಷ್ಣಗಿರಿ ಮತ್ತು ಅಂಬಣ್ಣವರ ಲೇ ಔಟ್‌ ನಿವಾಸಿಗಳು ಐದಾರು ವರ್ಷಗಳಿಂದ ನಿತ್ಯ ಕೊಳಚೆ ನೀರಿನ ವಾಸನೆಯಲ್ಲಿಯೇ ದಿನಗಳನ್ನು ದೂಡಬೇಕಾಗಿದೆ. ಏಕತಾ ಕಾಲೊನಿ ಮತ್ತು ಕೃಷ್ಣಗಿರಿ ಬಡಾವಣೆಗಳನ್ನು ಬೇರ್ಪಡಿಸುವ ಮಧ್ಯದ ರಸ್ತೆಯಲ್ಲಿ ಸಣ್ಣದಾದ ಉದ್ಯಾನವಿದ್ದು ಅದರ ಮುಂದೆಯೇ ಒಳಚರಂಡಿ ತುಂಬಿ ಹರಿಯುತ್ತಿದೆ.

ಪಾಲಿಕೆ ಸಿಬ್ಬಂದಿ ದುರಸ್ತಿ ಮಾಡಿ ಹೋದ ಮೂರ್ನಾಲ್ಕು ದಿನಗಳಲ್ಲಿ ಮತ್ತೆ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತದೆ. ಕೃಷ್ಣಗಿರಿ ಬಡಾವಣೆಗೆ ಹೋಗುವ ರಸ್ತೆ ಇಳಿಜಾರಿನಲ್ಲಿರುವ ಕಾರಣ ಚರಂಡಿ ನೀರು ರಸ್ತೆಗುಂಟವೇ ಹಾದು ಹೋಗುತ್ತದೆ. ರಸ್ತೆ ಬದಿಯಲ್ಲಿ ಪುಷ್ಪಾ ಜೋಶಿ ಎನ್ನುವವರ ಮನೆಯಿದ್ದು ಈ ಮನೆಮುಂದೆ ಯಾವಾಗಲೂ ಚರಂಡಿ ನೀರು ಹರಿಯುತ್ತದೆ. ಇದೇ ರಸ್ತೆಯಲ್ಲಿ ಹಾದು ಮಕ್ಕಳು ಶಾಲೆಗೆ ಹೋಗಬೇಕಾಗಿದೆ.

ADVERTISEMENT

ಒಳಚರಂಡಿಯ ಕೊಳವೆಗಳು ಸಣ್ಣದಾಗಿದ್ದರಿಂದ ಪದೇ ಪದೇ ಸಮಸ್ಯೆ ಎದುರಾಗುತ್ತಿದೆ. ಒಮ್ಮೆ ದೊಡ್ಡ ಕೊಳವೆ ಅಳವಡಿಸಿದರೆ ಕಾಯಂ ಪರಿಹಾರ ಸಿಗುತ್ತದೆ ಎಂದು ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದರು.

ಕೃಷ್ಣಗಿರಿಯಲ್ಲಿ ಉದ್ಯಾನದ ಜಾಗ ಮಾತ್ರ ಕಾಣುತ್ತಿದೆ. ಮಕ್ಕಳ ಆಟಕ್ಕೆ, ಹಿರಿಯರ ವಾಯುವಿಹಾರಕ್ಕೆ ಸುಂದರ ತಾಣವಾಗಬೇಕಿದ್ದ ಉದ್ಯಾನದಲ್ಲಿ ಕಸ ಹಾಗೂ ಕಲ್ಲುಗಳ ರಾಶಿ ತುಂಬಿಕೊಂಡಿದೆ. ಕಾಂಪೌಂಡ್‌ ಕೂಡ ಇಲ್ಲದ್ದರಿಂದ ಪ್ರಾಣಿಗಳು ಉದ್ಯಾನದೊಳಕ್ಕೆ ಬರುತ್ತವೆ. ಗಣಪತಿ ಹಾಗೂ ಅಯ್ಯಪ್ಪಸ್ವಾಮಿ ದೇವಸ್ಥಾನಗಳು ಪ್ರಮುಖವಾಗಿರುವ ಆರೂಢ ನಗರದಲ್ಲಿ ಹಲವು ಸೈಟ್‌ಗಳು ಖಾಲಿಯಿದ್ದು, ಇವು ಸ್ಥಳೀಯರಿಗೆ ‘ಹೊರೆ’ಯಾಗಿವೆ.

‘ಬಡಾವಣೆಯಲ್ಲಿರುವ ಖಾಲಿ ಸೈಟಿನಲ್ಲಿ ಕಸ ತಂದು ಎಸೆಯುತ್ತಾರೆ. ಪ್ರಾಣಿಗಳು ಸತ್ತರೂ ಇಲ್ಲೇ ತಂದು ಹಾಕುತ್ತಾರೆ. ಸೈಟುಗಳೇ ತಿಪ್ಪೆಗುಂಡಿಗಳಂತಾಗಿದ್ದು, ಆ ಜಾಗದಲ್ಲಿ ಕಸತುಂಬಿಕೊಂಡು ರಸ್ತೆಗೂ ಬೀಳುತ್ತಿದೆ. ಇದರಿಂದಾಗಿ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲಾ ವಾಹನಗಳು ಈ ಬಡಾವಣೆಗೆ ಬರುತ್ತಿಲ್ಲ’ ಎಂದು ಆರೂಢ ನಗರದ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

***

ಐದಾರು ವರ್ಷಗಳಿಂದ ಒಳಚರಂಡಿ ನೀರು ಮನೆಮುಂದೆ ಹರಿಯುತ್ತಿವೆ. ದೂರು ನೀಡಿದಾಗ ದುರಸ್ತಿ ಮಾಡುತ್ತಾರೆ. ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಅದೇ ಸಮಸ್ಯೆಯಾಗುತ್ತದೆ.

- ಪುಷ್ಪಾ ಜೋಶಿ, ಏಕತಾ ಕಾಲೊನಿ ನಿವಾಸಿ

ಬಡಾವಣೆಯ ಜನ ತೆರಿಗೆ ಕಟ್ಟಿದರೂ ಸಮರ್ಪಕ ಸೌಲಭ್ಯಗಳಿಲ್ಲ. ಒಳಚರಂಡಿ ಅವ್ಯವಸ್ಥೆ ಸರಿಪಡಿಸಿ ರಸ್ತೆ ದುರಸ್ತಿ ಮಾಡಿಸಬೇಕು. ಜನರಿಗೆ ಉತ್ತಮ ವಾತಾವರಣ ಕಲ್ಪಿಸಲು ಉದ್ಯಾನ ಸುಂದರಗೊಳಿಸಬೇಕು.

- ಜಿ.ಬಿ. ಮಲ್ಲಣ್ಣನವರ ಕೃಷ್ಣಗಿರಿ ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.