ADVERTISEMENT

2.5 ಲಕ್ಷ ರೂ. ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 7:35 IST
Last Updated 17 ಫೆಬ್ರುವರಿ 2012, 7:35 IST

ಧಾರವಾಡ: ರಸ್ತೆ ಕೆಳಗಿನ ಚರಂಡಿಯೊಳಗೆ ಇಳಿದು ಸ್ವಚ್ಛ ಗೊಳಿಸುತ್ತಿದ್ದಾಗ ಮೃತಪಟ್ಟ ಯಾಕೂಬ್ ಯಲಕ್‌ಪಾಟಿ ಅವರ ಕುಟುಂಬಕ್ಕೆ ಪಾಲಿಕೆ ವತಿಯಿಂದ 2.5 ಲಕ್ಷ ರೂ. ತುರ್ತು ಪರಿಹಾರಧನ ನೀಡಲಾಯಿತು.

ಮೇಯರ್ ಪೂರ್ಣಾ ಪಾಟೀಲ, ಆಯುಕ್ತ ಡಾ. ಕೆ.ವಿ.ತ್ರಿಲೋಕಚಂದ್ರ ಅವರು ಪಾಲಿಕೆ ಸದಸ್ಯರು, ಪೌರ ಕಾರ್ಮಿಕ ಸಂಘದ ಸದಸ್ಯರ ಸಮ್ಮುಖದಲ್ಲಿ ಚೆಕ್ ಅನ್ನು ಯಾಕೂಬ್ ಅವರ ಪತ್ನಿಗೆ ನೀಡಿದರು.

`ಮೃತನ ಕುಟುಂಬಕ್ಕೆ ಪಾಲಿಕೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಅನುಕಂಪದ ಆಧಾರದ ಮೇಲೆ ಕಾಯಂ ನೌಕರಿ ಸಹ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಈ ಪ್ರಕರಣ ಕುರಿತು ಎರಡು ದಿನದೊಳಗೆ ವರದಿ ಸಲ್ಲಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಸೂಚಿಸಲಾಗಿದ್ದು, ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಡಾ. ತ್ರಿಲೋಕಚಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಸ್ತೆ ಬದಿಯ ಚರಂಡಿ ಸ್ವಚ್ಛಗೊಳಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಈತನೊಂದಿಗಿದ್ದ ಮತ್ತೊಬ್ಬ ಪೌರ ಕಾರ್ಮಿಕ ನಲ್ಲಪ್ಪ ಅನಂತಪುರ ಪಾರಾಗಿದ್ದಾರೆ. ಯಾಕೂಬ್ ಅವರ ಸಾವು ಹೇಗೆ ಸಂಭವಿಸಿದೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗುತ್ತದೆ ಎಂದು ಹೇಳಿದರು.

ಒಳಚರಂಡಿ ಸ್ವಚ್ಛತೆಗೆ ಯಂತ್ರೋಪಕರಣಗಳನ್ನು ಬಳಸಲಾ ಗುತ್ತದೆ. ತೆರೆದ ಚರಂಡಿಗಳಿಗೆ ಈ ಉಪಕರಣಗಳನ್ನು ಬಳಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಘನತ್ಯಾಜ್ಯ ವಸ್ತುಗಳು ಈ  ಚರಂಡಿ ಯ್ಲ್ಲಲಿ ಇದ್ದಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದರು.

ಪೌರ ಕಾರ್ಮಿಕರ ಹಾಜರಾತಿ ಪಡೆಯಲು ಬಯೋಮೆಟ್ರಿಕ್ಸ್ ಪದ್ಧತಿ ಅಳವಡಿಸಲಾಗುತ್ತಿದೆ. ಇದರಿಂದ ಕೆಲಸ ಮಾಡಿದವರು ಮಾತ್ರ ಹಾಜರಾತಿ ನೀಡಬಹುದು. ಈಗಾಗಲೇ ಪ್ರಾಯೋಗಿಕವಾಗಿ ಹುಬ್ಬಳ್ಳಿಯ ಒಂದು ವಾರ್ಡಿನಲ್ಲಿ ಆರಂಭಿಸಲಾಗಿದೆ. ಎಲ್ಲ ವಾರ್ಡುಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.